Weather Forecast: ತೀವ್ರಗೊಂಡ ಚಂಡಮಾರುತ ಪರಿಚಲನೆ: ಹವಾಮಾನ ಮುನ್ಸೂಚನೆ, ವಿವರ
ಬೆಂಗಳೂರು, ಡಿಸೆಂಬರ್ 17: ಕರ್ನಾಟಕ ರಾಜ್ಯದಲ್ಲಿ ಹಿಂಗಾರು ಆರಂಭದಿಂದಲೂ ಅಬ್ಬರಿಸಿದ್ದ ಮಳೆ ಕಳೆದ ಒಂದು ವಾರದಿಂದ ತಣ್ಣಗಾಗಿದೆ. ಇದರ ಬೆನ್ನಲ್ಲೆ ಒಂದೆರಡು ವಾಯುಭಾರ ಕುಸಿತ, ಚಂಡಮಾರುತ ಪರಿಚಲನೆ ಸೃಷ್ಟಿಯಾಗಿದೆ. ರಾಜ್ಯಾದ್ಯಂತ ಒಣಹವೆ ಸೃಷ್ಟಿಯಾಗಿದೆ. ವಿಪರೀತ ಚಳಿ ಕಂಡು ಬರುತ್ತಿದ್ದು, ಕೆಲವು ಕಡೆಗಳಲ್ಲಿ ಲಘು ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) ಬೆಂಗಳೂರು ಹವಾಮಾನ ಕೇಂದ್ರವು ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಒಂದೇ ಸಮಯದಲ್ಲಿ ಮಳೆ, ಚಳಿ ಹಾಗೂ ಬಿಸಿಲಿನ ವಾತಾವರಣ ಕಂಡು ಬರುತ್ತಿದೆ. ಅದರಲ್ಲೂ ದಕ್ಷಿಣ ಒಳನಾಡಿನ ಭಾಗದ ಜಿಲ್ಲೆಗಳ ಜನರಿಗೆ ಮೂರು ಕಾಲಗಳನ್ನು ಒಟ್ಟೊಟ್ಟಿಗೆ ಅನುಭವಿಸುತ್ತಿದ್ದಾರೆ. ಸಮುದ್ರಮಟ್ಟದಲ್ಲಿ ಉಂಟಾಗಿರುವ ಹವಾಮಾನ ವೈಪರಿತ್ಯಗಳ ಪ್ರಭಾವದಿಂದಾಗಿ ಕೆಲವೆಡೆ ಲಘು ಮಳೆ ಆಗುವ ಮುನ್ಸೂಚನೆ ಇದೆ.

ಮಂಗಳವಾರ ಡಿಸೆಂಬರ್ 17 ರಂದು ಕಡಿಮೆ ಒತ್ತಡದ ಪ್ರದೇಶವು ನೈಋತ್ಯ ಬಂಗಾಳಕೊಲ್ಲಿ ಸಮುದ್ರ ಮೇಲ್ಮೈನಲ್ಲಿದೆ. ಸದ್ಯ ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 5.8 ಕಿಮೀ ವರೆಗೆ ವಿಸ್ತರಣೆಗೊಂಡಿದೆ. ಮುಂದಿನ 2 ದಿನಗಳಲ್ಲಿ ಇದು ಹೆಚ್ಚು ತೀವ್ರಗೊಳ್ಳುವ ಸಂಭವವಿದೆ.
ವಾಯುಭಾರ ಕುಸಿತದ ತೀವ್ರತೆ ಅಪ್ಡೇಟ್
ಬಂಗಾಳಕೊಲ್ಲಿ ಮತ್ತು ಲಕ್ಷದ್ವೀಪ ಸಮುದ್ರದಲ್ಲಿ ನಿರ್ಮಾಣವಾಗಿರುವ ಚಂಡಮಾರುತ ವೈಪರಿತ್ಯ ಪೈಕಿ ಬಂಗಾಳಕೊಲ್ಲಿ ಮೂಲಕ ಕೇಂದ್ರ ಪ್ರದೇಶದಿಂದ ಪಶ್ಚಿಮ ವಾಯವ್ಯ ದಿಕ್ಕಿನಲ್ಲಿ ತಮಿಳುನಾಡು ಕರಾವಳಿಯ ಕಡೆಗೆ ಬಿರುಗಾಳಿ ಚಲಿಸುವ ಲಕ್ಷಣಗಳು ಇವೆ. ಆಗ್ನೇಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಲಕ್ಷದ್ವೀಪ ಪ್ರದೇಶದ ಮೇಲಿನ ವಾಯು ಚಂಡಮಾರುತದ ಪರಿಚಲನೆಯು ಸರಾಸರಿ ಸಮುದ್ರ ಮಟ್ಟದಿಂದ 3.1 ಕಿಮೀ ವರೆಗೆ ವಿಸ್ತರಣೆಗೊಂಡಿದೆ.
ಕಡಿಮೆ ಒತ್ತಡ ಪ್ರದೇಶದಿಂದಾಗಿ ಬಂಗಾಳಕೊಲ್ಲಿ ಸಮುದ್ರದಿಂದ ನೇರವಾಗಿ ವೇಗದ ಗಾಳಿಯು ತಮಿಳುನಾಡು ಕರಾವಳಿಯತ್ತ ಬೀಸುತ್ತಿದೆ. ಇದರಿಂದ ತಮಿಳುನಾಡು, ಚೆನ್ನೈ ಭಾಗದಲ್ಲಿ ಮುಂದಿನ ಎರಡು ದಿನಗಳಲ್ಲಿ ಆಗಾಗ ಲಘು ಮಳೆ ಬರಬಹುದು.
