ಕಾಂಗ್ರೆಸ್ ಗ್ಯಾರಂಟಿಗಳು ಜಾರಿಯಾಗದಿದ್ರೆ ರಾಜಕೀಯ ನಿವೃತ್ತಿ ಎಂದ ಕಾಂಗ್ರೆಸ್ ಶಾಸಕ
ಹುಬ್ಬಳ್ಳಿ, ಮೇ 26: ಕಾಂಗ್ರೆಸ್ ಕೊಟ್ಟ ಗ್ಯಾರಂಟಿ ಘೋಷಣೆಗಳ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ದ ಬಿಜೆಪಿ ನಾಯಕರು ಹರಿಹಾಯ್ದಿದ್ದು, ಗ್ಯಾರಂಟಿಗಳನ್ನ ಜಾರಿ ಮಾಡದೇ ಹೋದರೇ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ನವಲಗುಂದದ ಕಾಂಗ್ರೆಸ್ ಶಾಸಕ ಎನ್‌ಎಚ್ ಕೋನರೆಡ್ಡಿ ಹೇಳಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ನಾವು ಚುನಾವಣಾ ಸಂದರ್ಭದಲ್ಲಿ ಜನರಿಗೆ ನೀಡಿದ ಗ್ಯಾರಂಟಿಗಳಿಗೆ ನಾನು ಗ್ಯಾರಂಟಿ. ಒಂದು ವೇಳೆ ಅವುಗಳನ್ನು ಜಾರಿ ಮಾಡದೇ ಹೋದರೇ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದ ಅವರು, ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಸಭೆಯಲ್ಲಿ ನಾನು ಭಾಗವಹಿಸಿದ್ದೆ. ಆ ಸಭೆಯಲ್ಲಿ ಐದು ಗ್ಯಾರಂಟಿಗಳನ್ನು ಜಾರಿ ಮಾಡ್ತೀವಿ ಎಂದು ಹೇಳಿದ್ದಾರೆ ಎಂದರು.

ಬಿಜೆಪಿಯವರು ನಮ್ಮ ಗ್ಯಾರಂಟಿ ವಿಚಾರವಾಗಿ ಯಾಕೆ ಇಷ್ಟು ಅವಸರ ಮಾಡುದ್ದಾರೋ ಗೊತ್ತಾಗ್ತಾ ಇಲ್ಲ. ಐದು ವರ್ಷದಲ್ಲಿ ಒಂದೇ ಒಂದು ಕೆಲಸ ಮಾಡಿಲ್ಲ ಅವರು. ಈಗ ತಾನೇ ಸರ್ಕಾರ ರಚನೆ ಆಗಿದೆ. ಯೋಜನೆಗಳ ಜಾರಿಗೆ ಕಾಲಾವಕಾಶ ಬೇಕು, ನಾವು ರಾಜ್ಯದ ಜನತೆಗೆ ಕೊಟ್ಟ ಗ್ಯಾರಂಟಿಯನ್ನು ನೂರಕ್ಕೆ ನೂರು ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಸಚಿವ ಸ್ಥಾನ ಕೊಟ್ಟರೇ ಏನೂ ತಪ್ಪಿಲ್ಲ. ಅವರು ಹಿರಿಯರು ಮತ್ತು ಮಾಜಿ ಮುಖ್ಯಮಂತ್ರಿಗಳಿದ್ದಾರೆ. ಅವರಿಗೆ ಸರಿ ಸಮಾನವಾಗಿರುವ ಹುದ್ದೆ ನೀಡುವುದು ಸೂಕ್ತ ಎಂದು ಹೇಳಿದರು.

ಇನ್ನೂ ಬಿಜೆಪಿಯವರು 15 ಲಕ್ಷ ರೂ. ಹಾಕ್ತೀನಿ ಎಂದು ಹೇಳಿದ್ದರು. 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿದ್ರೂ, ಅದನ್ನು ಯಾರೂ ಕೇಳೋದಿಲ್ಲ ಎಂದರು. ನಮ್ಮ ಗ್ಯಾರಂಟಿ ಯೋಜನೆಗಳನ್ನ ಎಷ್ಟೇ ಹಣ ಖರ್ಚು ಆದ್ರೂ ನಮ್ಮ ನಾಯಕರು ಜಾರಿ ಮಾಡ್ತೀವಿ ಎಂದು ಹೇಳಿದ್ದಾರೆ ಎಂದ ಅವರು, ಆರ್‌ಎಸ್‌ಎಸ್, ಬಜರಂಗದಳ ನಿಷೇಧದ ಬಗ್ಗೆ ನಾನು ಮಾತನಾಡಲ್ಲ ಎಂದರು.
ಪಕ್ಷದಲ್ಲಿ ಎಲ್ಲರಿಗೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ಸಚಿವರು ಆಗುವ ಆಸೆ ಇದ್ದೆ ಇರುತ್ತೆ, ಅದರಂತೆ ನನಗೂ ಕೃಷಿ ಸಚಿವನಾಗುವ ಆಸೆಯಿದೆ. ಸಚಿವ ಸಂಪುಟದಲ್ಲಿ ಯುವಕರಿಗೆ ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಬೇಕೆಂಬುದು ಇದ್ದರೇ ನನ್ನನ್ನು ಸಹ ಪರಿಗಣಿಸಿ, ನಮ್ಮ ಪಕ್ಷದ ವರಿಷ್ಠರಿಗೆ ಇದು ನನ್ನ ಮನವಿ ಎಂದು ಮಾಧ್ಯಮಗಳ ಮೂಲಕ ತಿಳಿಸಿದರು.












Click it and Unblock the Notifications