ಹಿಜಾಬ್: ಬೆಂಬಲವೋ, ವಿರೋಧವೋ? ಧರ್ಮ ಸಂಕಟದಲ್ಲಿ ಕಾಂಗ್ರೆಸ್
ಹಿಜಾಬ್ ವಿವಾದ ದೇಶದೆಲ್ಲೆಡೆ ಸದ್ದು ಮಾಡುತ್ತಿರುವ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ಈ ವಿಚಾರದಲ್ಲಿ ಯಾವು ನಿಲುವು ತಾಳಬೇಕು ಎನ್ನುವ ಗೊಂದಲದಲ್ಲಿದೆ. ಹಿಜಾಬ್ ವಸ್ತ್ರಧಾರಣೆ ಬೆಂಬಲಿಸಬೇಕೋ ಅಥವಾ ವಿರೋಧಿಸಬೇಕೋ ಎನ್ನುವ ಧರ್ಮ ಸಂಕಟದಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ.
ಹಿಜಾಬ್ ವಿವಾದ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ವಿಚಾರಣೆಯ ಹಂತದಲ್ಲಿದೆ, ಮಂಗಳವಾರ (ಫೆ 15) ಸುಮಾರು 135 ನಿಮಿಷ ವಿಚಾರಣೆ ನಡೆಸಿದ ನಂತರ ತ್ರಿಸದಸ್ಯ ಪೀಠ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿತು.
ಈ ನಡುವೆ, ರಾಜ್ಯದ ಕಾಲೇಜುಗಳು ಬುಧವಾರದಿಂದ ಆರಂಭಗೊಳ್ಳಲಿದೆ. ಪ್ರೌಢ ಶಾಲೆ ಆರಂಭದ ವೇಳೆ ಸಾಕಷ್ಟು ಗೊಂದಲ ಏರ್ಪಟ್ಟಿದ್ದರಿಂದ, ಕಾಲೇಜುಗಳು ಆರಂಭವಾಗುತ್ತಿರುವ ಹಿನ್ನಲೆಯಲ್ಲಿ ಮತ್ತೆ ಹಿಜಾಬ್ ಗದ್ದಲ ಆರಂಭವಾಗುವ ಆತಂಕ ಎದುರಾಗಿದೆ.
ಹಿಜಾಬ್ ವಿವಾದ ಈಗಾಗಲೇ ಕೋಮು ಆಯಾಮದಲ್ಲಿ ತಿರುಗಿರುವುದರಿಂದ ಮತ್ತು ಇದರ ಸೂಕ್ಷ್ಮತೆಯನ್ನು ಅರಿತಿರುವ ಕಾಂಗ್ರೆಸ್, ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ಹೊರತಾಗಿ ಈ ವಿಚಾರದಲ್ಲಿ ಯಾರೂ ಮಾತನಾಡಬಾರದು ಎನ್ನುವ ಫರ್ಮಾನನ್ನು ಡಿ.ಕೆ.ಶಿವಕುಮಾರ್ ಹೊರಡಿಸಿದ್ದಾರೆ. ಗೊಂದಲದಲ್ಲಿ ಕಾಂಗ್ರೆಸ್.

ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದ
ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಹಿಜಾಬ್ ವಿವಾದವನ್ನು ಮೊಳಕೆಯಲ್ಲೇ ಚಿವುಟುವ ಅವಕಾಶವನ್ನು ಜಿಲ್ಲಾಡಳಿತ ಮತ್ತು ಸರಕಾರ ಕೈಚೆಲ್ಲಿಯಾಗಿದೆ. ಕೆಲವು ವಿದ್ಯಾರ್ಥಿನಿಗಳು ಹಿಜಾಬ್ ಧರಿಸಿ ಬರಲು ಆರಂಭಿಸಿದ ನಂತರ, ಕೇಸರಿ ಶಲ್ಯವನ್ನು ಇನ್ನೊಂದು ಕೋಮಿನವರು ಹಾಕಿಕೊಂಡು ಬರಲಾರಂಭಿಸಿದರಿಂದ, ಶಿಕ್ಷಣ ಸಂಸ್ಥೆಗಳ ವಸ್ತ್ರ ಸಂಹಿತೆಗೆ ಬೆಲೆ ಇಲ್ಲದಂತಾಗಿದೆ. ಆಡಳಿತಾರೂಢ ಬಿಜೆಪಿಯ ಬಹುತೇಕ ಎಲ್ಲಾ ಶಾಸಕರು/ಸಚಿವರು ಹಿಜಾಬ್ ಅಥವಾ ಕೇಸರಿ ಶಲ್ಯ ಧರಿಸಿಕೊಂಡು ಬರಲು ಅವಕಾಶ ನೀಡಬಾರದು ಎನ್ನುವ ಗಟ್ಟಿ ನಿಲುವನ್ನು ಹೊಂದಿದೆ. ಕಾಂಗ್ರೆಸ್ ವಿಚಾರದಲ್ಲಿ ಮಾತ್ರ ಹಾಗಲ್ಲ.

