ಡಿಕೆಶಿಗೆ ಹೈಕೋರ್ಟ್ ರಿಲೀಫ್ ಕೊಟ್ಟಿಲ್ಲ, ಇವರೇ ತೆಗೆದುಕೊಂಡಿದ್ದಾರೆ: ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದೇನು?
ರಾಮನಗರ, ನವೆಂಬರ್ 30: ಅಕ್ರಮ ಆಸ್ತಿಗಳಿಕೆ ಪ್ರಕರಣದಲ್ಲಿ ಡಿಕೆ ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ರಿಲೀಫ್ ನೀಡಿಲ್ಲ. ಅವರೇ ರಿಲೀಫ್ ತೆಗೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸಿಬಿಐ ತನಿಖೆ ಸ್ವಲ್ಪ ಮುಂದಕ್ಕೆ ಎಳೆಯುವ ಸಲವಾಗಿ ಇದು ಡಿ ಕೆ ಶಿವಕುಮಾರ್ ಅವರ ತಂತ್ರವಷ್ಟೆ. ಬಹುಶಃ ಗ್ಯಾರಂಟಿ ಕಾರ್ಯಕ್ರಮದ ಮೂಲಕ ದೇಶದಲ್ಲಿ ಅಧಿಕಾರಕ್ಕೆ ಬಂದು ಬಿಡ್ತೀವಿ. ಬಂದ ಮೇಲೆ ಎಲ್ಲಾ ಕೇಸ್ ಗಳನ್ನ ಮುಚ್ಚಿ ಹಾಕಬಹುದು ಅಂತಾ ಐದಾರು ತಿಂಗಳು ಮುಂದೂಡಿದ್ದಾರೆ ಎಂದು ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ನಾನು ವಕೀಲನಾಗಿರುವುದಕ್ಕೆ ಕೇಸ್ ವಾಪಸ್ಸ್ ತೆಗೆದುಕೊಂಡಿದ್ದು ಎಂಬ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ವಿಚಾರವಾಗಿ ಮಾತನಾಡಿ, ಅವರು ದೊಡ್ಡ ವಕೀಲರು ಅಂತ ಗೊತ್ತು ನನಗೆ. ಇವರೊಬ್ಬರೇ ಕಾನೂನು ತಿಳಿದುಕೊಂಡಿದ್ದಾರಲ್ವಾ. ಅದಕ್ಕೆ ಅರ್ಕಾವತಿ ಡಿನೋಟಿಫಿಕೇಷನ್ ತೆಗೆದು ರಿಡೋ ಮಾಡಿದ್ರಿ, ಕೆಂಪಣ್ಣನ ಆಯೋಗ ಮಾಡಿ ಉಳಿದುಕೊಂಡ್ರಲ್ಲ. ಆ ರೀತಿಯ ವಕೀಲರು ಇವರು ಎಂದು ಸಿದ್ದರಾಮಯ್ಯ ವಿರುದ್ಧ ತಿರುಗೇಟು ನೀಡಿದರು.
ಜನಸಾಮಾನ್ಯರಿಗೆ ಒಂದು ನ್ಯಾಯ, ಇವರಿಗೊಂದು ನ್ಯಾಯ. ಆ ವಕೀಲಿಕೆಲಿ ಇವರು ಬುದ್ದಿವಂತರಿದ್ದಾರೆ, ಎಸಿಬಿ ರಚನೆ ಮಾಡಿ, ಇವರ ಮೇಲೆ ಬಂದ ಕೇಸ್ ಗಳನ್ನ ಮುಚ್ಚಿಹಾಕಿಕೊಂಡ್ರು. ನಾನು ಸಿಎಂ ಆಗಿದ್ದಾಗ ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಹೋರಾಟ ಮಾಡಿದ್ದೆ. ನನ್ನ ಮೇಲೆ ಇವರ ಸರ್ಕಾರದ 15 ಕೇಸ್ ಇತ್ತಲ್ಲ, ನಾನು ಆವಾಗ ಇವರ ರೀತಿ ನಡೆದುಕೊಂಡನಾ. ಇಲ್ಲ ಎರಡನೇ ಬಾರಿ ಸಿಎಂ ಆದಾಗ ನನ್ನ ಮೇಲಿನ ಕೇಸ್ ಮುಚ್ಚಿಹಾಕಿದ್ನಾ.? ಎಂದು ಪ್ರಶ್ನಿಸಿದ ಅವರು, ಮೆರಿಟ್ ಇದ್ರೆ ಮಾಡಿಕೊಳ್ಳಲಿ ಅಂತ ಬಿಟ್ಟಿದ್ದೀನಿ.ಅವರಿಗೂ, ನಮಗೂ ಇರುವ ವ್ಯತ್ಯಾಸ ಅಷ್ಟೇ ಎಂದು ಹೇಳಿದರು.
