ಪಂಚರಾಜ್ಯ ಚುನಾವಣೆ ರಾಜ್ಯಕ್ಕೂ ದಿಕ್ಸೂಚಿ, 2023ರಲ್ಲಿ ಬಿಜೆಪಿಗೆ ಅಧಿಕಾರ ಖಚಿತ: ಅಶೋಕ್
ಬೆಂಗಳೂರು, ಮಾ. 10: ಪಂಚರಾಜ್ಯಗಳ ಚುನಾವಣೆ ದಿಕ್ಸೂಚಿ ಆಗಲಿದ್ದು, 2023ರಲ್ಲಿ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದರು.
ಐದು ರಾಜ್ಯಗಳ ವಿಧಾನಸಭಾ ಚುನಾವಣೆ ಫಲಿತಾಂಶದ ಹಿನ್ನೆಲೆಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಐದರಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಗಳಿಸುತ್ತದೆ ಎಂಬುದು ಸ್ಪಷ್ಟವಾಗಿದೆ. ಇದು ಮುಂದಿನ ಎಲ್ಲ ಚುನಾವಣೆಗಳಿಗೂ ದಿಕ್ಸೂಚಿ ಎಂದು ಹೇಳಿದರು.
ಉತ್ತರ ಪ್ರದೇಶದಲ್ಲಿ ನೆಕ್ ಟು ನೆಕ್ ಫೈಟ್ ಇದೆ ಎಂದು ಹೇಳುತ್ತಿದ್ದರಿ. ಆದರೆ, ಸ್ಪಷ್ಟ ಬಹುಮತ ಬರುವುದು ಖಾತರಿಯಾಗುತ್ತಿದೆ. ಐದು ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳಲ್ಲಿ ಸ್ಪಷ್ಟ ಬಹುಮತದೊಂದಿಗೆ, ಯಾರ ಆಶ್ರಯವೂ ಇಲ್ಲದೆ ಸರ್ಕಾರ ಮಾಡುತ್ತೇವೆ ಎಂದು ವಿಶ್ವಾಸ ವ್ಯಕ್ತಡಿಸಿದರು.

ಇಡೀ ದೇಶದಲ್ಲಿ ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿ ಇತ್ತು. ಈಗ ಅಲ್ಲಿಯೂ ಹೀನಾಯ ಸೋಲು ಕಾಣುತ್ತಿದೆ. ಜನರು ಕಾಂಗ್ರೆಸ್‌ನ್ನು ಮೂಲೆಗುಂಪು ಮಾಡಿದ್ದು, ರಾಜ್ಯದಲ್ಲಿಯೂ ಹಿನ್ನಡೆ ಸಾಧಿಸುವುದು ನಿಶ್ಚಿತ. ಹೀಗಾಗಿ ರಾಜ್ಯ ಕಾಂಗ್ರೆಸ್ ನಾಯಕರು ಪಾದಯಾತ್ರೆ ಮಾಡುವ ಬದಲು ತೀರ್ಥಯಾತ್ರೆ ಮಾಡುವುದು ಒಳ್ಳೆಯದು ಎಂದು ವ್ಯಂಗ್ಯವಾಡಿದರು.
ಬೇರೆ ರಾಜ್ಯಗಳ ಫಲಿತಾಂಶ ಮತ್ತೊಂದು ರಾಜ್ಯಕ್ಕೆ ದಿಕ್ಸೂಚಿ ಆಗುತ್ತದೆ. ರಾಜ್ಯದಲ್ಲಿಯೂ ಬಿಜೆಪಿ ಅಲೆ ಶುರುವಾಗಿದ್ದು, ಇದು ದಿಕ್ಸೂಚಿ ಆಗಲಿದೆ. ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಮುಂದಿನ ವರ್ಷ ನಡೆಯುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿಯೂ ಬಿಜೆಪಿ ಬಹುಮತ ಗಳಿಸುವುದು ನಿಶ್ಚಿತ ಎಂದು ಹೇಳಿದರು.
ಸಚಿವ ಡಾ.ಕೆ.ಸುಧಾಕರ್ ಹೇಳಿಕೆ:
ಆರೋಗ್ಯ ಸಚಿವ ಡಾ.ಕೆ. ಸುಧಾಕರ್, 'ನಾಲ್ಕು ರಾಜ್ಯಗಳ ಉಳಿಸಿಕೊಂಡಿದ್ದೇವೆ. ಅಮೃತ ಕಾಲ ಶುರುವಾಗಿದೆ. ಡಬಲ್ ಎಂಜಿನ್ ಸರ್ಕಾರ ಬೇಕು ಎಂದು ನಾಲ್ಕು ರಾಜ್ಯಗಳ ಜನ ತೀರ್ಮಾನ ಮಾಡಿದ್ದಾರೆ' ಎಂದು ಹೇಳಿದರು.
ಪಂಜಾಬ್‌ನಲ್ಲಿ ಗೆಲ್ಲುತ್ತೇವೆ ಎಂದು ನಿರೀಕ್ಷೆ ಮಾಡಿರಲಿಲ್ಲ. ಜಾತಿ ಒಲೈಕೆ ಮಾಡುವ ಕಾಂಗ್ರೆಸ್ ಗೆ ಜನರು ಪಾಠ ಕಲಿಸಿದ್ದಾರೆ. ನಮ್ಮ ರಾಜ್ಯಕ್ಕೂ ಒಳ್ಳೆಯ ಸುದ್ದಿ ಇದು. 2023ಕ್ಕೆ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ಆಗುತ್ತಾರೆ ಎಂಬುದೆಲ್ಲ ಸುಳ್ಳು. ಬಸವರಾಜ ಬೊಮ್ಮಾಯಿ ಅವರು ಉತ್ತಮ ಆಡಳಿತ ನೀಡುತ್ತಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲಿಯೇ ಮುಂದಿನ ಬಾರಿಯೂ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.












Click it and Unblock the Notifications