ಹಿಜಾಬ್ ತೀರ್ಪು ನೀಡಿದ್ದ ನ್ಯಾಯಮೂರ್ತಿಗಳಿಗೆ ಬೆದರಿಕೆ: ಸುಪ್ರೀಂ ಅಂಗಳದಲ್ಲಿ FIR ಪ್ರಶ್ನೆ
ಬೆಂಗಳೂರು ಏ.15. ಹಿಜಾಬ್ ಕುರಿತು ತೀರ್ಪು ನೀಡಿದ್ದ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಹಾಕಿದ್ದ ಪ್ರಕರಣ ಇದೀಗ ಸುಪ್ರೀಂಕೋರ್ಟ್ ಅಂಗಳದಲ್ಲಿದೆ.
ನ್ಯಾಯಮೂರ್ತಿಗಳಿಗೆ ಬೆದರಿಕೆ ಆರೋಪಕ್ಕೆ ಸಂಬಂಧಿಸಿದಂತೆ ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದು ಕೋರಿ ಪ್ರಕರಣದ ಆರೋಪಿ ಚೆನ್ನೈ ನ ರಹಮತುಲ್ಲಾ ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾನೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜೀವ್ ಖನ್ನಾ ಮತ್ತು ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ ಅವರಿದ್ದ ವಿಭಾಗೀಯಪೀಠ ತಮಿಳುನಾಡು ಮತ್ತು ಕರ್ನಾಟಕ ಸರ್ಕಾರ ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಮುಂದೂಡಿತು. ಅಲ್ಲದೆ, ಅರ್ಜಿ ಸಂಬಂಧ ಉತ್ತರ ಸಲ್ಲಿಸುವಂತೆ ಪ್ರತಿವಾದಿಗಳಿಗೆ ಸೂಚನೆ ನೀಡಿದೆ.

ಅರ್ಜಿದಾರರ ಪರ ವಕೀಲರು, ಇದೇ ಪ್ರಕರಣ ಸಂಬಂಧ ತಮಿಳುನಾಡಿನಲ್ಲೂ ಎಫ್ಐಆರ್ ದಾಖಲಾಗಿರುವುದರಿಂದ, ಒಂದೋ ಕರ್ನಾಟಕದಲ್ಲಿ ತನ್ನ ವಿರುದ್ಧ ದಾಖಲಿಸಲಾಗಿರುವ ಎಫ್ಐಆರ್ ಅನ್ನು ರದ್ದುಗೊಳಿಸಬೇಕು, ಇಲ್ಲವೇ ಈ ಎಫ್ ಐಅರ್ ಅನ್ನು ತಮಿಳುನಾಡಿನ ಮಧುರೈ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡುವಂತೆ ನಿರ್ದೇಶನ ನೀಡಬೇಕೆಂದು ನ್ಯಾಯಪೀಠವನ್ನು ಕೋರಿದರು.
ಅರ್ಜಿದಾರರ ಆಕ್ಷೇಪವೇನು?
ತಮಿಳುನಾಡಿನಲ್ಲಿ ದಾಖಲಾಗಿರುವ ಮೊದಲ ಎಫ್‌ಐಆರ್ ದಾಖಲಾಗಿದೆ, ಬೆಂಗಳೂರಿನಲ್ಲಿ ದಾಖಲಿಸಲಾಗಿರುವ ಎರಡನೇ ಎಫ್‌ಐಆರ್‌ನಲ್ಲೂ ಮೊದಲಿನ ಎಫ್ಐಆರ್ ಅಂಶಗಳೇ ಇವೆ. ಒಂದೇ ವಿಚಾರದ ಬಗ್ಗೆ ಪರ್ಯಾಯ ತನಿಖೆ ನಡೆಸಲು ಸಾಧ್ಯವಿಲ್ಲ. ಈ ಕುರಿತು ಟಿಟಿ ಆಂಥೋನಿ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ ಹಾಗೂ ಅರ್ನಾಬ್ ಗೋಸ್ವಾಮಿ ಮತ್ತು ಕೇಂದ್ರ ಸರ್ಕಾರ ನಡುವಣ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಸ್ಪಷ್ಟ ತೀರ್ಪು ನೀಡಿದ್ದು, ಅದನ್ನು ಪಾಲನೆ ಮಾಡಬೇಕಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಅಲ್ಲದೆ, ಎರಡೆರಡು ಎಫ್ ಐಆರ್ ದಾಖಲಿಸಿರುವುದರಿಂದ ಸಂವಿಧಾನದ 21ನೇ ವಿಧಿಯಡಿ ಅರ್ಜಿದಾರರ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ. ಒಂದೇ ಕಾರಣಕ್ಕೆ ಸಂಬಂಧಿಸಿದಂತೆ ಎರಡು ವಿಭಿನ್ನ ತನಿಖಾ ಸಂಸ್ಥೆಗಳು ಎರಡು ವಿಭಿನ್ನ ನ್ಯಾಯವ್ಯಾಪ್ತಿಯಲ್ಲಿ ಎರಡು ಪರ್ಯಾಯ ತನಿಖೆಗಳನ್ನು ಕೈಗೊಳ್ಳುವುದು ಅರ್ಜಿದಾರರ ಹಕ್ಕನ್ನು ಉಲ್ಲಂಘಿಸಿದಂತಾಗುತ್ತದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಹೈಕೋರ್ಟ್ ತೀರ್ಪು:
ಕಳೆದ ಮಾರ್ಚ್ 15 ರಂದು ಹಿಜಾಬ್ ಕುರಿತಾದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿಗಳಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಜೆ ಎಂ ಖಾಜಿ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠ ಮಹತ್ವದ ತೀರ್ಪು ನೀಡಿತ್ತು. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಆದೇಶಿಸಿದ ಹೈಕೋರ್ಟ್, ಆ ಮೂಲಕ ಕಾಲೇಜು ಆವರಣದಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಲು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ರಾಜ್ಯ ಸರ್ಕಾರ ನೀಡಿದ ಅಧಿಕಾರ ಸರಿಯಾಗಿದೆ ಎಂದು ಸರ್ಕಾರದ ನಿಲುವನ್ನು ಊರ್ಜಿತಗೊಳಿಸಿತ್ತು.
ಆನಂತರ ಹಲವು ಸಂಘಟನೆಗಳ ನಾಯಕರು ತೀರ್ಪನ್ನು ಕಟುವಾಗಿ ಟೀಕಿಸಿದ್ದರಲ್ಲದೆ, ತೀರ್ಪು ನೀಡಿದ್ದ ನ್ಯಾಯಮೂರ್ತಿಗಳ ಕೊಲೆ ಬೆದರಿಕೆ ಹಾಕಲಾಗಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸ್ವಯಂಪ್ರೇರಿತ ಎಫ್ ಐಆರ್ ದಾಖಲಿಸಿಕೊಂಡು ಹಲವರನ್ನು ಬಂಧಿಸಿದ ತನಿಖೆ ನಡೆಸುತ್ತಿದೆ.
ಈ ಮಧ್ಯೆ, ಹೈಕೋರ್ಟ್ ತೀರ್ಪು ಪ್ರಶ್ನಿಸಿ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ನಲ್ಲಿ ಸಲ್ಲಿಸಲಾಗಿದೆ. ಆದರೆ ಸುಪ್ರೀಂಕೋರ್ಟ್, ಹೈಕೋರ್ಟ್ ತೀರ್ಪಿಗೆ ತಡೆ ನೀಡದೆ ವಿಚಾರಣೆಯನ್ನು ಮುಂದೂಡಿದೆ.












Click it and Unblock the Notifications