ತುಮಕೂರು ಕ್ಷೇತ್ರ ಗೆಲ್ಲಲು ಕೈ-ಕಮಲ ಕಸರತ್ತು: ಇವರೇ ನೋಡಿ ಕಾಂಗ್ರೆಸ್-ಬಿಜೆಪಿ ಅಭ್ಯರ್ಥಿ!
ತುಮಕೂರು, ಮಾರ್ಚ್ 08: ಲೋಕಸಭಾ ಚುನಾವಣೆ ಹಿನ್ನೆಲೆ ರಾಜ್ಯ ರಾಜಕೀಯದಲ್ಲಿ ಚುನಾವಣಾ ರಂಗು ಜೋರಾಗಿದೆ. ಸದ್ಯ ಬಿಜೆಪಿ 25 ಲೋಕಸಭಾ ಕ್ಷೇತ್ರಗಳಲ್ಲಿ ಹಾಲಿ ಸಂಸದರಿದ್ದು, ಮುಂದಿನ ಚುನಾವಣೆಯಲ್ಲಿ 28 ಲೋಕಸಭಾ ಕ್ಷೇತ್ರಗಳ ಪೈಕಿ 28 ಕ್ಷೇತ್ರಗಳನ್ನ ಗೆಲ್ಲುವ ನಿಟ್ಟಿನಲ್ಲಿ ಜೆಡಿಎಸ್ ಜೊತೆಗೆ ಮೈತ್ರಿಯಾಗಿದ್ದು, ತುಮಕೂರು ಕ್ಷೇತ್ರ ಈ ಬಾರಿ ಬಿಜೆಪಿಗೆ ಕೈ ತಪ್ಪಲಿದ್ಯಾ ಎನ್ನುವ ಚರ್ಚೆ ಶುರುವಾಗಿದೆ.
ಈಗಾಗಲೇ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎರಡು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡ ಮಾಜಿ ಸಚಿವ ವಿ ಸೋಮಣ್ಣ ಅವರು, ತುಮಕೂರು ಲೋಕಸಭಾ ಕ್ಷೇತ್ರದ ಟಿಕೆಟ್ ಗಾಗಿ ಬಿಜೆಪಿ ಹೈಕಮಾಂಡ್ ನಾಯಕರ ಮುಂದೆ ಬೇಡಿಕೆ ಇಟ್ಟಿದ್ದಾರೆ. ಇತ್ತ ತುಮಕೂರಿನಲ್ಲಿ ವಿ ಸೋಮಣ್ಣ ಅವರ ಸ್ಪರ್ಧೆ ಕುರಿತು ತುಮಕೂರು ಕ್ಷೇತ್ರದ ನಾಯಕರಿಂದ ಬಾರಿ ವಿರೋಧ ಕೇಳಿ ಬಂದಿದೆ ಎನ್ನಲಾಗಿದೆ.

ತುಮಕೂರು ಲೋಕಸಭಾ ಕ್ಷೇತ್ರದ ಕುರಿತು ಸಚಿವ ಕೆ ಎನ್ ರಾಜಣ್ಣ ಮಾತನಾಡಿ, ಮುಂಬರುವ ಲೋಕಸಭೆ ಚುನಾವಣೆಗೆ ತುಮಕೂರು ಭಾಗದಲ್ಲಿ ಕಾಂಗ್ರೆಸ್‌ನ ಎಸ್‌ಪಿ ಮುದ್ದಹನುಮೇಗೌಡ ಅವರು ಬಿಜೆಪಿಯ ವಿ ಸೋಮಣ್ಣ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ ಎಂದು ಗುರುವಾರ ಹೇಳಿದ್ದಾರೆ.ತುಮಕೂರು ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಅಧಿಕೃತವಾಗಿ ಅಂತಿಮಗೊಳಿಸಿಲ್ಲ.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಣ್ಣ, ವಿ.ಸೋಮಣ್ಣ ಅವರಿಗೆ ಬಿಜೆಪಿ ತುಮಕೂರು ಟಿಕೆಟ್ ನೀಡಲಿದೆ ಎಂಬ ಮಾಹಿತಿ ನನಗಿದೆ, ಕಾಂಗ್ರೆಸ್ ಮುದ್ದಹನುಮೇಗೌಡ ಅವರನ್ನು ಕಣಕ್ಕಿಳಿಸುತ್ತದೆ. 2019 ರ ಲೋಕಸಭೆ ಚುನಾವಣೆಯಲ್ಲಿ ಮರುನಾಮಕರಣ ನಿರಾಕರಿಸಿದ ನಂತರ ಬಿಜೆಪಿಗೆ ಸೇರಿದ್ದ ಕಾಂಗ್ರೆಸ್ ಮಾಜಿ ಸಂಸದ ಮುದ್ದಹನುಮೇಗೌಡ ಅವರು ಕಳೆದ ತಿಂಗಳಷ್ಟೇ ಕಾಂಗ್ರೆಸ್‌ಗೆ ಮರು ಸೇರ್ಪಡೆಗೊಂಡಿದ್ದಾರೆ.
