IPS Vartika Katiyar: ಡಿ. ರೂಪಾ ವಿರುದ್ಧ ದೂರು, ವರ್ತಿಕಾ ಕಟಿಯಾರ್ ವರ್ಗಾವಣೆ
ಬೆಂಗಳೂರು, ಮಾರ್ಚ್ 03: ಕರ್ನಾಟಕದ ಇಬ್ಬರು ಐಪಿಎಸ್ ಅಧಿಕಾರಿಗಳ ಜಟಾಪಟಿ ಮತ್ತೆ ಸುದ್ದಿಯಲ್ಲಿದೆ. ಡಿ. ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರು ನೀಡಿದ್ದ ಐಪಿಎಸ್ ಅಧಿಕಾರಿ ವರ್ತಿಕಾ ಕಟಿಯಾರ್ ಅವರನ್ನು ವರ್ಗಾವಣೆ ಮಾಡಲಾಗಿದೆ. ವರ್ತಿಕಾ ಕಟಿಯಾರ್ 2010ನೇ ಬ್ಯಾಚ್ ಐಪಿಎಸ್ ಅಧಿಕಾರಿ.
ಸೋಮವಾರ ವರ್ತಿಕಾ ಕಟಿಯಾರ್ ವರ್ಗಾವಣೆಗೊಳಿಸಿ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ನಾಗಪ್ಪ ಎಸ್ ಪರೀತ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಸೇವೆಗಳು-4) ಆದೇಶವನ್ನು ಹೊರಡಿಸಿದ್ದಾರೆ.

ಸರ್ಕಾರದ ಆದೇಶದಂತೆ ವರ್ತಿಕಾ ಕಟಿಯಾರ್, ಐಪಿಎಸ್ (ಕೆಎನ್: 2010) ಆಂತರಿಕ ಭದ್ರತಾ ವಿಭಾಗ (ಎಸ್‌ಐಡಿ) ಡಿಐಜಿ, ಬೆಂಗಳೂರು ಅವರನ್ನು ತಕ್ಷಣದಿಂದಲೇ ವರ್ಗಾವಣೆ ಮಾಡಿ ಮುಂದಿನ ಆದೇಶದ ತನಕ ಉಪ ಮಹಾನಿರೀಕ್ಷಕ ಮತ್ತು ಹೆಚ್ಚುವರಿ ಕಮಾಂಡಂಟ್ ಜನರಲ್, ಗೃಹ ರಕ್ಷಕರು ಮತ್ತು ಹುದ್ದೆಯ ಹೆಚ್ಚುವರಿ ನಿರ್ದೇಶಕ, ನಾಗರಿಕ ರಕ್ಷಣಾ ವಿಭಾಗ, ಬೆಂಗಳೂರು ಖಾಲಿ ಹುದ್ದೆಗೆ ನೇಮಕ ಮಾಡಲಾಗಿದೆ.
ಡಿ. ರೂಪಾ ವಿರುದ್ಧ ದೂರು: ವರ್ತಿಕಾ ಕಟಿಯಾರ್ ಆಂತರಿಕ ಭದ್ರತಾ ದಳದ (ಐಎಸ್‌ಡಿ) ಐಜಿಪಿ ಡಿ. ರೂಪಾ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ದೂರು ನೀಡಿದ್ದಾರೆ ಎಂಬುದು ಭಾನುವಾರ ದೊಡ್ಡ ಸುದ್ದಿಯಾಗಿತ್ತು. ಐಎಸ್‌ಡಿ ವಿಭಾಗದ ಐಜಿಪಿ ಮತ್ತು ಡಿಐಜಿ ನಡುವಿನ ಜಟಾಪಟಿ ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿತ್ತು.
ಕೆಳ ಹಂತದ ಸಿಬ್ಬಂದಿಯನ್ನು ಬಳಕೆ ಮಾಡಿಕೊಂಡು ನನ್ನ ಕೊಠಡಿಯಲ್ಲಿ ದಾಖಲೆಗಳನ್ನು ಇರಿಸಿದ್ದಾರೆ ಎಂದು ಡಿ. ರೂಪಾ ವಿರುದ್ಧ ವರ್ತಿಕಾ ಕಟಿಯಾರ್ ದೂರು ನೀಡಿದ್ದರು. ಈ ದೂರಿನ ಕುರಿತು ಮಾಧ್ಯಮಗಳಲ್ಲಿ ವರದಿಗಳು ಪ್ರಸಾರವಾಗಿದ್ದವು. ಸೋಮವಾರ ವರ್ತಿಕಾ ಕಟಿಯಾರ್ ವರ್ಗಾವಣೆಗೊಳಿಸಲಾಗಿದೆ.
ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಅಧಿಕಾರಿ ಡಿ. ರೂಪಾ ವಿರುದ್ಧದ ಜಟಾಪಟಿ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಆದರೆ ಈಗ ತಮ್ಮದೇ ಇಲಾಖೆಯ ಡಿಜಿಪಿ ರೂಪಾ ವಿರುದ್ಧ ದೂರು ನೀಡಿದ್ದು, ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಯನ್ನು ಹುಟ್ಟುಹಾಕಿತ್ತು.
ವರ್ತಿಕಾ ಕಟಿಯಾರ್ 2024ರ ಸೆಪ್ಟೆಂಬರ್ 6ರಂದು ಹೆಡ್ ಕಾನ್ಸ್‌ಟೇಬಲ್ ಟಿ. ಎಸ್. ಮಂಜುನಾಥ್, ಗೃಹ ರಕ್ಷಕ ದಳದ ಸಿಬ್ಬಂದಿ ಮಲ್ಲಿಕಾರ್ಜುನ್ ನಿಯಂತ್ರಣ ಕೊಠಡಿಯಿಂದ ಬೀಗ ತೆಗೆದುಕೊಂಡು ಬಂದು ನನ್ನ ಅನುಮತಿ ಇಲ್ಲದೇ ಕಛೇರಿ ಬಾಗಿಲು ತೆರೆದಿದ್ದಾರೆ. ಕೆಲವು ಕಡತಗಳನ್ನು ಮಲ್ಲಿಕಾರ್ಜುನ್ ನನ್ ಕಛೇರಿಯಲ್ಲಿಇಟ್ಟು, ಅದರ ಫೋಟೋಗಳನ್ನು ತೆಗೆದು ಡಿ. ರೂಪಾ ಅವರಿಗೆ ವಾಟ್ಸಪ್ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.
ಈ ವಿಚಾರ ನನ್ನ ಗಮನಕ್ಕೆ ಬಂದಾಗ ಮಂಜುನಾಥ್, ಮಲ್ಲಿಕಾರ್ಜುನ್ ವಿಚಾರಿಸಿದಾಗ ಡಿ. ರೂಪಾ ಸೂಚನೆ ಮೇರೆಗೆ ಬಾಗಿಲು ತೆರೆದು ಕಡತಗಳನ್ನು ಇಟ್ಟಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ ಎಂದು ವರ್ತಿಕಾ ಕಟಿಯಾರ್ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದ್ದ ದೂರಿನಲ್ಲಿ ವಿವರಣೆ ನೀಡಿದ್ದರು.
ಈ ದೂರಿನ ನಡುವೆಯೇ ಕರ್ನಾಟಕ ಸರ್ಕಾರ ಸೋಮವಾರ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿದೆ. ವರ್ತಿಕಾ ಕಟಿಯಾರ್ ನೀಡಿರುವ ದೂರಿನ ಕುರಿತು ಯಾವ ಕ್ರಮ ಕೈಗೊಳ್ಳಲಾಗುತ್ತದೆ? ಎಂದು ಕಾದು ನೋಡಬೇಕಿದೆ.












Click it and Unblock the Notifications