ಮಾರ್ಚ್ 1ರ ಸರ್ಕಾರಿ ನೌಕರರ ಮುಷ್ಕರ; ಅರ್ಹ ರಜೆ ಎಂದು ಪರಿಗಣಿಸಿ ಆದೇಶ
ಬೆಂಗಳೂರು, ಮಾರ್ಚ್ 27; ಕರ್ನಾಟಕದ ಸರ್ಕಾರಿ ನೌಕರರು 7ನೇ ವೇತನ ಆಯೋಗದ ಶಿಫಾರಸು ಜಾರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾರ್ಚ್ 1ರಂದು ಅನಿರ್ಧಿಷ್ಟಾವಧಿ ಮುಷ್ಕರ ಆರಂಭಿಸಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮುಷ್ಕರ ಅಂತ್ಯಗೊಳಿಸಲಾಗಿತ್ತು. ಮುಷ್ಕರದ ದಿನ ಕರ್ತವ್ಯಕ್ಕೆ ಗೈರು ಹಾಜರಾದುದನ್ನು ನೌಕರರ ಹಕ್ಕಿನಲ್ಲಿರುವ ಅಥವ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಲು ಆದೇಶ ಹೊರಡಿಸಲಾಗಿದೆ.
ಸೋಮವಾರ ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಸರ್ಕಾರದ ಅಧೀನ ಕಾರ್ಯದರ್ಶಿ (ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ, (ಸೇವಾ ನಿಯಮಗಳು-2) ನಾಗರತ್ನ ವಿ. ಪಾಟೀಲ್ ಈ ಕುರಿತು ಆದೇಶ ಹೊರಡಿಸಿದ್ದಾರೆ. ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರ ಪತ್ರವನ್ನು ಉಲ್ಲೇಖಿಸಿ ಈ ಕುರಿತು ಆದೇಶಿಸಲಾಗಿದೆ.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ದಿನಾಂಕ 1/3/2023ರಂದು ನಡೆದ ಮುಷ್ಕರದಲ್ಲಿ ಭಾಗವಹಿಸಿದ ಕಾರಣದಿಂದಾಗಿ ಕಛೇರಿಗೆ ಗೈರು ಹಾಜರಾದ ನೌಕರರಿಗೆ ಅಂದಿನ ದಿನವನ್ನು ನೌಕರರ ಹಕ್ಕಿನಲ್ಲಿರುವ ಮತ್ತು ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಿ ಆದೇಶ ಹೊರಡಿಸಲು ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ, ಬೆಂಗಳೂರು ಇವರು ಸರ್ಕಾರವನ್ನು ಕೋರಿದ್ದರು.
ಈ ಕೋರಿಕೆಯನ್ನು ಪರಿಶೀಲಿಸಿ ಸರ್ಕಾರವು ಈ ಆದೇಶ ಹೊರಡಿಸಿದೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕರೆಯ ಮೇರೆಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರು ದಿನಾಂಕ 1/3/2023ರಂದು ಮುಷ್ಕರ ಮಾಡಿ ಕಚೇರಿಗೆ ಗೈರು ಹಾಜರಾದುದನ್ನು, ಆ ದಿನಾಂಕದಂದು ನೌಕರರ ಹಕ್ಕಿನಲ್ಲಿರುವ ರಜೆ ಅಥವಾ ಪಡೆಯಲು ಅರ್ಹರಿರುವ ರಜೆ ಎಂದು ಪರಿಗಣಿಸಲು ಆದೇಶಿಸಿದೆ ಎಂದು ಸೋಮವಾರ ಹೊರಡಿಸಿರುವ ಆದೇಶಲ್ಲಿ ತಿಳಿಸಲಾಗಿದೆ.
