ನನಗೇ ನಾಚಿಕೆಯಾಯಿತು, ತಲೆತಗ್ಗಿಸಿ ಬಿಟ್ಟೆ: ಕುಮಾರಸ್ವಾಮಿ
ಬೆಂಗಳೂರು, ಫೆ 27: ಸರಕಾರೀ ಆಸ್ಪತ್ರೆಯಲ್ಲಿನ ಪರಿಸ್ಥಿತಿಯನ್ನು ಕಂಡು ಮರುಗಿದ್ದೇನೆ. ಬಡವರಿಗೆ ಉಚಿತವಾಗಿ ಸಿಗಬೇಕಾಗಿರುವ ಸೌಲಭ್ಯದಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಆರೋಗ್ಯ ಸಚಿವಾಲಯ ಗಾಢ ನಿದ್ರೆಯಲ್ಲಿದೆ.
ಹೆರಿಗೆಗೆ ಬರುವ ಬಡ ಕುಟುಂಬಗಳಿಂದಲೂ ಇಂತಹ ಆಸ್ಪತ್ರೆಗಳಲ್ಲಿ ಐದು ಸಾವಿರ ರೂಪಾಯಿವರೆಗೆ ವಸೂಲು ಮಾಡಲಾಗುತ್ತಿದೆ. ಇಲ್ಲಿನ ಅವ್ಯವಸ್ಥೆಯನ್ನು ಕಂಡು ನನಗೆ ನಾಚಿಕೆಯಾಯಿತು, ತಲೆತಗ್ಗಿಸಿ ಬಿಟ್ಟೆ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬೇಸರ ವ್ಯಕ್ತ ಪಡಿಸಿದ್ದಾರೆ.
ನಗರದಲ್ಲಿ (ಫೆ 27) ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದ ಕುಮಾರಸ್ವಾಮಿ, ಸಿಎಂ ಸಿದ್ದರಾಮಯ್ಯನವರಿಗೆ ಜವಾಬ್ದಾರಿ ಅನ್ನೋದು ಇದ್ದರೆ ಕೇಂದ್ರದಿಂದ ರಾಜ್ಯಕ್ಕೆ ಬಡವರ ಆರೋಗ್ಯ ಕಲ್ಯಾಣ ನಿಧಿಗೆ ಬರುವ ಆರೇಳು ಸಾವಿರ ಕೋಟಿ ರೂಪಾಯಿ ಹಣವನ್ನು ಸದ್ವಿನಿಯೋಗ ಮಾಡಲಿ ಎಂದು ಮನವಿ ಮಾಡಿದ್ದಾರೆ. (ಜೆಡಿಎಸ್ ನಲ್ಲಿ 20 ಬಂಡಾಯ ಶಾಸಕರು)
ಜಯದೇವ ಆಸ್ಪತ್ರೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ತಗಲುವ ಆಪರೇಷನ್ ಗಳನ್ನು ಉಚಿತವಾಗಿ ಮಾಡಲಾಗುತ್ತಿದೆ. ಜಯದೇವದಲ್ಲಿ ಸಾಧ್ಯವಾದದ್ದು ರಾಜ್ಯದ ಇತರ ಸರಕಾರೀ ಆಸ್ಪತ್ರೆಗಳಲ್ಲಿ ಯಾಕೆ ಸಾಧ್ಯವಾಗುವುದಿಲ್ಲ. ಯಶಸ್ವಿನಿ ಸ್ಕೀಂನಿಂದ ಎಲ್ಲದಕ್ಕೂ ಪರಿಹಾರ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.
ಹೆಬ್ಬಾಳದಲ್ಲಿ ಗುರುವಾರ (ಫೆ 26) ನಡೆದ ರಸ್ತೆ ಅಪಘಾತದ ಹೃದಯವಿದ್ರಾವಕ ಘಟನೆಗಳು ಮತ್ತೆಮತ್ತೆ ಮರುಕರುಳಿಸದಿರಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಇಂತಹ ಘಟನೆಗಳಿಗೆ ಒಂದು ದಿನ ಕಣ್ಣೀರು ಹಾಕಿ ಸುಮ್ಮನಿರಲು ಸಾಧ್ಯವಿಲ್ಲ. ಇದಕ್ಕೆ ಶಾಸ್ವತ ಪರಿಹಾರ ಕಂಡುಕೊಳ್ಳಬೇಕು.
ನನ್ನ ಅಧಿಕಾರದ ಅವಧಿಯಲ್ಲಿ ಮಿನ್ಸ್ ವೃತ್ತದಿಂದ ಹೆಬ್ಬಾಳದವರೆಗೆ ಸರ್ವಿಸ್ ರೋಡ್ ನಿರ್ಮಿಸಲು ಅನುಮತಿ ನೀಡಿದ್ದೆ. ಈ ರಸ್ತೆಯನ್ನು ಕೊರಿಯರ್ ಕಂಪೆನಿಯೊಂದು ನಿರ್ಮಾಣ ಮಾಡಲು ಮುಂದೆ ಬಂದಿತ್ತು. ನನ್ನ ಅಧಿಕಾರ ಮುಗಿದ ನಂತರದ ದಿನಗಳಲ್ಲಿ ಆ ಯೋಜನೆ ನೆನೆಗುದಿಗೆ ಬಿತ್ತು ಎಂದು ಕುಮಾರಸ್ವಾಮಿ ನೋವು ತೋಡಿಕೊಂಡಿದ್ದಾರೆ. (ಪಕ್ಷದ ಮೇಲೆ ನಿಷ್ಠೆ, ಮುಖಂಡರ ಮೇಲೆ ಅಷ್ಟಕಷ್ಟೆ)
10 ಲಕ್ಷ ನೀಡಿ ಮಾನವೀಯತೆ ಮೆರೆದ ಕುಮಾರಸ್ವಾಮಿ. ಮೋದಿ ಸರಕಾರ ಮತ್ತು ಜಮೀರ್ ಬಗ್ಗೆ ಕುಮಾರಸ್ವಾಮಿ ಹೇಳಿಕೆ, ಸ್ಲೈಡಿನಲ್ಲಿ ಮುಂದುವರಿಸಲಾಗಿದೆ...

