ಶಿವಮೊಗ್ಗ ಹತ್ಯೆ ಪ್ರಕರಣ: ರಾಷ್ಟ್ರೀಯ ಪಕ್ಷಗಳಿಂದ ಹಿಂಸಾ ರಾಜಕಾರಣ; ಎಚ್‌ಡಿಕೆ ವಾಗ್ದಾಳಿ
ಬೆಂಗಳೂರು, ಫೆಬ್ರವರಿ 21: ಶಿವಮೊಗ್ಗ ನಗರದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನ ಹತ್ಯೆ ಮಾಡಲಾಗಿದ್ದು, ಇದರಿಂದ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಐವರು ಆರೋಪಿಗಳಲ್ಲಿ ಸದ್ಯಕ್ಕೆ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದಾರೆ.
ಆರೋಪಿಗಳನ್ನು ಬಂಧಿಸುವಂತೆ ಎಚ್‌ಡಿಕೆ ಒತ್ತಾಯ
ಶಿವಮೊಗ್ಗದಲ್ಲಿ ನಡೆದ ಯುವಕ ಹರ್ಷನ ಕೊಲೆ ಪ್ರಕರಣ ಅಮಾನವೀಯ. ಆ ಯುವಕನ ಕುಟುಂಬಕ್ಕೆ ನನ್ನ ಸಾಂತ್ವನಗಳು. ಈ ಕೊಲೆಯ ಹಿಂದೆ ಯಾರೇ ಇದ್ದರೂ ಅವರನ್ನು ತಕ್ಷಣ ಪತ್ತೆ ಹಚ್ಚಿ ಬಂಧಿಸಬೇಕು ಎಂದು ಸರಕಾರಕ್ಕೆ ಎಚ್‌ಡಿಕೆ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಇಂಥ ಘಟನೆಗಳು ಪದೇ ಪದೇ ನಡೆಯುತ್ತವೆ. ಇಂಥ ಘಟನೆಗಳ ಬೆಂಕಿಯಲ್ಲಿ ರಾಷ್ಟ್ರೀಯ ಪಕ್ಷಗಳು ಚಳಿ ಕಾಯಿಸಿಕೊಳ್ಳುತ್ತವೆ ಎಂದು ನಾನು ಮೊದಲೇ ಹೇಳಿದ್ದೆ. ಈಗ ರಾಜ್ಯದಲ್ಲಿ ಅಂತಹವೇ ಕೆಟ್ಟ, ಭಯಾನಕ ಘಟನೆಗಳು ನಡೆಯುತ್ತಿವೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹರಿಹಾಯ್ದರು.

ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಇಂಥ ಘಟನೆಗಳು ನಡೆಯುತ್ತಿವೆ ಎನ್ನುವುದು ನನ್ನ ಅನುಮಾನ. ರಾಷ್ಟ್ರೀಯ ಪಕ್ಷಗಳಿಗೆ ಅಭಿವೃದ್ಧಿ ವಿಚಾರ ಇಟ್ಟುಕೊಂಡು ಜನರ ಬಳಿಗೆ ಹೋಗಲು ವಿಷಯ ಇಲ್ಲ. ಕೇವಲ ಭಾವನಾತ್ಮಕ ಅಂಶಗಳ ಮೂಲಕ "ಹಿಂಸಾ ರಾಜಕಾರಣ'ವನ್ನು ಮಾಡಲು ಎರಡೂ ಪಕ್ಷಗಳು ಹೊರಟಿವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಹತ್ಯೆಗೀಡಾದ ಯುವಕನಿಗೆ ಮೊದಲೇ ಜೀವ ಬೆದರಿಕೆ ಇತ್ತೆಂದು, ಪೊಲೀಸರಿಗೆ ದೂರು ಕೊಡಲಾಗಿತ್ತು ಎಂದು ಹೇಳುತ್ತಿದ್ದಾರೆ. ಹಾಗಾದರೆ ಆ ಯುವಕನಿಗೆ ರಕ್ಷಣೆ ಯಾಕೆ ಕೊಡಲಿಲ್ಲ. ಇದಕ್ಕೆ ಉತ್ತರ ಬೇಕಿದೆ. ಬಿಜೆಪಿ, ಕಾಂಗ್ರೆಸ್ ಪಕ್ಷಗಳು 2023ರ ಚುನಾವಣೆಗೆ ಸದನದಲ್ಲಿ ಗದ್ದಲ ಎಬ್ಬಿಸುವ ಮೂಲಕ ಟ್ರೈಲರ್ ಬಿಟ್ಟಿದ್ದು, ಸಿನಿಮಾ ಬಾಕಿ ಇದೆ ಎಂದಿದ್ದೆ ಎಂದು ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ಶಿವಮೊಗ್ಗ ಘಟನೆಯ ಮೂಲಕ ರಾಷ್ಟ್ರೀಯ ಪಕ್ಷಗಳು ಹಿಂಸಾ ರಾಜಕಾರಣದ ಪೂರ್ಣ ಸಿನಿಮಾ ತೋರಿಸಲು ಹೊರಟಿದ್ದಾರೆ. ಜನರ ಸೂಕ್ಷ್ಮ ಭಾವನೆಗಳು ಹಾಗೂ ಸಮಾಜದ ಶಾಂತಿಯನ್ನು ಅಪಾಯಕ್ಕೆ ಒಡ್ಡಿ ಬೇಳೆ ಬೇಯಿಸಿಕೊಳ್ಳುತ್ತಿರುವ "ರಾಷ್ಟ್ರೀಯ ಪಕ್ಷಗಳ ರಕ್ಕಸ ರಾಜಕಾರಣ'ಕ್ಕೆ ಕ್ಷಮೆಯೇ ಇಲ್ಲ.

ಈಗ ಒಂದು ಅಮೂಲ್ಯ ಪ್ರಾಣ ಹೋಗಿದೆ. ಅದಕ್ಕೆ ಯಾರು ಹೊಣೆ? ರಾಜಕಾರಣಿಗಳು ಮೂರು ದಿನ ಹೋದ ಪ್ರಾಣದ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸಿ, ಹತ್ತು ಲಕ್ಷ ಪರಿಹಾರ ಕೊಟ್ಟರೆ ಸಾಕೇ? ಇಂತಹ ಹಿಂಸಾ ಪ್ರವೃತ್ತಿಗೆ ಕೊನೆ ಎಂದು? ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ ಪರಿ ಇದು.












Click it and Unblock the Notifications