ವೇತನ ಹೆಚ್ಚಳ ಮಾಡಲಾಗಿತ್ತು; ಮಾರ್ಚ್ 1ರಂದು ಒಂದು ಕಡೆ ನೌಕರರು ಮುಷ್ಕರ ಆರಂಭಿಸಿದರೆ ಮತ್ತೊಂದು ಕಡೆ ಹಣಕಾಸು ಸಚಿವರೂ ಆದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಸಭೆ ನಡೆಸಿದರು. ಆರ್. ಟಿ. ನಗರ ನಿವಾಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ. ಎಸ್. ಷಡಕ್ಷರಿ ನೇತೃತ್ವದಲ್ಲಿ ಹಲವು ಪದಾಧಿಕಾರಿಗಳು ಭೇಟಿ ನೀಡಿ ಸಭೆಯಲ್ಲಿ ಪಾಲ್ಗೊಂಡರು. ನೌಕರರ ಬೇಡಿಕೆ ಕುರಿತು ಮುಖ್ಯಮಂತ್ರಿಗಳು ನಿಯೋಗದ ಜೊತೆ ಸುದೀರ್ಘ ಮಾತುಕತೆಯನ್ನು ನಡೆಸಿದರು. ಬಳಿಕ ಗೃಹ ಕಚೇರಿ ಕೃಷ್ಣಾಗೆ ತೆರಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿ ಹಣಕಾಸು ಇಲಾಖೆ ಅಧಿಕಾರಿಗಳ ಜೊತೆ ನೌಕರರ ಬೇಡಿಕೆಗಳ ಕುರಿತು ಚರ್ಚೆ ನಡೆಸಿದರು. ಬಳಿಕ ಮುಖ್ಯಮಂತ್ರಿಗಳು ಮಾತನಾಡಿ, "ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ತೀರ್ಮಾನ ಆಗಿದೆ. ಈ ಕುರಿತು ಶೀಘ್ರದಲ್ಲೇ ಆದೇಶ ಪ್ರಕಟವಾಗಲಿದೆ. ನೌಕರರು ಮುಷ್ಕರ ವಾಪಸ್ ಪಡೆಯುವ ನಿರೀಕ್ಷೆ ಇದೆ" ಎಂದು ಹೇಳಿದ್ದರು. ಬಳಿಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಹಣಕಾಸು ಇಲಾಖೆ ಅಧಿಕಾರಿಗಳು ಸಭೆ ನಡೆಸಿದ್ದರು.
ಬಳಿಕ ಸರ್ಕಾರಿ ನೌಕರರಿಗೆ ಮಧ್ಯಂತರವಾಗಿ ಶೇ 17ರಷ್ಟು ವೇತನ ಹೆಚ್ಚಳ ಮಾಡುವ ಬಗ್ಗೆ ಅಧಿಕೃತವಾದ ಆದೇಶ ಪ್ರಕಟವಾಗಿತ್ತು. ದಿನಾಂಕ 19/11/2022ರ ಸರ್ಕಾರಿ ಆದೇಶದಲ್ಲಿ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳನ್ನು ಪರಿಶೀಲಿಸಲು 7ನೇ ರಾಜ್ಯ ವೇತನ ಆಯೋಗವನ್ನು ರಚಿಸಿ ಆದೇಶಗಳನ್ನು ಹೊರಡಿಸಲಾಗಿರುತ್ತದೆ. ಪ್ರಸ್ತುತ ರಾಜ್ಯ ಸರ್ಕಾರಿ ನೌಕರರ ಬೇಡಿಕೆಗಳ ಹಿನ್ನೆಲೆಯಲ್ಲಿ, ಸರ್ಕಾರದ ನೀತಿ ನಿರ್ಣಯದಂತೆ 7ನೇ ರಾಜ್ಯ ವೇತನ ಆಯೋಗದ ಅಂತಿಮ ವರದಿಯನ್ನು ಕಾಯ್ದಿರಿಸಿ, 2018ರ ಪರಿಷ್ಕೃತ ವೇತನ ಶ್ರೇಣಿಗಳಲ್ಲಿ ವೇತನವನ್ನು ಪಡೆಯುತ್ತಿರುವ ರಾಜ್ಯ ಸರ್ಕಾರಿ ನೌಕರರುಗಳಿಗೆ 1ನೇ ಏಪ್ರಿಲ್ 2023 ರಿಂದ ಜಾರಿಗೆ ಬರುವಂತೆ ಮೂಲ ವೇತನದ ಶೇಕಡ 17 ರಷ್ಟು ಮಧ್ಯಂತರ ಪರಿಹಾರವನ್ನು ಮಂಜೂರು ಮಾಡಲು ಸರ್ಕಾರವು ಹರ್ಷಿಸುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿತ್ತು. ಆದೇಶ ಪ್ರಕಟವಾದ ಬಳಿಕ ಮುಷ್ಕರವನ್ನು ನೌಕರರು ವಾಪಸ್ ಪಡೆದಿದ್ದರು.












Click it and Unblock the Notifications