ಗೃಹಲಕ್ಷ್ಮಿ ಯೋಜನೆ: ಮಹಿಳೆಯರಲ್ಲಿ ವಿಶೇಷ ಮನವಿ ಮಾಡಿದ ಸಿಎಂ ಸಿದ್ದರಾಮಯ್ಯ
ಮಹತ್ವದ ಗೃಹಲಕ್ಷ್ಮಿ ಯೋಜನೆಗೆ ಜುಲೈ 19ರಂದು ಚಾಲನೆ ನೀಡಲಾಗುತ್ತಿದೆ. ಬಿಪಿಎಲ್, ಎಪಿಎಲ್, ಅಂತ್ಯೋದಯ ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಮನೆ ಯಜಮಾನಿ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು ಎರಡು ಸಾವಿರ ರೂಪಾಯಿ ಹಾಕುವ ಮಹತ್ವದ ಯೋಜನೆ ಇದಾಗಿದೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಈ ಮಹತ್ವದ ಯೋಜನೆಗೆ ಚಾಲನೆ ನೀಡಲಿದ್ದಾರೆ. ಬಾಪೂಜಿ ಕೇಂದ್ರ, ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಆಗಸ್ಟ್ 17 ಅಥವಾ 18ರಂದು ನೋಂದಣಿ ಮಾಡಿಕೊಂಡ ಫಲಾನುಭವಿಗಳ ಕುಟುಂಬಗಳಿಗೆ ಹಣ ವರ್ಗಾವಣೆ ಮಾಡಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾಹಿತ ನೀಡಿದ್ದಾರೆ.
ಮಹಿಳೆಯರಿಗೆ ಸಿಎಂ ವಿಶೇಷ ಮನವಿ
ಇನ್ನು ಇಂದು ಗೃಹಲಕ್ಷ್ಮಿ ಯೋಜನೆ ಅರ್ಜಿ ಸ್ವೀಕರಿಸಲು ಚಾಲನೆ ನೀಡಲಿರುವ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜ್ಯದ ಮಹಿಳೆಯರಿಗೆ ವಿಶೇಷ ಮನವಿ ಮಾಡಿದ್ದಾರೆ. ಯೋಜನೆ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡು ಮನವಿ ಮಾಡಿದ್ದಾರೆ.
ಟ್ವೀಟ್ ಮಾಡಿರುವ ಅವರು, " ಅಗತ್ಯ ವಸ್ತುಗಳ ಬೆಲೆಯೇರಿಕೆಯಿಂದ ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವ ನಾಡಿನ ಮಹಿಳೆಯರಿಗೆ ಆರ್ಥಿಕ ನೆರವು ನೀಡಿ, ನೆಮ್ಮದಿಯ ನಾಳೆಗಳನ್ನು ಕಲ್ಪಿಸಿಕೊಡುವ ಉದ್ದೇಶದೊಂದಿಗೆ ನಾವು ಜಾರಿಗೊಳಿಸಿರುವ ಮಹತ್ವಾಕಾಂಕ್ಷೆಯ "ಗೃಹಲಕ್ಷ್ಮಿ" ಯೋಜನೆಯ ಅರ್ಜಿ ಸಲ್ಲಿಕೆಯು ಇಂದಿನಿಂದ ಆರಂಭಗೊಂಡಿದ್ದು, ಅರ್ಹ ಕುಟುಂಬಗಳ ಯಜಮಾನಿಯರು ತಪ್ಪದೇ ಅರ್ಜಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬೇಕೆಂದು ಮನವಿ ಮಾಡುತ್ತೇನೆ." ಎಂದು ಹೇಳಿದ್ದಾರೆ.
ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಹಾಗೂ ಬಾಪೂಜಿ ಸೇವಾ ಕೇಂದ್ರದಲ್ಲಿ ಉಚಿತವಾಗಿ ನೋಂದಾಯಿಸಿ ಅಥವಾ ಅಧಿಕೃತ 'ಪ್ರಜಾ ಪ್ರತಿನಿಧಿ' ಸ್ವಯಂ ಸೇವಕರು ನಿಮ್ಮ ಮನೆ ಬಾಗಿಲಲ್ಲೇ ಉಚಿತವಾಗಿ ನೋಂದಣಿ ಮಾಡಲಿದ್ದಾರೆ
ಕನಿಷ್ಠ ನಿಬಂಧನೆ, ಸರಳ ಅರ್ಜಿ ಪ್ರಕ್ರಿಯೆಯ ಮೂಲಕ ಅತಿ ಹೆಚ್ಚು ಜನರಿಗೆ ಯೋಜನೆಯ ಲಾಭ ತಲುಪಿಸಬೇಕೆಂಬುದು ನಮ್ಮ ಉದ್ದೇಶ. ನಮ್ಮ ಈ ಕಾರ್ಯ ಯಶಸ್ವಿಯಾಗಲು ನಿಮ್ಮೆಲ್ಲರ ಸಹಕಾರವಿರಲಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿದ್ದಾರೆ.
ನೋಂದಣಿ ಉಚಿತ
ಈ ಅರ್ಜಿ ಸಲ್ಲಿಸಲು ಯಾವುದೇ ಶುಲ್ಕವನ್ನು ವಿಧಿಸುತ್ತಿಲ್ಲ, ಅರ್ಜಿ ಸಲ್ಲಿಸುವ ಸಮಯ, ದಿನಾಂಕ ಮತ್ತು ಕೇಂದ್ರದ ಮಾಹಿತಿ ಈಗಾಗಲೇ ಗುರುತಿಸಿರುವ ಫಲಾನುಭವಿಗಳ ಮೊಬೈಲ್ ಸಂಖ್ಯೆಗೆ ಬರಲಿದ್ದು, ಅದರಂತೆ ಸಮೀಪದ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡಿಕೊಳ್ಳುವಂತೆ ಸೂಚನೆ ನೀಡಲಾಗಿದೆ.












Click it and Unblock the Notifications