ಮೋನಿಕಾ ಎನ್ನುವ ಮಗುವಿನ ಕಾಯಿಲೆಗೆ ಕುಮಾರಸ್ವಾಮಿ ಆರ್ಥಿಕ ಸ್ಪಂದನೆ
ಮೋನಿಕಾ ಎನ್ನುವ ಹುಡುಗಿ Chronic Granulomatous ಎನ್ನುವ ಕಾಯಿಲೆಯಿಂದ ಬಳಲುತ್ತಿದ್ದಾಳೆ. ಇದಕ್ಕೆ 26 ಲಕ್ಷ ರೂಪಾಯಿ ತಗಲುತ್ತೆ ಎಂದು ನಾರಾಯಣ ಹೃದಯಾಲಯ ಎಸ್ಟಿಮೇಟ್ ನೀಡಿದೆ. ಹೇಗೋ ಹೊಂದಿಸಿ ಹತ್ತು ಲಕ್ಷ ರೂಪಾಯಿ ಹಣವನ್ನು ನಾರಾಯಣ ಹೃದಯಾಲಯದ ಬ್ಯಾಂಕ್ ಖಾತೆಗೆ RTGS ಮಾಡಿದ್ದೇನೆ - ಕುಮಾರಸ್ವಾಮಿ.

ನಾರಾಯಣ ಹೃದಯಾಲಯ ಆಸ್ಪತ್ರೆ
ಈ ಆಸ್ಪತ್ರೆಯ ದೇವಿಪ್ರಸಾದ್ ಶೆಟ್ಟಿಯವರ ಬಳಿ ಮನವಿ ಮಾಡಿಕೊಂಡಿದ್ದೇನೆ. ಹತ್ತು ಲಕ್ಷ ರೂಪಾಯಿ ಮೊದಲು ಕಟ್ಟಿ, ಆಮೇಲೆ ನೋಡೋಣ ಎಂದು ಶೆಟ್ಟಿಯವರು ಹೇಳಿದ್ದಾರೆ. ನಾಡಿನ ಜನತೆ ಈ ಕುಟುಂಬಕ್ಕೆ ತಮ್ಮ ಕೈಲಾದ ಆರ್ಥಿಕ ಸಹಾಯ ಮಾಡಬೇಕು ಎನ್ನುವುದು ನನ್ನ ಕಳಕಳಿಯ ಮನವಿ ಎಂದು ಕುಮಾರಸ್ವಾಮಿ ಹೇಳಿದ್ದಾರೆ. (ಕಾಯಿಲೆಂದ ಬಳಲುತ್ತಿರುವ ಮೋನಿಕಾ, ತಂದೆಯ ಬ್ಯಾಂಕ್ ಖಾತೆಯನ್ನು ಇಮೇಜಿನಲ್ಲಿ ಕೊಡಲಾಗಿದೆ).
ಬ್ಯಾಂಕಿನ ಮಾಹಿತಿ
ಖಾತೆದಾರನ ಹೆಸರು :ಸಂಪಂಗಿ
ಅಕೌಂಟ್ ನಂಬರ್: 10918042832
ಬ್ಯಾಂಕ್ : ಭಾರತೀಯ ಸ್ಟೇಟ್ ಬ್ಯಾಂಕ್, ವಿಮಾನಪುರ ಶಾಖೆ, ಎಚ್ಎಎಲ್, ಬೆಂಗಳೂರು