ಹಿಜಾಬ್ ಬೆಂಬಲಿಸಿದರೆ ಮತ್ತು ವಿರೋಧಿಸಿದರೆ ಬೇರೇನೇ ರಾಜಕೀಯ ಸಮೀಕರಣ
ಹಿಜಾಬ್ ಬೆಂಬಲಿಸಿದರೆ ಮತ್ತು ವಿರೋಧಿಸಿದರೆ ಬೇರೇನೇ ರಾಜಕೀಯ ಸಮೀಕರಣ ಎದುರಾಗುವುದರಿಂದ ಕಾಂಗ್ರೆಸ್ ಅಳೆದುತೂಗಿ ಈ ವಿಚಾರದಲ್ಲಿ ಹೆಜ್ಜೆಯಿಡಲು ನಿರ್ಧರಿಸಿದೆ. ಶಾಸಕಾಂಗ ಪಕ್ಷದ ಸಭೆಯಲ್ಲೂ ಇದೇ ಪ್ರಮುಖ ವಿಚಾರ ಚರ್ಚೆಗೆ ಬಂದರೂ, ಯಾವುದೇ ಅಂತಿಮ ನಿಲುವನ್ನು ಕಾಂಗ್ರೆಸ್ ಮುಖಂಡರಿಗೆ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರ ಹೊರತಾಗಿ ಯಾರೂ ಹೇಳಿಕೆ ನೀಡಬಾರದು ಎಂದಿದ್ದರೂ ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದಕ್ಕೆ ಕಾಂಗ್ರೆಸ್ ಹೈಕಮಾಂಡ್ ಮಧ್ಯ ಪ್ರವೇಶಿಸಿತ್ತು. ಆ ಮೂಲಕ, ಹಿಜಾಬ್ ವಿಚಾರದಲ್ಲಿ ಕಾಂಗ್ರೆಸ್ ಎಷ್ಟು ಸೀರಿಯಸ್ಸಾಗಿದೆ ಎನ್ನುವುದನ್ನು ತೋರಿಸಿತ್ತು.

ಬಹಿರಂಗ ನಿಲುವನ್ನು ಪ್ರಕಟಿಸಲು ಕಾಂಗೆಸ್ಸಿಗೆ ಸಾಧ್ಯವಾಗುತ್ತಿಲ್ಲ
ಹಿಜಾಬ್ ಎನ್ನುವುದು ಈಗ ಬರೀ ಶಾಲಾ/ಕಾಲೇಜಿನ ವಿಚಾರವಾಗಿಲ್ಲದೇ ಇನ್ನೊಂದು ಹಂತಕ್ಕೆ ಹೋಗಿಯಾಗಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಯಾರ ಪರವಾಗಿಯೇ ನಿಲುವನ್ನು ತಳೆದರೂ ಇನ್ನೊಂದು ವರ್ಗದ ಅಸಮಾಧಾನಕ್ಕೆ ಕಾರಣವಾಗಬಹುದು. "ಹಿಜಾಬ್ ವಿಚಾರದಲ್ಲಿ ನಮ್ಮ ನಾಯಕರಿಗೆ ಬಹಿರಂಗವಾಗಿ ಹೇಳಿಕೆ ನೀಡಬಾರದೆಂದು ಸೂಚಿಸಲಾಗಿದೆ. ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತರನ್ನು ರಕ್ಷಿಸಿಕೊಂಡು ಹಿಂದಿನಿಂದಲೂ ಬರುತ್ತಿದೆ"ಎಂದು ಕೆಪಿಸಿಸಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೂ, ಬಹಿರಂಗ ನಿಲುವನ್ನು ಪ್ರಕಟಿಸಲು ಕಾಂಗೆಸ್ಸಿಗೆ ಸಾಧ್ಯವಾಗುತ್ತಿಲ್ಲ.

ಅಧಿವೇಶನದಲ್ಲಿ ಕಾಂಗ್ರೆಸ್ ಯಾವ ನಿಲುವನ್ನು ತಾಳಲಿದೆ
ಹಿಜಾಬ್ ಅನ್ನು ಬೆಂಬಲಿಸಿದರೆ ಹಿಂದೂ ವಿರೋಧಿ, ವಿರೋಧಿಸಿದರೆ ಅಲ್ಪಸಂಖ್ಯಾತ ಸಮುದಾಯದ ವಿರೋಧಿ ಎನ್ನುವ ಟ್ಯಾಗ್ ಲೈನ್ ಬರುವ ಸಾಧ್ಯತೆಯಿಲ್ಲದಿಲ್ಲ. ಕಾಂಗ್ರೆಸ್ಸಿನ ಅಲ್ಪಸಂಖ್ಯಾತ ಕೋಮಿನ ಶಾಸಕರು ಸಿಎಂ ಬೊಮ್ಮಾಯಿಯವರನ್ನು ಭೇಟಿಯಾಗಿ ಹಿಜಾಬ್ ಧರಿಸಲು ಅನುಮತಿ ನೀಡಬೇಕೆಂದು ಮನವಿ ಮಾಡಿದ್ದಾರೆ. ಜಾಗರೂಕತೆಯಿಂದ ಹೆಜ್ಜೆಯಿಡಬೇಕಾದ ಅನಿವಾರ್ಯತೆ ಇರುವುದರಿಂದ, ವಿಧಾನ ಮಂಡಲದ ಅಧಿವೇಶನದಲ್ಲಿ ಕಾಂಗ್ರೆಸ್ ಯಾವ ನಿಲುವನ್ನು ತಾಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.












Click it and Unblock the Notifications