ಡಿಕೆಶಿ ಭೇಟಿಯಾದ ಮಾಜಿ ಸಚಿವ, ಕಾಂಗ್ರೆಸ್ ಸೇರ್ಪಡೆ?
ಬೆಂಗಳೂರು, ಜನವರಿ 10; ಮಾಜಿ ಸಚಿವ, ಮುಳಬಾಗಿಲು ಕ್ಷೇತ್ರದ ಪಕ್ಷೇತರ ಶಾಸಕ ಹೆಚ್. ನಾಗೇಶ್ ಕಾಂಗ್ರೆಸ್ ಸೇರಲಿದ್ದಾರೆಯೇ?. ಬಿಜೆಪಿ ಸರ್ಕಾರ ರಚನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರಿಗೆ ಪ್ರಭಾವಿ ಅಬಕಾರಿ ಖಾತೆಯನ್ನು ನೀಡಲಾಗಿತ್ತು.
ಹೆಚ್. ನಾಗೇಶ್ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಮಾಡಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಸೇರುವ ಕುರಿತು ಯಾವುದೇ ಅಂತಿಮ ತೀರ್ಮಾನವನ್ನು ಪ್ರಕಟಿಸಿಲ್ಲ. ಒಂದು ವೇಳೆ ಪಕ್ಷ ಸೇರಿದರೆ ಮುಂದಿನ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗುವ ನಿರೀಕ್ಷೆ ಇದೆ.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಕಾರಣವಾದ ಹೆಚ್. ನಾಗೇಶ್ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸಂಪುಟದಲ್ಲಿ ಅಬಕಾರಿ ಖಾತೆ ಸಚಿವರಾಗಿದ್ದರು. ಸಂಪುಟ ಪುನಾರಚನೆ ಸಂದರ್ಭದಲ್ಲಿ ಸಚಿವ ಸ್ಥಾನ ಕೈತಪ್ಪಿತ್ತು.
ಆದರೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೆಚ್. ನಾಗೇಶ್‌ಗೆ ಸಂಪುಟ ದರ್ಜೆ ಸ್ಥಾನಮಾನದೊಂದಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನ ನೀಡಿದ್ದರು. ಆದರೆ ಈಗ ಮಾಜಿ ಸಚಿವರು ಕಾಂಗ್ರೆಸ್ ಪಕ್ಷದ ಕದ ತಟ್ಟುತ್ತಿದ್ದಾರೆ. 2018ರ ಚುನಾವಣೆ ಬಳಿಕ ಬಿಜೆಪಿ ಬೆಂಬಲಿಸಿದ್ದ ನಾಯಕನಿಗೆ ಕಾಂಗ್ರೆಸ್ ಸೇರಲು ಅವಕಾಶ ಸಿಗಲಿದೆಯೇ? ಕಾದು ನೋಡಬೇಕಿದೆ.

ಕೆಪಿಸಿಸಿ ಕಚೇರಿಯಲ್ಲಿ ಡಿಕೆಶಿ ಭೇಟಿ
ಹೆಚ್. ನಾಗೇಶ್ ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿಯಾಗಿದ್ದರು. ಆದರೆ ಅವರು ಬ್ಯುಸಿ ಇದ್ದ ಹಿನ್ನಲೆಯಲ್ಲಿ ಮಾತುಕತೆ ನಡೆಸಲು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಬರುವಂತೆ ಡಿ. ಕೆ. ಶಿವಕುಮಾರ್ ಸೂಚಿಸಿದ್ದಾರೆ.
ಡಿ. ಕೆ. ಶಿವಕುಮಾರ್‌ರನ್ನು ಹೆಚ್. ನಾಗೇಶ್ ಭೇಟಿಯಾದ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಸಿದ್ದರಾಮಯ್ಯ ಕೋಲಾರ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಘೋಷಣೆ ಮಾಡಿದ್ದಾರೆ. ಈಗ ಜಿಲ್ಲೆಯ ಪಕ್ಷೇತರ ಶಾಸಕರೊಬ್ಬರು ಕಾಂಗ್ರೆಸ್ ಸೇರ ಬಯಸಿದ್ದಾರೆ ಎಂಬುದು ಕುತೂಹಲದ ಸಂಗತಿಯಾಗಿದೆ.

