ಕೆಆರ್‌ಎಸ್ ಜಲಾಶಯದ ಸುತ್ತ ಗಣಿಗಾರಿಕೆಗೆ ಹೈಕೋರ್ಟ್ ತಡೆ
ಬೆಂಗಳೂರು, ಜನವರಿ 09: ಮಂಡ್ಯ ಜಿಲ್ಲೆಯ ಐತಿಹಾಸಿಕ ಕೆಆರ್‌ಎಸ್ ಜಲಾಶಯದ ಸುತ್ತ 20 ಕಿಲೋಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಗಣಿಗಾರಿಕೆಯನ್ನು ಕರ್ನಾಟಕ ಹೈಕೋರ್ಟ್ ನಿಷೇಧಿಸಿದೆ.
ಅಲ್ಲದೆ, ರಾಜ್ಯದ ಜನರ ಬೆವರು ಮತ್ತು ರಕ್ತ ಹರಿಸಿ ನಿರ್ಮಾಣಗೊಂಡಿರುವ ಕೃಷ್ಣರಾಜ ಸಾಗರ (ಕೆಆರ್‌ಎಸ್) ಸುತ್ತಮುತ್ತ ಗಣಿಗಾರಿಕೆ ನಡೆಸಿದಲ್ಲಿ ಜಲಾಶಯಕ್ಕೆ ಮಾತ್ರವಲ್ಲದೆ, ರಾಜ್ಯಕ್ಕೆ ವಿಪತ್ತು ಎದುರಾಗಬಹುದು ಎಂದು ಹೇಳಿದೆ.

ಮಂಡ್ಯ ಜಿಲ್ಲೆಯ ಚಿನಕುರಳಿ ಗ್ರಾಮದ ಸಿ. ಜಿ. ಕುಮಾರ್ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನಾಗಿ ಪರಿವರ್ತಿಸಿಕೊಂಡ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಆದೇಶಿಸಿದೆ.
ಹೈಕೋರ್ಟ್ ಆದೇಶವೇನು?; ಅಲ್ಲದೆ, ಧನಾಬಾದ್‌ನಲ್ಲಿರುವ ಭಾರತೀಯ ಗಣಿ ಮತ್ತು ಇಂಧನ ಸಂಶೋಧನಾ ಸಂಸ್ಥೆಯಿಂದ ಅಣೆಕಟ್ಟು ಕುರಿತಂತೆ ವೈಜ್ಞಾನಿಕ ಸಮೀಕ್ಷೆಗಾಗಿ ಆದೇಶ ನೀಡಲಾಗಿದೆ. ಸಮೀಕ್ಷೆ ನಡೆಸಿ ವರದಿ ಸಲ್ಲಿಸುವವರೆಗೂ ಅಣೆಕಟ್ಟು ಸುತ್ತಮುತ್ತಲ ಪ್ರದೇಶದಲ್ಲಿ ಯಾವುದೇ ರೀತಿಯಲ್ಲಿಯೂ ಗಣಿಗಾರಿಕೆ ನಡೆಯಬಾರದು ಎಂದು ಪೀಠ ತಿಳಿಸಿದೆ.
ಅಲ್ಲದೇ, ಅಣೆಕಟ್ಟು ಸುತ್ತಮುತ್ತಲ ಭಾಗಗಳಲ್ಲಿ ಹಲವು ಬಾರಿ ದೊಡ್ಡ ಶಬ್ದ ಕೇಳಿ ಬಂದಿದ್ದು, ಈಗಾಗಲೇ ಸಂಕಷ್ಟಕ್ಕೆ ಸಿಲುಕಿದೆ. ಇಂತಹ ಸಂದರ್ಭದಲ್ಲಿ ಅಣೆಕಟ್ಟಿನ ಸುತ್ತಲಲ್ಲಿ ಗಣಿಗಾರಿಕೆಗೆ ಅವಕಾಶ ನೀಡಿದಲ್ಲಿ ಗಂಭೀರ ಪರಿಣಾಮವಾಗಲಿದೆ ಎಂದು ನ್ಯಾಯಪೀಠ ತಿಳಿಸಿತು.
ಜತೆಗೆ, ಕೃಷ್ಣರಾಜ ಸಾಗರ ಅಣೆಕಟ್ಟು ಐತಿಹಾಸಿಕ ಇತಿಹಾಸ ಮತ್ತು ಮೌಲ್ಯವನ್ನು ಹೊಂದಿದೆ. ಮೈಸೂರು ಮಹಾರಾಜರಾದ ನಾಲ್ವಡಿ ಕೃಷ್ಣ ರಾಜ ಒಡೆಯರ್, ದೇಶದ ಹೆಮ್ಮೆಯ ಪುತ್ರ ಸರ್. ಎಂ. ವಿಶ್ವೇಶ್ವರಯ್ಯರ ಕೊಡುಗೆ ದೊಡ್ಡ ಪ್ರಮಾಣದ್ದಾಗಿದೆ. ಕಾವೇರಿ ನೀರಿಗಾಗಿ ಮೂರು ರಾಜ್ಯಗಳು ಹೋರಾಡುತ್ತಿವೆ.