ಚಳಿ ಏರಿಕೆ, ಕೆಲವೆಡೆ ಲಘು ಮಳೆ ಸಾಧ್ಯತೆ
ಇನ್ನೂ ಕರ್ನಾಟಕ ಮಟ್ಟಿಗೆ ದಕ್ಷಿಣ ಒಳನಾಡಿನಲ್ಲಿ ಚಂಡಮಾರುತದ ಪ್ರಭಾವ ಉಂಟಾಗಬಹುದು. ಮುಂದಿನ 48 ಗಂಟೆಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಬದಲಾವಣೆಗಳು ಉಂಟಾಗಬಹುದು. ಸದ್ಯ ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ, ತುಮಕೂರು, ರಾಮನಗರ, ಮಂಡ್ಯ, ಮೈಸೂರು, ಚಾಮರಾಜನಗರ, ಹಾಸನ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಬಳ್ಳಾರಿಯಲ್ಲಿ ಮಧ್ಯಾಹ್ನ ಬಿಸಿಲು ಬೆಳಗ್ಗೆ ಮತ್ತು ರಾತ್ರಿ ಚಳಿ ನಿರ್ಮಾಣಗೊಳ್ಳುತ್ತಿದೆ.
ಕೋಲಾರ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಲಘು ಮಳೆಯಾಗುವ ನಿರೀಕ್ಷೆಗಳು ಇವೆ. ದಕ್ಷಿಣ ಒಳನಾಡಿನ ಉಳಿದ ಜಿಲ್ಲೆಗಳಲ್ಲಿ ಒಣ ಹವಾಮಾನವು ಮೇಲುಗೈ ಸಾಧಿಸುವ ಸಾಧ್ಯತೆ ಇದೆ.
ಮೈಕೊರೆವ ಚಳಿ ದಾಖಲು
ಕರಾವಳಿ ಕರ್ನಾಟಕ ಮತ್ತು ಉತ್ತರ ಒಳ ಕರ್ನಾಟಕದ ಮೇಲೆ ಒಣ ಹವೆ ಹೆಚ್ಚಾಗಿರಲಿದೆ. ಕರ್ನಾಟಕದ ಒಳಭಾಗದ ಮೇಲೆ ಪ್ರತ್ಯೇಕವಾದ ಸ್ಥಳಗಳಲ್ಲಿ ಅತ್ಯಧಿಕ ಮಂಜು ಕವಿದ ವಾತಾವರಣ ಕಂಡು ಬರುತ್ತಿದೆ. ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಬಾಗಲಕೋಟೆ, ಬೆಳಗಾವಿ, ಕೊಪ್ಪಳ, ಹಾವೇರಿ, ಗದಗ ಜಿಲ್ಲೆಗಳ ವ್ಯಾಪ್ತಿಯಲ್ಲಿ ಕಳೆದ ಐದಾರು ದಿನಗಳಿಂದ ಮೈಕೊರೆ ಚಳಿ ದಾಖಲಾಗುತ್ತಿದೆ.
ಉತ್ತರ ಕರ್ನಾಟಕದಲ್ಲಿ ಅತ್ಯಧಿಕ ಚಳಿ ದಾಖಲು
ರಾಜ್ಯದ ಕನಿಷ್ಠ ತಾಪಮಾನ (ತೀವ್ರ ಚಳಿ) ಬೀದರ್, ವಿಜಯಪುರ, ಬೆಳಗಾವಿ ಭಾಗದಲ್ಲಿ ಕಂಡು ಬರುತ್ತಿದೆ. ಇನ್ನೂ ಕೆಲವು ದಿನಗಳ ಕಾಲ ಉತ್ತರ ಕರ್ನಾಟಕದ ಭಾಗದಲ್ಲಿ ಇದೇ ರೀತಿಯ ಬೆಳಗ್ಗೆ ರಾತ್ರಿ ಚಳಿ ಮತ್ತು ಇಡೀ ದಿನ ಒಣಹವೆ ಮುಂದುವರಯಲಿದೆ. ಈ ಒಣ ಹವೆಯು ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಿಗೂ ವಿಸ್ತರಣೆ ಆಗಿದೆ. ಸದ್ಯ ವಾತಾವರಣದಲ್ಲಿ ವ್ಯಾಪಕ ಮಳೆಯ ಯಾವುದೇ ಬದಲಾವಣೆಗಳು, ಮುನ್ಸೂಚನೆ ಇಲ್ಲ.
ಒಂದು ವೇಳೆ ಬಂಗಾಳಕೊಲ್ಲಿ, ಲಕ್ಷದ್ವೀಪದಲ್ಲಿ ಚಂಡಮಾರುತ, ವಾಯುಭಾರತ ಕುಸಿತವು ಇನ್ನಷ್ಟು ತೀವ್ರಗೊಂಡರೆ, ವೇಗದ ಗಾಳಿ ಕರಾಳಿಗೆ ಅಪ್ಪಳಿಸಿದರೆ ಜೋರು ಮಳೆ ಸುರಿಯುವ ಸಾಧ್ಯತೆ ಇದೆ. ಅಲ್ಲಿಯವರೆಗೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications