ಶಾಸಕ-ಸಂಸದ ಜಟಾಪಟಿ; ತಿಂಗಳಲ್ಲಿ ಎರಡನೇ ಬಾರಿ ಬಿಜೆಪಿ ಸಂಸದನ ವಿರುದ್ಧ ಎಫ್‌ಐಆರ್!
ಕೋಲಾರ, ಸೆಪ್ಟೆಂಬರ್ 30: ಕೋಲಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಶಾಸಕ ಹಾಗೂ ಬಿಜೆಪಿ ಸಂಸದ ನಡುವೆ ಜಟಾಪಟಿ ಏರ್ಪಟ್ಟಿದ್ದು, ಕೋಲಾರ ಸಂಸದ ಮುನಿಸ್ವಾಮಿ ಬಂಗಾರಪೇಟೆ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಪರಸ್ಪರ ದೂರು ಪ್ರತಿ-ದೂರು ದಾಖಲಿಸಿದ್ದಾರೆ.
ಕೆಲ ದಿನಗಳ ಹಿಂದೆ ಕೋಲಾರದ ಜಿಲ್ಲಾ ಮಟ್ಟದ ಜನತಾ ದರ್ಶನ ಕಾರ್ಯಕ್ರಮದ ವೇದಿಕೆಯಲ್ಲಿ ಶಾಸಕ ನಾರಾಯಣಸ್ವಾಮಿ ಹಾಗೂ ಸಂಸದ ಮುನಿಸ್ವಾಮಿ ಮಧ್ಯೆ ಜಗಳ ನಡೆದಿತ್ತು. ಅಲ್ಲದೆ ಸ್ಪೀಕರ್ ಹಾಗೂ ರಾಜ್ಯಪಾಲರಿಗೆ ಮುನಿಸ್ವಾಮಿ ಅವರು ದೂರು ನೀಡಿದ್ದರು. ಸದ್ಯ ಈಗ ಇಬ್ಬರ ವಿರುದ್ಧವೂ FIR ದಾಖಲಾಗಿದೆ.

ಸಂಸದ ಮುನಿಸ್ವಾಮಿ ಹಾಗೂ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಅವರ ನಡುವೆ ಗಲಾಟೆ ಪರಸ್ಪರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು. ಬಳಿಕ ಎಸ್ಪಿ ನಾರಾಯಣ್ ಮಧ್ಯ ಪ್ರವೇಶದಿಂದ ಪರಿಸ್ಥಿತಿ ಹತೋಟಿಗೆ ಬಂದಿತ್ತು. ಈ ವೇಳೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಸುರೇಶ್ ಮಧ್ಯ ಪ್ರವೇಶಿಸಿ ಸಂಸದರಿಂದ ಅಗಬಹುದಾದಂತಹ ಮಾರಣಾಂತಿಕ ಹಲ್ಲೆಯನ್ನು ತಪ್ಪಿಸಿದ್ದರು. ಸಂಸದ ಮುನಿಸ್ವಾಮಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಶಾಸಕ ಎಸ್.ಎನ್ ನಾರಾಯಣಸ್ವಾಮಿ ದೂರು ನೀಡಿದ್ದಾರೆ.
ಇತ್ತ ಶಾಸಕರ ದೂರಿನ ಅನ್ವಯ ಸಂಸದ ಮುನಿಸ್ವಾಮಿ ವಿರುದ್ಧ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ. ಒಂದೇ ತಿಂಗಳಲ್ಲಿ ಎರಡನೇ ಬಾರಿ ಸಂಸದ ಮುನಿಸ್ವಾಮಿ ಎಫ್ ಐ ಆರ್ ಹಾಕಿಸಿಕೊಂಡಿದ್ದಾರೆ. ಈ ಹಿಂದೆ ಅರಣ್ಯ ಇಲಾಖೆ ತೆರವು ಕಾರ್ಯಾಚರಣೆ ವಿಚಾರದಲ್ಲಿ ಮುನಿಸ್ವಾಮಿ ವಿರುದ್ಧ ಎಫ್ ಐ ಆರ್ ದಾಖಲಾಗಿತ್ತು. ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ A1 ಆರೋಪಿಯಾಗಿ ಎಫ್ ಐ ಆರ್ ಆಗಿತ್ತು. ಆದರೆ, ಇದೀಗ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಸಂಸದ ಮುನಿಸ್ವಾಮಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.
ಈಗಾಗಲೇ ಕಾಂಗ್ರೆಸ್ ಶಾಸಕ ಎಸ್.ಎನ್ ನಾರಾಯಣಸ್ವಾಮಿ ಹಾಗೂ ಎಸ್ಪಿ ನಾರಾಯಣ್ ವಿರುದ್ಧ ರಾಜ್ಯಪಾಲರಿಗೆ ಮುನಿಸ್ವಾಮಿ ದೂರು ನೀಡಿದ್ದಾರೆ. ಇದರ ಬೆನ್ನಲ್ಲೇ ಬಿಜೆಪಿ ಸಂಸದ ಮುನಿಸ್ವಾಮಿ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.












Click it and Unblock the Notifications