ಲೋಕಸಭೆ ಚುನಾವಣೆ ಬಳಿಕ ಮಂಕಾದ ಐಎನ್‌ಡಿಐಎ: ಮುಂದೇನು?
ಬೆಂಗಳೂರು, ಡಿಸೆಂಬರ್ 09: ಬಿಜೆಪಿ ನೇತೃತ್ವದ ಎನ್ ಡಿಎಗೆ ಸೆಡ್ಡು ಹೊಡೆಯಲೆಂದೇ ಕಾಂಗ್ರೆಸ್ ನೇತೃತ್ವದಲ್ಲಿ ಹುಟ್ಟಿಕೊಂಡ ಐಎನ್‌ಡಿಐಎ ಮೊದಲ ಲೋಕಸಭೆ ಚುನಾವಣೆ ಕಳೆಯುತ್ತಿದ್ದಂತೆಯೇ ಮಂಕಾಗುತ್ತಿದ್ದು, ಒಕ್ಕೂಟದಲ್ಲಿದ್ದ ಕೆಲವು ಪಕ್ಷಗಳು ಅಂತರ ಕಾಪಾಡಿಕೊಳ್ಳುತ್ತಿರುವುದು, ನಾಯಕರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿರುವುದು ಇದೆಲ್ಲವನ್ನು ಗಮನಿಸಿದರೆ ಬಹುಶಃ ಐಎನ್ ಡಿಐಎನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಗೊತ್ತಾಗುತ್ತಿರುವುದಲ್ಲದೆ, ಬಿರುಕು ಮೂಡುತ್ತಿರುವುದು ಎದ್ದು ಕಾಣಿಸುತ್ತಿದೆ.
ದೇಶದಲ್ಲಿ ಕಳೆದೊಂದು ದಶಕದಿಂದ ನಾಗಾಲೋಟದಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಅನ್ನು ಕಟ್ಟಿ ಹಾಕಲು ಆಗಿನ ಕಾಂಗ್ರೆಸ್ ನೇತೃತ್ವದ ಯುಪಿಎಗೆ ಸಾಧ್ಯವಾಗುವುದಿಲ್ಲ. ಮತ್ತು ಒಂದೇ ಮನಸ್ಥಿತಿಯ ಅರ್ಥಾತ್ ನರೇಂದ್ರ ಮೋದಿಯನ್ನು ವಿರೋಧಿಸುವ ಒಂದಷ್ಟು ನಾಯಕರು ಒಟ್ಟಾಗಬೇಕೆಂಬ ಉದ್ದೇಶದಿಂದ ಉದಯಗೊಂಡ ಐಎನ್‌ಡಿಐಎ ಅರ್ಥಾತ್ ಇಂಡಿಯಾ ಒಕ್ಕೂಟ ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬಾರದೆ ಹೋದರೂ ಮೋದಿಯನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

ಇನ್ನೊಂದಷ್ಟು ಸ್ಥಾನಗಳನ್ನು ಗೆದ್ದಿದ್ದರೆ ಬಹುಶಃ ಅಧಿಕಾರಕ್ಕೆ ಬರುವ ಸಾಧ್ಯತೆಯೂ ಇತ್ತು. ಇದು ಇಂಡಿಯಾ ಒಕ್ಕೂಟದ ಸಾಧನೆ ಎಂದರೆ ತಪ್ಪಾಗಲಾರದು. ದೇಶದಲ್ಲಿ ಬಿಜೆಪಿಯನ್ನು ಕುಗ್ಗಿಸುವಲ್ಲಿ ಇಂಡಿಯಾ ಒಕ್ಕೂಟದ ಪಾತ್ರವಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಬಿಜೆಪಿ ನಾಯಕರು ಮಾಡಿಕೊಂಡ ಎಡವಟ್ಟು ಮತ್ತು ಅತಿಯಾದ ಆತ್ಮವಿಶ್ವಾಸವೂ ಅವರಿಂದ ಒಂದಷ್ಟು ಸ್ಥಾನವನ್ನು ಕಳೆದು ಕೊಳ್ಳುವಂತಾಯಿತು ಎಂಬುದು ಕೂಡ ಅಷ್ಟೇ ಸತ್ಯ.
