Prajwal Revanna Birthday: ಜೈಲಿನಲ್ಲಿರುವ ಮಗ ಪ್ರಜ್ವಲ್ ಹುಟ್ಟುಹಬ್ಬಕ್ಕೆ ರೇವಣ್ಣ ಮಾಡಿದ್ದೇನು?
ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾರೆ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಹಾಗೂ ಹೆಚ್.ಡಿ.ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ. ಇಂದು ಪ್ರಜ್ವಲ್ ಅವರ ಹುಟ್ಟುಹಬ್ಬ. ರಾಜಕೀಯ ನಾಯಕನೂ ಆಗಿದ್ದರಿಂದ ಪ್ರತಿ ವರ್ಷವೂ ಪ್ರಜ್ವಲ್ ರೇವಣ್ಣ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಸೆಲೆಬ್ರೇಟ್ ಮಾಡಲಾಗುತ್ತಿತ್ತು. ಆದರೆ ಕಳೆದ ಎರಡು ವರ್ಷದಿಂದ ಪ್ರಜ್ವಲ್ ಅವರಿಗೆ ಹುಟ್ಟುಹಬ್ಬದ ಸಂಭ್ರಮವೇ ಇಲ್ಲವಾಗಿದೆ. ಜೀವಾವಧಿ ಶಿಕ್ಷೆಗೆ ಗುರಿಯಾಗಿರುವುದರಿಂದ ಈ ಜನ್ಮದಿನವನ್ನೂ ಅವರು ಜೈಲಿನಲ್ಲೇ ಕಳೆದಿದ್ದಾರೆ. ಇನ್ನು ಮುದ್ದಿನ ಮಗನ ಹುಟ್ಟುಹಬ್ಬದ ಹಿನ್ನೆಲೆ ಹೆಚ್.ಡಿ.ರೇವಣ್ಣ ಅವರು ವಿಶೇಷ ಪೂಜೆ ಮಾಡಿ ಪ್ರಾರ್ಥಿಸಿದ್ದಾರೆ.
ಈ ಬಾರಿ ಪ್ರಜ್ವಲ್ ಅವರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಮಾಡಬೇಕು ಎಂದುಕೊಂಡಿದ್ದರು. ಅತ್ಯಾಚಾರ ಕೇಸ್‌ನಲ್ಲಿ ಒಂದು ವರ್ಷದಿಂದಲೂ ಜೈಲಿನಲ್ಲೇ ಇದಿದ್ದರಿಂದ ಕಳೆದ ವರ್ಷದ ಹುಟ್ಟುಹಬ್ಬ ಕೂಡ ಆಚರಿಸಲು ಸಾಧ್ಯವಾಗಿರಲಿಲ್ಲ. ಮಹಿಳೆಯರ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿದ್ದ ಅವರಿಗೆ ಎರಡು ವರ್ಷದಿಂದಲೂ ಹುಟ್ಟುಹಬ್ಬ ಆಚರಿಸಿಕೊಳ್ಳುವ ಭಾಗ್ಯ ಇಲ್ಲವಾಗಿದೆ. ಹಾಗಾಗಿ ಈ ಬಾರಿಯ ಹುಟ್ಟುಹಬ್ಬದ ದಿನ ಕೂಡ ಜೈಲಿನಲ್ಲೇ ಕಳೆಯುತ್ತಿದ್ದಾರೆ ಪ್ರಜ್ವಲ್. ಇನ್ನುಧಾರ್ಮಿಕವಾಗಿ ಹೆಚ್ಚು ಪೂಜೆ, ಪುನಸ್ಕಾರಗಳಿಗೆ ಒತ್ತು ಕೊಡುವ ತಂದೆ ಹೆಚ್.ಡಿ.ರೇವಣ್ಣ ಅವರು ಮಗನ ಹುಟ್ಟುಹಬ್ಬಕ್ಕಾಗಿ ಶೃಂಗೇರಿ ಶಾರದಾಂಬೆಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಸೋಮವಾರವೇ ಶೃಂಗೇರಿಗೆ ತೆರಳಿದ್ದ ರೇವಣ್ಣ ಅವರು ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಿದ್ದರು. ಬಳಿಕ ಶೃಂಗೇರಿ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದಿದ್ದರು. ಇಂದು ಮುಂಜಾನೆಯೇ ಅವರು ಶಾರದಾಂಬೆಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವೇಗೌಡರ ಕುಟುಂಬವು ಸುಮಾರು 50 ವರ್ಷಗಳಿಂದ ಶಾರದಾಂಬೆಯ ಭಕ್ತರಾಗಿದ್ದು, ಇಂದು ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬದ ಹಿನ್ನೆಲೆ ಮಗನಿಗಾಗಿ ಪ್ರಾರ್ಥಿಸಿದ್ದಾರೆ ಎನ್ನಲಾಗಿದೆ.
