ಸಿಡಿ ಬಿಟ್ರಲ್ಲಾ ಅದೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ಕೊಟ್ಟ ಕೊಡುಗೆ: ಡಿಕೆಶಿ ಗೆ ತಿರುಗೇಟು ಕೊಟ್ಟ ಹೆಚ್ ಡಿ ಕುಮಾರಸ್ವಾಮಿ
ಹಾಸನ, ಡಿಸೆಂಬರ್ 23: ಹಾಸನ ಜಿಲ್ಲೆಗೆ ದೇವೇಗೌಡರ ಕುಟುಂಬದ ಕೊಡುಗೆ ಏನು ಎಂದು ಕೇಳಿರುವ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಹಾಗಾದರೆ ಈ ಜಿಲ್ಲೆಗೆ ಕಾಂಗ್ರೆಸ್ ನಾಯಕರ ಕೊಡುಗೆ ಏನು? ಎಂದು ಕೇಳಿದ್ದಾರೆ. ಕಾಂಗ್ರೆಸ್ ನಾಯಕರ ಕೊಡುಗೆ ಅದೆಂತಹದ್ದು ಎನ್ನುವುದು ನನಗೆ ಗೊತ್ತಿದೆ. ಸಿಡಿ ಬಿಟ್ರಲ್ಲಾ, ಅದೇ ತಾನೇ ಹಾಸನ ಜಿಲ್ಲೆಗೆ ಕಾಂಗ್ರೆಸ್ ನವರ ಕೊಡುಗೆ? ಅದು ಬಿಟ್ಟು ಹಾಸನ ಜಿಲ್ಲೆಗೆ ಅವರು ಏನು ಕೊಟ್ಟಿದ್ದಾರೆ? ಎಂದು ಪ್ರಶ್ನಿಸಿದರು.
ಇವತ್ತು ಹಾಸನ ಜಿಲ್ಲೆ ಅಭಿವೃದ್ಧಿ ಕಂಡಿದ್ದರೆ ದೇವೇಗೌಡರು, ರೇವಣ್ಣ ಹಾಗೂ ನಾನು ಮುಖ್ಯಮಂತ್ರಿ ಇದ್ದಾಗ ಆಗಿದ್ದು. ನಾನು ನನ್ನದೇ ಆದಂತಹ ಜವಾಬ್ದಾರಿ ನಿರ್ವಹಣೆ ಮಾಡಿದ್ದೇನೆ. ಇವರೇನು ಕೊಟ್ಟಿದ್ದಾರೆ, ಹಾಸನದ ಫ್ಲೈ ಓವರ್ ರೆಡಿ ಮಾಡಲು ಆಗಲಿಲ್ಲ ಇವರ ಯೋಗ್ಯತೆಗೆ ಎಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು.

ನಾವೇನಾದರೂ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿ ಸಾಕ್ಷಿಗುಡ್ಡೆಗಳನ್ನು ನಿರ್ಮಾಣ ಮಾಡಿದರೆ ತೋರಿಸಬಹುದಿತ್ತು. ಅವರು ಸಾರ್ವಜನಿಕರ ಆಸ್ತಿ, ಸರ್ಕಾರದ ಆಸ್ತಿ, ಪ್ರಕೃತಿಯನ್ನು ಲೂಟಿ ಹೊಡೆದಿರುವುದಕ್ಕೆ ಸಾಕ್ಷಿ ಇದೆ. ನಾವು ಎಲ್ಲಿಂದ ತರೋದು ಸಾಕ್ಷಿ ಗುಡ್ಡೆನಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಲ್ಬುರ್ಗಿಯಲ್ಲಿ ಸಿಎಂ ಅವರು ಜಯದೇಶ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಆ ಆಸ್ಪತ್ರೆಗೆ ಏನಿದೆ ಅವರ ಕೊಡುಗೆ? ನಾನು ಸಿಎಂ ಆಗಿದ್ದಾಗ ಅದಕ್ಕೆ ಚಾಲನೆ ಕೊಟ್ಟಿದ್ದೆ. ನಂತರ ಬಂದ ಬಿಜೆಪಿ ಸರಕಾರ ₹128 ಕೋಟಿ ಹಣ ಬಿಡುಗಡೆ ಮಾಡಿತ್ತು. ಜಯದೇವ ಆಸ್ಪತ್ರೆಯಿಂದ ಡಾ.ಸಿ.ಎನ್.ಮಂಜುನಾಥ್ ಅವರು ₹40 ಕೋಟಿ ಸಂಗ್ರಹಿಸಿ ಹೂಡಿಕೆ ಮಾಡಿದ್ದರು. ಹಿಂದೆ ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳುವಂತಹ ಕೃತಜ್ಞತೆ ಇಲ್ಲದಂತಹ ಅನಾಗರೀಕ ಸರಕಾರ ಇದು. ಇವರ ಕೊಡುಗೆ ಏನೂ ಇಲ್ಲ. ಈಗ ನೋಡಿದರೆ ನಿಮ್ಹಾನ್ಸ್ ಮಾಡ್ತಾರಂತೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.
ಸದ್ಯಕ್ಕೆ ಇರುವ ಆಸ್ಪತ್ರೆಗಳನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಬಾಣಂತಿಯರು, ಮಕ್ಕಳ ಸರಣಿ ಸಾವು ಮುಂದುವರಿದೆ. ಬಹಳ ನೋವಾಗುತ್ತದೆ. ಇದನ್ನೆಲ್ಲಾ ತಡೆಯಲು ಏನು ಕ್ರಮ ತೆಗೆದುಕೊಂಡಿದ್ದೀರಿ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ನೀವು ರಾಜ್ಯ ಕಟ್ಟುತ್ತೀರಾ? ಎಂದು ಅವರು ಹೇಳಿದರು.












Click it and Unblock the Notifications