ಎನ್‌ಡಿಎಗೆ ಸ್ಪರ್ಧೆ ನೀಡಿದ ಐಎನ್‌ಡಿಐಎ
ಲೋಕಸಭಾ ಚುನಾವಣೆಗೆ ಮುನ್ನ ಮೇಲ್ನೋಟಕ್ಕ ಇಂಡಿಯಾ ಒಕ್ಕೂಟದಲ್ಲಿ ಒಗ್ಗಟ್ಟು ಪ್ರದರ್ಶನ ಕಾಣಿಸಿತ್ತಾದರೂ ಒಳಗೆ ಕಚ್ಚಾಟ ಮುಂದುವರೆದಿತ್ತು. ಕಾಂಗ್ರೆಸ್ ನೇತೃತ್ವದಲ್ಲಿ ಇಂಡಿಯಾ ಒಕ್ಕೂಟ ಮುನ್ನಡೆಯುತ್ತಿದೆ ಎಂಬಂತೆ ತೋರುತ್ತಿದ್ದಾರೂ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಣೆ ಮಾಡಲು ಇತರೆ ನಾಯಕರು ತಯಾರಿರಲಿಲ್ಲ. ಹೀಗಾಗಿಯೇ ಪ್ರಧಾನಿ ಅಭ್ಯರ್ಥಿಯನ್ನು ಘೋಷಣೆ ಮಾಡದೇ ಚುನಾವಣೆಗೆ ಹೋಗಿದ್ದರು. ಒಂದಷ್ಟು ಹೋರಾಟಗಳು, ಮತ್ತೊಂದಷ್ಟು ಶ್ರಮ ಹೀಗೆ ಎಲ್ಲವೂ ಸೇರಿದ್ದರಿಂದ ಎನ್‌ಡಿಎಗೆ ಒಂದು ಪ್ರಬಲವಾದ ಸ್ಪರ್ಧೆಯನ್ನು ನೀಡಿದ್ದಂತು ನಿಜ.

ಬಹುಶಃ ಇನ್ನೈದು ವರ್ಷಗಳ ಕಾಲ ಇಂಡಿಯಾ ಒಕ್ಕೂಟ ಗಟ್ಟಿಯಾಗಿ ನಿಂತರೆ ಎನ್‌ಡಿಎಗೆ ಮುಳುಗು ನೀರು ತಂದರೂ ಅಚ್ಚರಿಯಿಲ್ಲ. ಆದರೆ ಇಂಡಿಯಾ ಒಕ್ಕೂಟದಲ್ಲಿ ಆಗುತ್ತಿರುವ ಬೆಳವಣಿಗೆಯನ್ನು ಗಮನಿಸಿದರೆ ಅದ್ಯಾವುದೂ ಸಾಧ್ಯವಾದಂತೆ ಕಾಣಿಸುತ್ತಿಲ್ಲ. ಸಾಮಾನ್ಯವಾಗಿ ಲೋಕಸಭಾ ಚುನಾವಣೆ ನಂತರ ಇಂಡಿಯಾ ಒಕ್ಕೂಟ ಗಟ್ಟಿಯಾಗುತ್ತದೆ ಎಂದೇ ನಂಬಲಾಗಿತ್ತು. ಆದರೆ ಲೋಕಸಭಾ ಚುನಾವಣೆ ನಂತರ ನಡೆದ ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟವನ್ನು ಮಕಾಡೆ ಮಲಗಿಸಿದೆ. ಅದರಲ್ಲೂ ಕಾಂಗ್ರೆಸ್ ಪ್ರಾಬಲ್ಯ ದಿನದಿಂದ ದಿನಕ್ಕೆ ಕುಸಿಯುತ್ತಿದೆ.
ಪ್ರಿಯಾಂಕ ಗಾಂಧಿ ಎಂಟ್ರಿ ಲಾಭ ತರುತ್ತಾ?
