ಸರ್ಕಾರದಿಂದ ಉಚಿತ ವಿದ್ಯುತ್ ಘೋಷಣೆ: ದುರುಪಯೋಗಕ್ಕೆ ಪ್ರಚೋದಿಸುತ್ತಿರುವ ಬಿಜೆಪಿ: ಸಿಎಂ
ಬೆಂಗಳೂರು, ಜೂನ್ 06: ಜನರಿಗಾಗಿ 200 ಯೂನಿಟ್‌ವರೆಗಿನ ಉಚಿತ ವಿದ್ಯುತ್ ಯೋಜನೆ ನೀಡಿದ್ದೇವೆ. ಅದರ ದುರುಪಯೋಗಕ್ಕೆ ಭಾರತೀಯ ಜನತಾ ಪಕ್ಷ (ಬಿಜೆಪಿ) ಪ್ರಚೋದನೆ ನೀಡುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.
ಬೆಂಗಳೂರಿನಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆಯನ್ನು ಉದ್ಘಾಟಿಸಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ರಾಜ್ಯದಲ್ಲಿ ಸಂಕಷ್ಟದಲ್ಲಿರುವ ಬಡ ಹಾಗೂ ಮಧ್ಯಮ ವರ್ಗದ ಜನರ ನೆರವಿಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. ಗ್ರಾಹಕರ ಒಂದು ವರ್ಷದ ಸರಾಸರಿ ಬಳಕೆಗಿಂತ ಶೇ.10ರಷ್ಟು ಹೆಚ್ಚಳ ಮಾಡಿ ಅದರ ಆಧಾರದಲ್ಲಿ ಉಚಿತ ವಿದ್ಯುತ್ ಒದಗಿಸಲಾಗುವುದು. ಸರ್ಕಾರದ ಈ ನಿರ್ಧಾರವನ್ನು ಜನ ಸ್ವಾಗತಿಸಿದ್ದಾರೆ ಎಂದರು.

ಆದರೆ ಜನರಿಂದ ತಿರಸ್ಕೃತಗೊಂಡಿರುವ ರಾಜ್ಯ ಬಿಜೆಪಿ ವಿದ್ಯುತ್ ದುರ್ಬಳಕೆ ಮತ್ತು ದುಂದುವೆಚ್ಚಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಹೇಳುತ್ತಿದೆ. ಇದು ಜನವಿರೋಧಿ ನಡೆಯಾಗಿದೆ. ರಾಜ್ಯದ ಪ್ರಜ್ಞಾವಂತರು ಇದಕ್ಕೆ ಮಣಿಯುವುದಿಲ್ಲ ಎಂಬ ಭರವಸೆ ನಮಗಿದೆ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಪ್ರಕೃತಿಯ ಮಹತ್ವ ತಿಳಿಸಿದ ಸಿಎಂ
ಮನುಷ್ಯ ಈ ಪ್ರಕೃತಿಯ ಅವಿಭಾಜ್ಯ ಅಂಗವೇ ಆಗಿದ್ದಾನೆ. ಪ್ರಕೃತಿ ವಿನಾಶವಾದರೆ ಅದು ನಮ್ಮ ನಾಶವಾದಂತೆ. ಹೀಗಾಗಿ ನಾವು ಪರಿಸರ ಪ್ರೀತಿಸುತ್ತಲೇ ಪ್ರಕೃತಿಯೊಂದಿಗೆ ಬೆಳೆದು ಬದುಕಬೇಕು ಎಂದು ಪರಿಸರದ ಮಹತ್ವ ತಿಳಿಸಿದರು.
ಪರಿಸರ ಸಂರಕ್ಷಣೆ, ಬೆಳೆಸುವುದು ಮತ್ತು ಅರಣ್ಯ ಬೆಳೆಸುವುದು ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲದೆ ಪ್ರತಿಯೊಬ್ಬರ ಜವಾಬ್ದಾರಿ ಆಗಿದೆ. ಪ್ರಕೃತಿಯಿಂದ ಲಾಭ ಪಡೆಯುತ್ತಿರುವ ಪ್ರತಿಯೊಬ್ಬರಿಗೂ ಪ್ರಕೃತಿಯನ್ನು ಉಳಿಸುವ ಜವಾಬ್ದಾರಿ ನಿರ್ವಹಿಸಬೇಕು.

ವಿಶ್ವ ಪರಿಸರ ದಿನವು ಜೂನ್ 5 ರಂದು ನಡೆದ ಜಾಗತಿಕ ಕಾರ್ಯಕ್ರಮವಾಗಿದೆ. ಈ ದಿನವು ಸುಸ್ಥಿರ ಅಭಿವೃದ್ಧಿಯ ಅಭ್ಯಾಸಕ್ಕಾಗಿ ಶ್ರೇಷ್ಠ ಜಾಗತಿಕ ವಕಾಲತ್ತು ವೇದಿಕೆಯಾಗಿದೆ. ಪ್ರಸ್ತುತ ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಭವಿಷ್ಯದ ನವಪೀಳಿಗೆಗೆ ಈ ಸಂಪನ್ಮೂಲಗಳ ಕೊರತೆ ಕಾಡುವ ಸಾಧ್ಯತೆಯಿದೆ. ಭವಿಷ್ಯದ ಪೀಳಿಗೆಯ ಬೇಡಿಕೆಗಳನ್ನು ಪೂರೈಸುವ ಸಲುವಾಗಿ ಪರಿಸರವನ್ನು ರಕ್ಷಿಸಬೇಕು ಎಂದು ಅರಿವು ಮೂಡಿಸಿದರು.
#BeatPlasticPollution ಅಭಿಯಾನದ ಭಾಗವಾಗಿ 'Ecosystem Restoration' ಎಂಬುದು ವಿಶ್ವ ಪರಿಸರ ದಿನದ 2023ರ ವಿಷಯವಾಗಿದೆ. ಪ್ಲಾಸ್ಟಿಕ್ ವಸ್ತುವು ಕ್ರಮೇಣ ಸಮುದ್ರಗಳು, ಮಣ್ಣು ಮತ್ತು ಕಾಡುಗಳಿಗೆ ನುಗ್ಗಿ, ಬದಲಾಯಿಸಲಾಗದ ಹಾನಿ ಉಂಟು ಮಾಡುವುದರಿಂದ ಪ್ಲಾಸ್ಟಿಕ್ ಮುಕ್ತ ಬದುಕಿನ ಕಡೆಗೆ ಜನರ ಒಲವು ಹೊಂದಬೇಕಿದೆ ಎಂದು ಹೇಳಿದರು.












Click it and Unblock the Notifications