ಹೆಚ್. ನಾಗೇಶ್ ಡಿಕೆಶಿ ಭೇಟಿ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಭೇಟಿ ಬಳಿಕ ಮಾತನಾಡಿದ ಹೆಚ್. ನಾಗೇಶ್, "ಕಾಂಗ್ರೆಸ್‌ನಿಂದ ಮುಳಬಾಗಿಲು ಕ್ಷೇತ್ರದ ಟಿಕೆಟ್ ಕೇಳಲು ಬಂದಿದ್ದೆ. ಡಿ. ಕೆ. ಶಿವಕುಮಾರ್‌ರನ್ನು ಭೇಟಿಯಾಗಿದ್ದೆ. ಆದರೆ ಅವರು ಬ್ಯುಸಿ ಇದ್ದೇನೆ, ನಾಳೆ ಬಾ ಎಂದು ಹೇಳಿದರು" ಎಂದು ತಿಳಿಸಿದ್ದಾರೆ.
"ಕಾಂಗ್ರೆಸ್ ಪಕ್ಷದ ಸೇರ್ಪಡೆಗೆ ಅವಕಾಶ ನೀಡಿದರೆ ಕ್ಷೇತ್ರಕ್ಕಾಗಿ ಹಠ ಹಿಡಿಯಲ್ಲ. ಇಂತಹದ್ದೇ ಕ್ಷೇತ್ರದ ಟಿಕೆಟ್ ಬೇಕು ಎಂದು ಪಟ್ಟು ಹಿಡಿಯಲ್ಲ. ಪಕ್ಷದ ವರಿಷ್ಠರು ಹೇಳಿದಂತೆ ಕೇಳುತ್ತೇನೆ" ಎಂದು ಹೆಚ್. ನಾಗೇಶ್ ಸ್ಪಷ್ಟಪಡಿಸಿದರು.

ಬಿಜೆಪಿ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ
ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್. ನಾಗೇಶ್, "ಮುಳಬಾಗಿಲು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನಿಸಲು ಸಾಕಷ್ಟು ಸಮಯವಿದೆ" ಎಂದು ಹೇಳಿದರು.
ಇನ್ನು ಬಿಜೆಪಿ ನಾಯಕರ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಲು ಅವರು ನಿರಾಕರಿಸಿದರು. "ಬಿಜೆಪಿ ನಾಯಕರು ನಡೆಸಿಕೊಳ್ಳುತ್ತಿರುವ ಬಗ್ಗೆ ಪತ್ರಿಕ್ರಿಯೆ ನೀಡುವುದಿಲ್ಲ" ಎಂದರು.

2018ರಲ್ಲಿ ಗೆಲುವು, ಸಚಿವ ಸ್ಥಾನ
2018ರ ಚುನಾವಣೆಯಲ್ಲಿ ಮುಳಬಾಗಿಲು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಹೆಚ್. ನಾಗೇಶ್ ಕಣಕ್ಕಿಳಿದಿದ್ದರು. 74,213 ಮತಗಳನ್ನು ಪಡೆದು ಜಯಗಳಿಸಿದ್ದರು. ಬಳಿಕ ಬಿಜೆಪಿಗೆ ಬೆಂಬಲ ನೀಡಿದರು.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಬಿಜೆಪಿ ಬೆಂಬಲಿಸಿದರು. ಆದ್ದರಿಂದ ಬಿಜೆಪಿ ಸರ್ಕಾರ ರಚನೆಯಾದಾಗ ಅಬಕಾರಿ ಖಾತೆ ನೀಡಲಾಯಿತು. ಬಳಿಕ ಸಂಪುಟ ಪುನಾರಚನೆ ಸಂದರ್ಭದಲ್ಲಿ ಹೆಚ್. ನಾಗೇಶ್ ಕೈ ಬಿಡಲಾಯಿತು.












Click it and Unblock the Notifications