ನಾಲ್ಕು ರಾಜ್ಯಗಳಲ್ಲಿಯೂ ಉತ್ತಮ ಸಾಧನೆ ಮಾಡಿಲ್ಲ. ಇದೆಲ್ಲವನ್ನು ಗಮನಿಸಿರುವ ಇಂಡಿಯಾ ಒಕ್ಕೂಟದ ಕೆಲವು ಪಕ್ಷಗಳು ಕಾಂಗ್ರೆಸ್ ಜತೆಗಿದ್ದರೆ ತಮಗೆ ಕಷ್ಟ ಎಂಬ ತೀರ್ಮಾನಕ್ಕೆ ಬಂದಿದ್ದು ಅಂತರ ಕಾಪಾಡಿಕೊಳ್ಳುವ ಪ್ರಯತ್ನ ಮಾಡುತ್ತಿವೆ. ಸದ್ಯ ಪಶ್ಚಿಮ ಬಂಗಾಳದಲ್ಲಿ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಕೂಡ ಕಾಂಗ್ರೆಸ್ ನಿಂದ ಅಂತರ ಕಾಪಾಡಿಕೊಳ್ಳುತ್ತಿದ್ದಾರೆ.

ಅಷ್ಟೇ ಅಲ್ಲದೆ ಇಂಡಿಯಾ ಒಕ್ಕೂಟವನ್ನು ಮುನ್ನಡೆಸುವ ಇಂಗಿತ ವ್ಯಕ್ತಪಡಿಸುವುದರೊಂದಿಗೆ ನೆಹರು ಕುಟುಂಬಕ್ಕೆ ಸೆಡ್ಡು ಹೊಡೆಯುವ ಸೂಚನೆ ನೀಡಿದ್ದಾರೆ. ಇದು ಇಂಡಿಯಾ ಒಕ್ಕೂಟದಲ್ಲಿ ಬಿರುಕು ಮೂಡಿಸಿದರೂ ಅಚ್ಚರಿಯಿಲ್ಲ. ಕಾಂಗ್ರೆಸ್ಸಿಗರು ಇಂಡಿಯಾ ಒಕ್ಕೂಟದ ನಾಯಕ ಸ್ಥಾನವನ್ನು ರಾಹುಲ್ ಗಾಂಧಿಯನ್ನು ಹೊರತುಪಡಿಸಿ ಮತ್ಯಾರಿಗೂ ನೀಡಲು ಮನಸ್ಸು ಮಾಡುತ್ತಿಲ್ಲ. ಆದರೆ ಪ್ರಿಯಾಂಕ ಗಾಂಧಿ ಈಗಾಗಲೇ ವೈನಾಡು ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆಲುವು ಸಾಧಿಸಿ ಸಂಸದರಾಗುವ ಮೂಲಕ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಟ್ಟಿದ್ದಾರೆ.
ಪ್ರಿಯಾಂಕ ವಾದ್ರಾ ಗೆಲುವು ಕಾಂಗ್ರೆಸ್ ನಾಯಕರಲ್ಲಿ ಆಶಾಭಾವನೆ ಮೂಡಿಸಿದೆ. ಅಜ್ಜಿ ಇಂದಿರಾ ಗಾಂಧಿಯನ್ನು ಹೋಲುವುದರಿಂದ ಕಾಂಗ್ರೆಸ್ ಗೆ ಭವಿಷ್ಯವಿದೆ ಎಂದು ನಂಬಿದ್ದಾರೆ. ಹೀಗಾಗಿ ಅವರನ್ನು ಮುನ್ನಲೆಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿ ಪ್ರಿಯಾಂಕರನ್ನು ಮುಂಚೂಣಿಗೆ ತಂದರೆ ಅದರಿಂದ ಪಕ್ಷಕ್ಕೆ ಲಾಭವಾಗಲಿದೆ. ಆದರೆ ಒಕ್ಕೂಟದಲ್ಲಿ ಅವರು ಎಂಟ್ರಿ ಕೊಟ್ಟರೆ ಮಮತಾ ಬ್ಯಾನರ್ಜಿ ಬದಿಗೆ ಸರಿದು ಹೋಗಬಹುದು ಎಂಬ ಭಯವೂ ಇಲ್ಲದಿಲ್ಲ. ಹೀಗಾಗಿಯೇ ಅವರು ಮುಖ್ಯವಾಹಿನಿಗೆ ಬರಬೇಕಾದರೆ ಇಂಡಿಯಾ ಒಕ್ಕೂಟದ ಸಾರಥ್ಯವಹಿಸಿಕೊಂಡು ಆ ಮೂಲಕ ದೇಶದ ಗಮನಸೆಳೆಯವುದು ಅನಿವಾರ್ಯವಾಗಿದೆ. ಹೀಗಾಗಿಯೇ ಅವರು ಆ ಬಯಕೆಯನ್ನು ಹುಟ್ಟು ಹಾಕಿದ್ದಾರೆ.