ಆದರೆ, ಕೆಆರ್‌ಎಸ್ ಅಣೆಕಟ್ಟು ಸಂರಕ್ಷಣೆಗೆ ಪ್ರಯತ್ನಿಸುತ್ತಿಲ್ಲ. ಅಣೆಕಟ್ಟೆ ತೊಂದರೆಯಾದರೆ ಆಗುವ ಅನಾಹುತಗಳ ಅರಿವಿದೆಯೇ?. ಅಣೆಕಟ್ಟಿಗೆ ತೊಂದರೆಯಾದರೆ ಇಡೀ ರಾಜ್ಯಕ್ಕೇ ಗಂಭೀರ ಆಪತ್ತು ಬರಲಿದೆ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ತಮ್ಮ ಜಮೀನಿನಲ್ಲಿ ಗಣಿಗಾರಿಕೆ ನಡೆಸುವುದಕ್ಕೆ ಅವಕಾಶ ನೀಡುವಂತೆ ಕೋರಿ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಹಲವು ಷರತ್ತುಗಳೊಂದಿಗೆ ಅನುಮತಿ ನೀಡಿದ್ದರು. ಜತೆಗೆ, ಕಾವೇರಿ ನಿರಾವರಿ ನಿಗಮದ ವತಿಯಿಂದ ನಡೆಸುವ ಪರೀಕ್ಷಾರ್ಥ ಬ್ಲಾಸ್ಟಿಂಗ್ ನಂತರ ಸಲ್ಲಿಸುವ ವರದಿಯನ್ನು ಪರಿಶೀಲಿಸಿ ಸಕ್ಷಮ ಪ್ರಾಧಿಕಾರ ಕೈಗೊಳ್ಳಬಹುದಾದ ನಿರ್ಧಾರಗಳಿಗೆ ಬದ್ದರಾಗಿರಬೇಕು.
ಜತೆಗೆ, ವರದಿ ಬರುವವರೆಗೂ ಪರಿವರ್ತಿತ ಭೂಮಿಯಲ್ಲಿ ಉದ್ದೇಶಿತ ಉಪಯೋಗಕ್ಕೆ ಬಳಕೆ ಮಾಡಿಕೊಳ್ಳುವುದಕ್ಕೆ ಯಾವುದೇ ಅವಕಾಶವಿರುವುದಿಲ್ಲ ಎಂಬುದಾಗಿ ಷರತ್ತು ವಿಧಿಸಲಾಗಿತ್ತು. ಇದನ್ನು ಪ್ರಶ್ನಿಸಿ ಷರತ್ತನ್ನು ರದ್ದುಗೊಳಿಸಬೇಕು ಎಂದು ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಸುಮಲತಾ ಅಂಬರೀಶ್ ಧನ್ಯವಾದ; ಕೆಆರ್‌ಎಸ್ ಸುತ್ತಮುತ್ತ 20 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧ ಮಾಡಿ ಹೊರಡಿಸಿರುವ ಹೈಕೋರ್ಟ್ ಮುಖ್ಯ ವಿಭಾಗೀಯ ಪೀಠದ ಆದೇಶ ಅತ್ಯಂತ ಸೂಕ್ತವಾಗಿದೆ ಎಂದು ಮಂಡ್ಯದ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಇಂಥದ್ದೊಂದು ಮಹತ್ವದ ಆದೇಶವನ್ನು ನೀಡಿರುವ ಹೈಕೋರ್ಟಿನ ನ್ಯಾಯಮೂರ್ತಿಗಳಾದ ಮಾನ್ಯ ಶ್ರೀ ಪಿ. ಬಿ. ವರಾಳೆ ಹಾಗೂ ಶ್ರೀ ಕೃಷ್ಣ. ಎಸ್. ದೀಕ್ಷಿತ್ ಅವರಿಗೆ ಧನ್ಯವಾದಗಳನ್ನು ಅರ್ಪಿಸುವೆ. ಕೆಆರ್‌ಎಸ್ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಬೇಕು ಎನ್ನುವ ನನ್ನ ಬಹುದಿನದ ಹೋರಾಟಕ್ಕೆ ಈ ಆದೇಶ ಮತ್ತಷ್ಟು ಬಲ ತಂದಿದೆ. ನಾವೆಲ್ಲರೂ ಕೆಆರ್‌ಎಸ್ ಅನ್ನು ಉಳಿಸಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.












Click it and Unblock the Notifications