ದಲಿತ ಸಿಎಂ ವಿಚಾರವಾಗಿ ರಾಜಣ್ಣ ಅವರು ಮಾತನಾಡಿ, ಚ್‌ಸಿ ಮಹದೇವಪ್ಪ ಅವರು ದಲಿತ ಸಿಎಂ ಬೇಕು ಎಂಬ ಬೇಡಿಕೆ ಮುಂದಿಡುವುದರಲ್ಲಿ ಯಾವುದೇ ತಪ್ಪು ಮಾಡಿಲ್ಲ, ಮುಖ್ಯಮಂತ್ರಿ ಬದಲಾವಣೆಯಾದರೆ ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕು' ಎಂದರು.
ಡಿಕೆ ಶಿವಕುಮಾರ್ ಮೇಲಿನ ಪ್ರಕರಣಗಳ ರದ್ದತಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದಿರುವ ರಾಜಣ್ಣ, 'ದಲಿತರನ್ನು ಸಿಎಂ ಮಾಡಬೇಕೆಂದು ಇಷ್ಟು ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದೇವೆ. ಶಿವಕುಮಾರ್ ಸಿಎಂ ಆಗುವುದನ್ನು ತಡೆಯುವುದಿಲ್ಲ ಎಂದು ರಾಜಣ್ಣ ಹೇಳಿದರು.
ಶೀಘ್ರವೇ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ : ಡಿಕೆಶಿ
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಹೈಕಮಾಂಡ್ ನಾಯಕರು ಶೀಘ್ರವೇ ಬಿಡುಗಡೆ ಮಾಡಲಿದ್ದಾರೆ" ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು. ಲೋಕಸಭೆ ಚುನಾವಣೆ ಸಂಬಂಧ ನಿನ್ನೆ ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಇತರ ನಾಯಕರ ಸಮ್ಮುಖದಲ್ಲಿ ಚರ್ಚೆ ನಡೆಸಲಾಗಿದೆ. ಎಷ್ಟು ಅಭ್ಯರ್ಥಿಗಳ ಪಟ್ಟಿ ಅಂತಿಮವಾಗಿದೆ, ಯಾರ ಹೆಸರು ಅಂತಿಮವಾಗಿದೆ ಎಂದು ನಾನು ಬಹಿರಂಗಪಡಿಸಲು ತಯಾರಿಲ್ಲ. ಎಐಸಿಸಿ ನಾಯಕರು ಮೊದಲ ಪಟ್ಟಿ ಅಂತಿಮಗೊಳಿಸಿ ಶೀಘ್ರವೇ ಬಿಡುಗಡೆ ಮಾಡುತ್ತಾರೆ. ನಾವು ಸಭೆಯಲ್ಲಿ ಶೇ.50ರಷ್ಟು ಕ್ಷೇತ್ರಗಳ ಬಗ್ಗೆ ಮಾತ್ರ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದರು.
ಮುಖ್ಯಮಂತ್ರಿ ಸ್ಥಾನದ ಬಗ್ಗೆ ಸಚಿವ ಮಹದೇವಪ್ಪ ಅವರ ಹೇಳಿಕೆ ಬಗ್ಗೆ ಕೇಳಿದಾಗ, "ಒಳ್ಳೆಯದಾಗಲಿ, ಆಸೆ ಪಡುವುದರಲ್ಲಿ ತಪ್ಪಿಲ್ಲ. ಯಾರ್ಯಾರೋ ಏನೇನೋ ಆಸೆ ಪಡುತ್ತಾರೆ. ಮಹದೇವಪ್ಪ ಅವರು ಆಸೆಪಡುವುದರಲ್ಲಿ ತಪ್ಪಿಲ್ಲ" ಎಂದು ತಿಳಿಸಿದರು.
ಖರ್ಗೆ ಅವರು ಕರ್ನಾಟಕದಿಂದ ಸ್ಪರ್ಧೆ ಮಾಡುತ್ತಾರಾ ಎಂದು ಕೇಳಿದಾಗ, "ಅವರು ಎಐಸಿಸಿ ಅಧ್ಯಕ್ಷರು. ಅನೇಕರು ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಅವರ ಕ್ಷೇತ್ರದಲ್ಲಿ ಬೇರೆ ಹೆಸರು ಪ್ರಸ್ತಾಪಿಸಿಲ್ಲ. ಅವರು ದೇಶದಾದ್ಯಂತ ಪ್ರವಾಸವನ್ನು ಮಾಡಬೇಕಿದೆ. ಹೀಗಾಗಿ ಅಂತಿಮವಾಗಿ ಅಧ್ಯಕ್ಷರೇ ಸ್ಪರ್ಧೆ ಬಗ್ಗೆ ತೀರ್ಮಾನ ಮಾಡುತ್ತಾರೆ" ಎಂದು ತಿಳಿಸಿದರು.












Click it and Unblock the Notifications