ಹಿಜಾಬ್ ಜಿಲ್ಲಾವಾರು ಅಪ್ಡೇಟ್ಸ್: ಕೋರ್ಟ್ ಆದೇಶ ಎಲ್ಲಿ ಪಾಲನೆ, ಎಲ್ಲಿ ಹಿಂದೇಟು
ಒಂದು ಕಡೆ ತಮ್ಮ ಶಾಲೆಯಲ್ಲೇ ಓದುತ್ತಿರುವ ಮಕ್ಕಳು, ಇನ್ನೊಂದು ಕಡೆ ಹಿಜಾಬ್ ವಿವಾದ ಕೋರ್ಟಿನಲ್ಲಿ ಇರುವುದು. ಮತ್ತೊಂದು ಕಡೆ, ನ್ಯಾಯಾಲಯದ ಮಧ್ಯಂತರ ತೀರ್ಪು. ಸಮವಸ್ತ್ರ ಧರಿಸಿ ಬನ್ನಿ ಎನ್ನುವ ಕೋರ್ಟ್ ಆದೇಶ ಪಾಲಿಸದಿದ್ದರೆ ಶಾಲಾ/ಕಾಲೇಜುಗಳಿಗೆ ನ್ಯಾಯಾಂಗ ನಿಂದನೆಯ ಭಯ.
ರಾಜ್ಯದ ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹುಟ್ಟಿದ ಹಿಜಾಬ್ ವಿವಾದ, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದ್ದರೂ ದಿನದಿಂದ ದಿನಕ್ಕೆ ಕಗ್ಗಂಟಾಗಿ ಕಾಡುತ್ತಿದೆ. ಬುಧವಾರದಿಂದ (ಫೆ 16) ಕಾಲೇಜು ತೆರೆಯಲು ಸರಕಾರ ಅನುಮತಿಯನ್ನು ನೀಡಿತ್ತು.
ರಾಜ್ಯದ ವಿವಿದೆಡೆ ಹಿಜಾಬ್ ಕಾವು ಬುಧವಾರವೂ ಕಮ್ಮಿಯಾಗಿಲ್ಲ. ಹೊಸಹೊಸ ಪ್ರತಿಭಟನೆಯ ದಾರಿಯಲ್ಲಿ ವಿದ್ಯಾರ್ಥಿನಿಗಳು ಹಿಜಾಬ್ ನಮ್ಮ ಹಕ್ಕು ಎಂದು ಶಾಲೆಗೆ ಗೈರಾಗುತ್ತಿದ್ದಾರೆ. ಶಿಕ್ಷಣ ಮತ್ತು ಹಿಜಾಬ್ ಯಾವುದು ಮುಖ್ಯ ಎಂದು ಪ್ರಾಧ್ಯಾಪಕರು ಕೇಳಿದರೆ, ನಿಮಗೆ ಎರಡು ಕಣ್ಣಲ್ಲಿ ಯಾವುದು ಮುಖ್ಯ ಎನ್ನುವ ಪ್ರಶ್ನೆ ವಿದ್ಯಾರ್ಥಿನಿಗಳಿಂದ ಎದುರಾಗುತ್ತಿದೆ.
ಈಗ, ದೇಶದ ಕಾನೂನನ್ನು ಪಾಲಿಸಬೇಕು ಎಂದು ಮಕ್ಕಳಿಗೆ ಬೋಧಿಸಬೇಕಾದಂತಹ ಪ್ರಾಧ್ಯಾಪಕರೇ ಹಿಜಾಬ್ ಕೆಳಗಿಳಿಸಬೇಡಿ ಎಂದು ಸಾಥ್ ನೀಡುತ್ತಿರುವ ವಿದ್ಯಮಾನವೂ ಅಲ್ಲಲ್ಲಿ ನಡೆಯುತ್ತಿರುವುದು ಚಿಂತೆಯ ವಿಷಯವಾಗಿದೆ.

ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಹಿಜಾಬ್ ವಿಚಾರಣೆ
ಕರ್ನಾಟಕ ಉಚ್ಚ ನ್ಯಾಯಾಲಯ ಹಿಜಾಬ್ ವಿಚಾರಣೆಯ ವೇಳೆ ಅಂತಿಮ ತೀರ್ಪು ನೀಡುವವರೆಗೆ ಧಾರ್ಮಿಕ ವಸ್ತ್ರ ಸಂಹಿತೆಗೆ ಬ್ರೇಕ್ ಹಾಕಿ, ಸಮವಸ್ತ್ರ ಧರಿಸಿ ಬರಲು ಆದೇಶ ನೀಡಿತ್ತು. ಜೊತೆಗೆ, ಶಾಲಾ, ಕಾಲೇಜನ್ನು ಆರಂಭಿಸಲು ಸರಕಾರಕ್ಕೆ ಮಧ್ಯಂತರ ಆದೇಶದ ನಿರ್ದೇಶವನ್ನು ನೀಡಿತ್ತು. ಅದರಂತೆಯೇ ಇದು ಕಾಲೇಜುಗಳು ಆರಂಭಗೊಂಡಿದ್ದವು. ಆದರೆ, ಕೋರ್ಟ್ ಮಧ್ಯಂತರ ಆದೇಶಕ್ಕೆ ಬೆಲೆಕೊಡದೇ ಹಲವು ಕಾಲೇಜಿನ ವಿದ್ಯಾರ್ಥಿನಿಗಳು ಹಿಜಾಬ್ ಧರಿಸಿಕೊಂಡು ಬಂದು ತರಗತಿಗೆ ಪ್ರವೇಶ ನೀಡಲು ಹಠ ಹಿಡಿದಿದ್ದಾರೆ. ಇದು, ಶಾಲಾ ಮಂಡಳಿ ಮತ್ತು ವಿದ್ಯಾರ್ಥಿನಿ/ಪೋಷಕರ ನಡುವೆ ಕಿತ್ತಾಟಕ್ಕೆ ಕಾರಣವಾಗಿದೆ.

ಗದಗದ ಶಾಲೆಯೊಂದರಲ್ಲಿ ಹಿಜಾಬ್ ಪ್ರತಿಭಟನೆ ಜೋರು
ಗದಗದ ಶಾಲೆಯೊಂದರಲ್ಲಿ ಹಿಜಾಬ್ ಪ್ರತಿಭಟನೆ ಜೋರಾಗಿ ನಡೆಯುತ್ತಿದ್ದು, ಪೋಷಕರೂ ಸಾಥ್ ನೀಡುತ್ತಿದ್ದಾರೆ. ಕೋರ್ಟ್ ಆದೇಶವಿದೆ ಎಂದು ಮನವರಿಕೆ ಮಾಡಿದರೂ, ಜಗ್ಗದ ಪೋಷಕರು ನಿಮ್ಮ ಮಾತು ಕೇಳುವಿದಿಲ್ಲ, ನಿಮಗೆ ಎಚ್ಚರಿಕೆ ಕೊಡುತ್ತಿದ್ದೇವೆ, ಜಿಲ್ಲಾಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಎನ್ನುವ ಹಠಕ್ಕೆ ಬಿದ್ದಿದ್ದಾರೆ. ಹುಬ್ಬಳ್ಳಿಯಲ್ಲೂ ಹಿಜಾಬ್ ಗಲಾಟೆ ಜೋರಾಗಿರುವುದರಿಂದ ಪ್ರತಿಷ್ಠಿತ ಮೂರು ಸಾವಿರ ಮಠದ ಮಹಿಳಾ ಕಾಲೇಜಿಗೆ ರಜೆಯನ್ನು ಘೋಷಿಸಲಾಗಿದೆ.

ತುಮಕೂರಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಅನುಮತಿ ನಿರಾಕರಣೆ
ತುಮಕೂರಿನಲ್ಲಿ ಹಿಜಾಬ್ ಧರಿಸಿ ತರಗತಿಗೆ ಅನುಮತಿ ನಿರಾಕರಿಸಿದ್ದರಿಂದ, ವಿದ್ಯಾರ್ಥಿನಿಗಳು ಮನೆಗೂ ಹೋಗದೇ, ಶಾಲಾ ಆವರಣದಲ್ಲೂ ಇರದೇ, ನಗರದ ವಿವಿಧ ರಸ್ತೆಗಳಲ್ಲಿ ಪೆರೇಡ್ ನಡೆಸುತ್ತಿದ್ದಾರೆ. ದೇಶದ ಕಾನೂನನ್ನು ಪಾಲಿಸಬೇಕು ಎನ್ನುವ ಮನವರಿಕೆಗೆ ಪೋಷಕರಾಗಲಿ/ಮಕ್ಕಳಾಗಲಿ ಜಗ್ಗುತ್ತಿಲ್ಲ. ಶಿರಸಿಯಲ್ಲಿ ಕೆಲವು ವಿದ್ಯಾರ್ಥಿನಿಗಳು ಹಿಜಾಬ್ ತೆಗೆದು ಕ್ಲಾಸಿಗೆ ಹಾಜರಾದರೆ, ಕೆಲವರು ಹಿಜಾಬ್ ತೆಗೆಯದೇ ಮನೆಗೆ ವಾಪಸ್ ಆಗಿದ್ದಾರೆ.