ಜಮೀರ್ ಅಹಮದ್, ಬಾಲಕೃಷ್ಣ
ಇದೇ ಸೋಮವಾರದಂದು (ಮಾ 2) ರಾಮನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ರಾಮನಗರ ಜಿಲ್ಲಾ ವ್ಯಾಪ್ತಿಯ ನಾಲ್ಕು ಅಸೆಂಬ್ಲಿ ಕ್ಷೇತ್ರದಲ್ಲಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಅಜ್ಮೀರ್ ನಲ್ಲಿ ಪೂರ್ವನಿಗದಿತ ಕಾರ್ಯಕ್ರಮ ಇರುವುದರಿಂದ ಜಮೀರ್ ಅಹಮದ್ ಇದರಲ್ಲಿ ಭಾಗವಹಿಸುತ್ತಿಲ್ಲ. ಮಾರ್ಚ್ ಒಂದರಂದು ಮಾಗಡಿಯಲ್ಲಿ ಶಾಸಕ ಬಾಲಕೃಷ್ಣ ಹೆಲ್ತ್ ಕ್ಯಾಂಪ್ ಆಯೋಜಿಸಿದ್ದಾರೆ, ಅದರಲ್ಲಿ ಭಾಗವಹಿಸುತ್ತಿದ್ದೇನೆ.

ಗೌಡ್ರ ನಡುವೆ ಹೊಂದಾಣಿಕೆಯಿಲ್ಲ
ನಮ್ಮ ಮತ್ತು ದೇವೇಗೌಡ್ರ ನಡುವೆ ಹೊಂದಾಣಿಕೆಯಿಲ್ಲ, ದೇವೇಗೌಡರನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಮಾತು ಕೇಳಿಬರುತ್ತಿದೆ. ಮಾರ್ಚ್ ತಿಂಗಳಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಸಂಚರಿಸಿ ಪಕ್ಷ ಸಂಘಟನೆಗೆ ಮುಂದಾಗಲಿದ್ದೇವೆ. ಇದೆಲ್ಲಾ ದೇವೇಗೌಡರ ಮಾರ್ಗದರ್ಶನದಂತೆ ನಡೆಯುತ್ತಿದೆ - ಕುಮಾರಸ್ವಾಮಿ

ಕೇಂದ್ರ ರೈಲ್ವೆ ಬಜೆಟ್
ರೈಲ್ವೆ ಬಜೆಟನ್ನು ಎಲ್ಲರೂ ಅವರದ್ದೇ ಆದ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ. ನನ್ನ ಮಟ್ಟಿಗೆ ಮುಂದಿನ ಐದು ವರ್ಷಗಳಲ್ಲಿ ರೈಲ್ವೆ ಇಲಾಖೆ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ತೋರಿಸುವ ಬಜೆಟ್ ಇದಾಗಿತ್ತು. ಇನ್ನು ರಾಜ್ಯ ರೈಲ್ವೆ ಯೋಜನೆಗಳಿಗೆ ಕೇಂದ್ರದಿಂದ ನಿಗದಿಯಾದ ಹಣವನ್ನು ನೋಡಿದರೆ ಸಮುದ್ರಕ್ಕೆ ಒಂದು ಚೊಂಬು ನೀರು ಎಸೆದಂತೆ ಎಂದು ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಮೋದಿ ಬಗ್ಗೆ ಕುಮಾರಸ್ವಾಮಿ
ನಾಳೆ (ಫೆ 28) ಕೇಂದ್ರ ಆಯವ್ಯಯ ಮಂಡನೆಯಾಗಲಿದೆ. ನೋಡೋಣ ಮೋದಿಯವರು ಏನು ಮಾಡುತ್ತಾರೆಂದು, ಐದು ವರ್ಷ ಬರೀ ಮಾತನಾಡಿಕೊಂಡು ಇರುತ್ತಾರೋ ಅಥವಾ ಕೆಲಸ ಮಾಡಿ ತೋರಿಸುತ್ತಾರೋ ಎಂದು ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.












Click it and Unblock the Notifications