ರಾಜ್ಯದಾದ್ಯಂತ ಅತಿಥಿ ಉಪನ್ಯಾಸಕರ ಅನಿರ್ಧಿಷ್ಟಾವಧಿ ಮುಷ್ಕರ ವಿಚಾರವಾಗಿ ಮಾತನಾಡಿ, ಅತಿಥಿ ಉಪನ್ಯಾಸಕರ ಬೇಡಿಕೆ ಬಗ್ಗೆ ಸರ್ಕಾರ ಗೌರವಿಸುತ್ತಿಲ್ಲ. ಸಾಕಷ್ಟು ಶಾಲಾ ಕಾಲೇಜುಗಳಲ್ಲಿ ಶಿಕ್ಷರ ಕೊರತೆ ಇದೆ, ಜೊತೆಗೆ ಹಲಾವಾರು ಸಮಸ್ಯೆ ಇದೆ. ಹೀಗಾದ್ರೆ ಸರ್ಕಾರಿ ಕಾಲೇಜುಗಳಿಗೆ ಪೋಷಕರು ಹೇಗೆ ಸೇರಿಸುತ್ತಾರೆ. ಸರ್ಕಾರಿ ಕಾಲೇಜುಗಳಿಗೆ ಹೆಚ್ಚಿನ ಆಧ್ಯತೆ ನೀಡಬೇಕು. ಶಿಕ್ಷಣಕ್ಕೆ ಹೆಚ್ಚಿನ ಆಧ್ಯತೆ ನೀಡಬೇಕು, ಸರ್ಕಾರಿ ಶಾಲಾ ಕಾಲೇಜಿನ ಮೂಲಸೌಕರ್ಯದ ಆದ್ಯತೆ ನೀಡೋದನ್ನು ಈ ಸರ್ಕಾರದಲ್ಲಿ ಕಾಣುತ್ತಿಲ್ಲ. ಶಿಕ್ಷಣ ಮತ್ತು ಆರೋಗ್ಯ ಕೇಂದ್ರಕ್ಕೆ ಆದ್ಯತೆ ಈ ಸರ್ಕಾರ ನೀಡುತ್ತಿಲ್ಲ.

ಇದರಿಂದ ಪೋಷಕರು ಖಾಸಗಿ ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ, ಇದರಿಂದ ಪೋಷಕರಿಗೆ ಸಾಕಷ್ಟು ಹೊರೆ ಆಗ್ತಾ ಇದೆ. 10 ಸಾವಿರ ಶಿಕ್ಷಕರ ನೇಮಕ ಮಾಡಲು ಪ್ರಪೋಸಲ್ ಕಳ್ಸಿದ್ದೇವೆ ಅಂತ ಇಲಾಖೆ ಹೇಳ್ತಾ ಇದೆ, ಇನ್ನು ಎಷ್ಟು ದಿನ ಬೇಕು ಎಂದು ಪ್ರಶ್ನಿಸಿದರು.
ನುಡಿದಂತೆ ನಡೆದಿದ್ದೇವೆ ಅಂತ ಹೇಳ್ತಾ ಇದ್ದೀರಾ. ನಿಮ್ಮ ಗ್ಯಾರಂಟಿ ಎಷ್ಟುದಿನ ಕೊಡ್ತೀರಾ? ನಿರಂತರವಾಗಿ ಕೊಡಲು ನಿಮಗೆ ಸಾಧ್ಯನಾ, ಸರ್ಕಾರ ಮೇಲೆ ಆಗುವ ಆರ್ಥಿಕ ಹೊರೆ ಏನು ? ಅಭಿವೃದ್ಧಿ ಕಾರ್ಯಗಳ ಮೇಲೆ ಆಗುವ ದುಷ್ಪರಿಣಾಮ ಏನು.? 6 ತಿಂಗಳಿಂದ ನೋಡ್ತಾ ಇದ್ದೇವೆ. ಯಾವುದೇ ಅಭಿವೃದ್ಧಿ ಆಗ್ತಾ ಇಲ್ಲ. ದಿನ ಬೆಳಗ್ಗೆ ಎದ್ರೆ ನೂರಾರು ಕೋಟಿ ವೆಚ್ಚದಲ್ಲಿ ಜಾಹಿರಾತು ನೀಡುತ್ತಿದ್ದಿರಾ. ಎಷ್ಟು ದಿನ ಇದನ್ನ ಹೇಳಿಕೊಂಡು ಹೋಗ್ತೀರಿ. ನಿಮ್ಮ ಎರಡು ಸಾವಿರದಲ್ಲಿ ಜನ ಬದುಕಬಹುದಾದ್ರೆ. ತುಮಕೂರಿನಲ್ಲಿ ಜನ್ಮಕೊಟ್ಟ ತಂದೆನೆ ಮಕ್ಕಳನ್ನ ಕೊಲೆ ಮಾಡಿ ಅವರು ಆತ್ಮಹತ್ಯೆ ಮಾಡಿಕೊಂಡ್ರು. ಆ ಕುಟುಂಬ ನಾಶ ಆಯ್ತಲ್ಲ. ನಿಮ್ಮ ಎರಡು ಸಾವಿರ ರೂ ನಿಂದ ಬದುಕಿಸುತ್ತೀರಾ..? ಜನಗಳ ಆರ್ಥಿಕ ಬದುಕನ್ನು ಕಟ್ಟಿಕೊಳ್ಳೊವ ಕಾರ್ಯಕ್ರಮಗಳನ್ನು ಸರ್ಕಾರ ಕೊಡಬೇಕು ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.












Click it and Unblock the Notifications