ಕಾಲೇಜಿನ ಉಪನ್ಯಾಸಕಿಯೇ ಹಿಜಾಬ್ ಸಂಬಂಧ ವಿದ್ಯಾರ್ಥಿನಿಗಳಿಗೆ ಸಾಥ್
ಇನ್ನು ಬಳ್ಳಾರಿಯ ಸರಳಾದೇವಿ ಕಾಲೇಜಿನ ಉಪನ್ಯಾಸಕಿಯೇ ಹಿಜಾಬ್ ಸಂಬಂಧ ವಿದ್ಯಾರ್ಥಿನಿಗಳಿಗೆ ಸಾಥ್ ನೀಡಿದ್ದಾರೆ. ನ್ಯಾಯಾಲಯದ ತೀರ್ಪು ಬಂದಿಲ್ಲ, ನಾವು ಹಿಜಾಬ್ ತೆಗೆಯಲ್ಲ ಎಂದು ವಿದ್ಯಾರ್ಥಿಗಳಿಗೆ ಸಾಥ್ ನೀಡಿದ್ದಾರೆ. ಹಿಜಾಬ್ ತೆಗೆಯಲು ಮುಂದಾಗಿದ್ದ ವಿದ್ಯಾರ್ಥಿನಿಯರ ಬಳಿ ಹೋಗಿ ಹಿಜಾಬ್ ತೆಗೆಯಬೇಡಿ ಎಂದು ಬೆಂಬಲಿಸಿದ್ದಾರೆ. ಕೋರ್ಟ್ ಮಧ್ಯಂತರ ಆದೇಶವಿದೆ ಎನ್ನುವ ಮಾತನ್ನು ಉಪನ್ಯಾಸಕಿ ಒಪ್ಪುತ್ತಿಲ್ಲ, ನಾವ್ಯಾಕೇ ಹಿಜಾಬ್ ಹಾಕಿಕೊಂಡು ಬರಬಾರದು? ಇಷ್ಟು ದಿನ ಇಲ್ಲದ ವಿವಾದ ಈಗ್ಯಾಕೆ? ನಿಮ್ಮ ಸ್ನೇಹಿತರಿಗೆ ಬೆಂಬಲಿಸಿ ಹಿಜಾಬ್ ಹಾಕಿಕೊಂಡು ಬರುವಂತೆ ಹೇಳಿ ಎಂದು ವಿದ್ಯಾರ್ಥಿನಿಗಳಿಗೆ ಉಪನ್ಯಾಸಕಿ ಹೇಳುತ್ತಿದ್ದಾರೆ. ಆದರೂ, ವಿದ್ಯಾರ್ಥಿಗಳು ಶಾಲೆಗೆ ಹಾಜರಾಗದೇ ವಾಪಸ್ ಆಗಿದ್ದಾರೆ.

ಉಡುಪಿಯ ಕಾಲೇಜಿನಲ್ಲಿ "ಹಿಜಾಬ್ ನಮ್ಮ ಹೆಮ್ಮೆ, ಆದರೆ ಕೋರ್ಟ್ ಆದೇಶ ಪಾಲಿಸುತ್ತೇವೆ
ಉಡುಪಿಯ ಕಾಲೇಜಿನಲ್ಲಿ "ಹಿಜಾಬ್ ನಮ್ಮ ಹೆಮ್ಮೆ, ಆದರೆ ಸದ್ಯ ಕೋರ್ಟ್ ಮಧ್ಯಂತರ ಆದೇಶ ನೀಡಿದೆ, ನ್ಯಾಯಾಲಯದ ಅಂತಿಮ ಆದೇಶ ಬರುವವರೆಗೆ ಕಾಯುತ್ತೇವೆ'ಎಂದು ವಿದ್ಯಾರ್ಥಿನಿಗಳು ಹೇಳಿದ್ದಾರೆ. "ನಾವು ಕಾಲೇಜಿನ ಆವರಣದಲ್ಲಿ ಹಿಜಾಬ್ ಧರಿಸಲು ತಡೆಯನ್ನು ಒಡ್ಡಿಲ್ಲ, ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿರುವ ವಿಚಾರ ಮಕ್ಕಳಿಗೆ ಮನವರಿಕೆ ಮಾಡಿದ್ದೇವೆ. ಬಹುತೇಕ ಮುಸ್ಲಿಂ ವಿದ್ಯಾರ್ಥಿನಿಗಳು ಹಿಜಾಬ್ ತೆಗೆಯಲು ಒಪ್ಪಿದ್ದಾರೆ"ಎಂದು ಕಾಲೇಜಿನ ಪ್ರಾಂಶುಪಾಲರು ಹೇಳಿದ್ದಾರೆ.












Click it and Unblock the Notifications