ಇನ್ನು ಹಾಸನ ಕ್ಷೇತ್ರದಲ್ಲಿ ಪ್ರಜ್ವಲ್ ರೇವಣ್ಣ ಅವರ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಹಾಸನದಲ್ಲಿರುವ ಪ್ರಜ್ವಲ್ ಅಧಿಕೃತ ನಿವಾಸದ ಬಳಿಯೂ ಪಕ್ಷದ ಕಾರ್ಯಕರ್ತರು, ಬೆಂಬಲಿಗರು ಜಮಾಯಿಸುತ್ತಿದ್ದರು. ಪ್ರತೀ ವರ್ಷವೂ ಪ್ರಜ್ವಲ್ ಜನ್ಮದಿನದ ಸಂದರ್ಭದಲ್ಲಿ ಸಾವಿರಾರು ಜೆಡಿಎಸ್ ಕಾರ್ಯಕರ್ತರು ಅವರ ಮನೆಯ ಬಳಿ ಬಂದು ಜನ್ಮದಿನದ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಈ ಬಾರಿ ಪ್ರಜ್ವಲ್‌ಗೆ ಅಪರಾಧಿಯಾಗಿ ಜೈಲಿನಲ್ಲಿರುವುದರಿಂದ ಅವರ ನಿವಾಸ ಬಿಕೋ ಎನ್ನುತ್ತಿದೆ. ಅವರ ನಿವಾಸಗಳು, ಕಚೇರಿಗಳು ಕೂಡ ಜನರಿಲ್ಲದೆ ಖಾಲಿ ಖಾಲಿಯಾಗಿ ಕಾಣಿಸಿಕೊಂಡಿದೆ.
ಪ್ರಜ್ವಲ್ ಭೇಟಿಗೆ ಹೋಗದ ಕುಟುಂಬಸ್ಥರು
ಪ್ರಜ್ವಲ್ ರೇವಣ್ಣ ತೀರ್ಪು ಪ್ರಕಟಿಸುವ ಮುನ್ನ ತನ್ನ ತಂದೆ ತಾಯಿಯನ್ನ ನೋಡಿ ಆರು ತಿಂಗಳಾಯಿತು ಎಂದು ಕೋರ್ಟ್‌ನಲ್ಲಿ ಕಣ್ಣೀರಿಟ್ಟಿದ್ದರು. ಅಲ್ಲದೆ ತೀರ್ಪು ಪ್ರಕಟಿಸುವ ದಿನವೂ ರೇವಣ್ಣ ಕುಟುಂಬದ ಯಾರೂ ಕೂಡ ಕೋರ್ಟ್‌ಗೆ ಬಂದಿರಲಿಲ್ಲ. ಇಂದು ಪ್ರಜ್ವಲ್ ಅವರ ಹುಟ್ಟುಹಬ್ಬವಿದ್ದರೂ ಅವರನ್ನು ನೋಡಲು ಪರಪ್ಪನ ಅಗ್ರಹಾರಕ್ಕೆ ಈವರೆಗೆ ಹೋಗಿಲ್ಲ ಎಂದು ತಿಳಿದುಬಂದಿದೆ.












Click it and Unblock the Notifications