ಮುಖ್ಯಮಂತ್ರಿ ಕುಮಾರಸ್ವಾಮಿ-ಪ್ರಧಾನಿ ಮೋದಿ ಭೇಟಿ ಮುಂದೂಡಿಕೆ
ಬೆಂಗಳೂರು, ಮೇ 27: ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಭೇಟಿಯ ಅವಧಿಯನ್ನು ಸೋಮವಾರ ಸಂಜೆಗೆ ಮುಂದೂಡಲಾಗಿದೆ.
ಸೋಮವಾರ ಬೆಳಿಗ್ಗೆ ದೆಹಲಿಗೆ ತೆರಳಲಿರುವ ಎಚ್.ಡಿ. ಕುಮಾರಸ್ವಾಮಿ ಅವರು, ಸಂಜೆ 5.30ಕ್ಕೆ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಲು ಪ್ರಧಾನಮಂತ್ರಿಗಳ ಕಚೇರಿ ಸಮಯ ನಿಗದಿ ಮಾಡಿದೆ.
ಕುಮಾರಸ್ವಾಮಿ ಅವರು ಪ್ರಧಾನಿಯ ಭೇಟಿಗೆ ಸಮಯಾವಕಾಶ ಕೋರಿದ್ದರು. ಅದರಂತೆ ಪ್ರಧಾನಿ ಕಚೇರಿ ಸೋಮವಾರ ಬೆಳಿಗ್ಗೆ 11 ಗಂಟೆಗೆ ಸಮಯ ನಿಗದಿಪಡಿಸಿತ್ತು.
ಇದರಂತೆ ಕುಮಾರಸ್ವಾಮಿ ಅವರು ಸೋಮವಾರ ರಾತ್ರಿ 9 ಗಂಟೆಗೇ ದೆಹಲಿಗೆ ತೆರಳಬೇಕಿತ್ತು. ಆದರೆ, ಪ್ರಧಾನಿ ಕಚೇರಿ ಸಮಯ ಬದಲಾವಣೆ ಮಾಡಿದ ಕಾರಣಕ್ಕೆ ಕುಮಾರಸ್ವಾಮಿ ಅವರ ಪ್ರಯಾಣವನ್ನು ಮುಂದೂಡಲಾಗಿದೆ.

ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡಿದ ಬಳಿಕ ಸೋಮವಾರ ರಾತ್ರಿ 11.30ರ ಸುಮಾರಿಗೆ ಕುಮಾರಸ್ವಾಮಿ ಅವರು ರಾಜ್ಯಕ್ಕೆ ಮರಳಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅದಕ್ಕೂ ಮೊದಲು ಮಧ್ಯಾಹ್ನ 3.3೦ರ ಸುಮಾರಿಗೆ ಅವರು ರಾಜ್‌ಘಾಟ್‌ಗೆ ಭೇಟಿ ನೀಡಲಿದ್ದಾರೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಕುಮಾರಸ್ವಾಮಿ ಅವರು ಇದೇ ಮೊದಲ ಬಾರಿಗೆ ಪ್ರಧಾನಿ ಅವರನ್ನು ಭೇಟಿ ಮಾಡಲಿದ್ದಾರೆ.
ಬೆಳಿಗ್ಗೆ ದೆಹಲಿಗೆ ತೆರಳಲಿರುವ ಕುಮಾರಸ್ವಾಮಿ ಅವರು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರೊಂದಿಗೆ ಸಂಪುಟ ರಚನೆ ಸಂಬಂಧ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.











Click it and Unblock the Notifications