ಐಎನ್‌ಡಿಐಎ ನಾಯಕತ್ವದ ಮೇಲೆ ದೀದಿ ಕಣ್ಣು
ಒಂದು ಪಕ್ಷವನ್ನು ಸಂಭಾಳಿಸಿದಷ್ಟು ಸುಲಭವಲ್ಲ ಹತ್ತಾರು ಪಕ್ಷಗಳ ಒಕ್ಕೂಟವನ್ನು ಮುನ್ನಡೆಸುವುದು ಎಂಬುದು ಮಮತಾ ಬ್ಯಾನರ್ಜಿಗೆ ಗೊತ್ತಿಲ್ಲದ ವಿಚಾರವಲ್ಲ. ಆದರೆ ತಾನು ರಾಷ್ಟ್ರಮಟ್ಟದ ನಾಯಕಿ ಎಂಬುದನ್ನು ತೋರ್ಪಡಿಸುವುದು ಅವರಿಗೆ ಅಗತ್ಯತೆಯಾಗಿದೆ. ಇದೆಲ್ಲದರ ನಡುವೆ ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಗೆ ಇಂಡಿ ಒಕ್ಕೂಟದ ಪಕ್ಷಗಳ ಸಹಕಾರವೂ ಸರಿಯಾಗಿ ಸಿಕ್ಕಂತೆ ಕಾಣುತ್ತಿಲ್ಲ.
ಕಾಂಗ್ರೆಸ್ ಅದಾನಿ ವಿಚಾರವನ್ನು ಹಿಡಿದುಕೊಂಡು ಎಳೆದಾಡುತ್ತಿದ್ದರೆ ಅದಕ್ಕೆ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿಯಾಗಲೀ, ಎಸ್ ಪಿ ಪಕ್ಷವಾಗಲೀ ಸಹಕಾರ ನೀಡಿದಂತೆ ಕಾಣುತ್ತಿಲ್ಲ. ಇಂಡಿಯಾ ಒಕ್ಕೂಟದೊಳಗಿನ ಬಿರುಕು ಹರಿಯಾಣ, ಮಹಾರಾಷ್ಟ್ರ ಚುನಾವಣೆಯಲ್ಲಿ ಸೋಲಿನ ಬಳಿಕ ಜಾಸ್ತಿಯಾಗಿದ್ದು, ಇಂಡಿಯಾ ಒಕ್ಕೂಟದಲ್ಲಿದ್ದ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್‌ನಿಂದ ಅಂತರ ಕಾಪಾಡಿಕೊಳ್ಳಲು ಮುಂದಾಗುತ್ತಿವೆ ಹಾಗಾಗಿ ಒಕ್ಕೂಟದಲ್ಲಿ ನಾಯಕತ್ವ ಬದಲಾಗಬೇಕು ಎಂಬ ಮನವಿಯನ್ನು ಮಾಡುತ್ತಿವೆ.
ಮುಂದಿನ ವರ್ಷಗಳಲ್ಲಿ ಇನ್ನಷ್ಟು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವುದರಿಂದ ಲೋಕಸಭಾ ಚುನಾವಣೆ ವೇಳೆಯಿದ್ದ ಒಗ್ಗಟ್ಟು ಮುಂದುವರೆಯುವ ಸಾಧ್ಯತೆ ಕಡಿಮೆಯೇ. ಒಟ್ಟಾರೆಯಾಗಿ ಹೇಳಬೇಕೆಂದರೆ ಇನ್ನೈದು ವರ್ಷಗಳಲ್ಲಿ ಏನೆಲ್ಲ ಬೆಳವಣಿಗೆ ಆಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟವೇ. ಅಲ್ಲಿ ತನಕ ಇಂಡಿಯಾ ಒಕ್ಕೂಟವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ನಾಯಕನ ಅಗತ್ಯವಿದ್ದು, ಆ ನಾಯಕನ ಆಯ್ಕೆಯೇ ಒಕ್ಕೂಟದ ಬಿರುಕಿಗೆ ಕಾರಣವಾದರೂ ಅಚ್ಚರಿಯಿಲ್ಲ.












Click it and Unblock the Notifications