ಮಂಕುತಿಮ್ಮನ ಕಗ್ಗ, ಜೀವನಧರ್ಮಯೋಗ ಇಂಗ್ಲಿಷ್‌ಗೆ ತಂದ ಕೆ ನಟರಾಜನ್ ಅವರಿಗೆ ಡಿವಿಜಿ ಪ್ರಶಸ್ತಿ ಗೌರವ
ಮೈಸೂರು: ಇಲ್ಲಿನ 'ಡಿವಿಜಿ ಬಳಗ ಪ್ರತಿಷ್ಠಾನ'ದ ವತಿಯಿಂದ 'ಡಿವಿಜಿ ಪ್ರಶಸ್ತಿ' ಹಾಗೂ 'ಬಿಜಿಎಲ್ ಸ್ವಾಮಿ ಪ್ರಶಸ್ತಿ' ಪ್ರದಾನ ಸಮಾರಂಭ-2026ವು ಮಾರ್ಚ್ 22ರಂದು ಬೆಳಗ್ಗೆ 10 ಗಂಟೆಗೆ ಕೃಷ್ಣಮೂರ್ತಿಪುರಂನ ಬಿಎಸ್‌ಎಸ್ ವಿದ್ಯೋದಯದಲ್ಲಿ ಜರುಗಲಿದೆ. ಕಾರ್ಯಕ್ರಮಕ್ಕೆ ಕೆಲವು ಮಹನೀಯರು ಅತಿಥಿಗಳಾಗಿ ಆಗಮಿಸಲಿದ್ದಾರೆ. ಪ್ರಶಸ್ತಿ ಪುರಸ್ಕೃತರ ಕಿರು ಪರಿಚಯ ಇಲ್ಲಿದೆ.
ಡಿವಿಜಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಬಳ್ಳಾರಿಯ ಶ್ರೀರಾಮಕೃಷ್ಣ ವಿವೇಕಾನಂದ ಟ್ರಸ್ಟ್ ಅಧ್ಯಕ್ಷ ಸ್ವಾಮಿ ಮಂಗಳನಾಥನಂದಜಿ, ಜೀವನ ಧರ್ಮಯೋಗ ಮತ್ತು ಮಂಕುತಿಮ್ಮನ ಕಗ್ಗ ಆಂಗ್ಲ ಅನುವಾದಕ ಮತ್ತು ಡಿವಿಜಿ ಪ್ರಶಸ್ತಿ ಪುರಸ್ಕೃತರಾದ ಕೆ.ನಟರಾಜನ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ನಿವೃತ್ತ ತಾಂತ್ರಿಕ ನಿರ್ದೇಶಕ ಎಸ್.ಟಿ.ರಾಧಾಕೃಷ್ಣ ಅವರು ಅತಿಥಿಗಳಾಗಿ ಬೆಳಗ್ಗೆ 10 ಗಂಟೆ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಸ್ವಾಮಿ ವಿವೇಕಾನಂದ ಮೂವ್‌ಮೆಂಟ್‌ನ ಸಲಹೆಗಾರ ಡಾ ಎಂ.ಆರ್.ಸೀತಾರಾಂ ಅಧ್ಯಕ್ಷತೆ ವಹಿಸಲಿದ್ದಾರೆ.

ಮಧ್ಯಾಹ್ನ 2 ಗಂಟೆಗೆ ನಡೆಯಲಿರುವ 'ಬಿಜಿಎಲ್ ಸ್ವಾಮಿ ಪ್ರಶಸ್ತಿ ಪ್ರದಾನ ಸಮಾರಂಭ'ಕ್ಕೆ ಬಿಜಿಎಲ್ ಸ್ವಾಮಿ ಸೋದರಳಿಯ ಹಾಗೂ ಡಿವಿಜಿ ಅವರ ಮೊಮ್ಮಗ ಕೆ.ನಟರಾಜನ್, ಲೇಖಕರು ಮತ್ತು ಬಿಜಿಎಲ್ ಸ್ವಾಮಿ ಪ್ರಶಸ್ತಿ ಪುರಸ್ಕೃತರಾದ ಕೊಳ್ಳೆಗಾಲ ಶರ್ಮಾ, ವಿಜ್ಞಾನ ಲೇಖಕರಾದ ಟಿ.ಜಿ.ಶ್ರೀನಿಧಿ ಅವರು ಮುಖ್ಯ ಅತಿಥಿಗಳಾಗಿರಲಿದ್ದಾರೆ. ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಉಪ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರವೀಣ್ ಕುಮಾರ್ ಸಯ್ಯಪರಾಜು ಅವರು ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಡಿವಿಜಿ ಬಳಗ ಪ್ರತಿಷ್ಠಾನದ ಸಂಸ್ಥಾಪಕ ಸಿ.ಕನಕರಾಜು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಶಸ್ತಿ ಪುರಸ್ಕೃತರ ಪರಿಚಯ ಇಲ್ಲಿದೆ
ಕೆ. ನಟರಾಜನ್ ಅವರ ಪರಿಚಯ
ಕನ್ನಡದ ಭಗವದ್ಗೀತೆ ಎಂದೇ ಖ್ಯಾತವಾದ 'ಮಂಕುತಿಮ್ಮನಕಗ್ಗ' ಕೊಟ್ಟ ಡಿ.ವಿ.ಗುಂಡಪ್ಪ (ಡಿವಿಜಿ) ಅವರ ಮೊಮ್ಮಗ ಕೆ.ನಟರಾಜನ್. ಇವರು 1943ರ ಡಿಸೆಂಬರ್ 12ರಂದು ಬೆಂಗಳೂರಿನಲ್ಲಿ ಜನಿಸಿದರು. ಶ್ರೀಮತಿ ತಂಗಮ್ಮ ಮತ್ತು ಎಸ್.ಕೃಷ್ಣಸ್ವಾಮಿ ಇವರ ಮಾತಾಪಿತೃಗಳು. ಇವರು ತಮ್ಮ ಉನ್ನತ ವಿದ್ಯಾಭ್ಯಾಸವನ್ನು ಬೆಂಗಳೂರು ವಿಶ್ವವಿದ್ಯಾನಿಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಲಂಡನ್ ವಿಶ್ವವಿದ್ಯಾನಿಲಯಗಳಲ್ಲಿ ಪೂರೈಸಿ, ಬಿಇ (1965), ಎಂಇ (1968) ಮತ್ತು ಎಂಎಸ್ಸಿ (1974) ಪದವಿಗಳನ್ನು ಗಳಿಸಿದರು. ತಮ್ಮ ವೃತ್ತಿಜೀವನವನ್ನು ಯುವಿಸಿಇ ಮಹಾವಿದ್ಯಾಲಯದಲ್ಲಿ ವಿದ್ಯುತ್ ತಂತ್ರಶಾಸ್ತ್ರದ ಉಪನ್ಯಾಸಕರಾಗಿ ಆರಂಭಿಸಿ, ತದನಂತರ ಹೈದರಾಬಾದಿನ ಬಿಹೆಚ್ಇಎಲ್ ಸಂಸ್ಥೆಯ ಸಂಶೋಧನಾ ವಿಭಾಗದಲ್ಲಿ ಮೂವತ್ತೊಂದು ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿದರು.
ನಿವೃತ್ತಿಯ ನಂತರವೂ ಜ್ಞಾನಪ್ರಸಾರವನ್ನು ನಿಲ್ಲಿಸದೆ, ಬೆಂಗಳೂರಿನ ಹಲವು ತಾಂತ್ರಿಕ ಮಹಾವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿಯೂ, ಅಮೆರಿಕಾದ ಸೌತ್ ಡಕೋಟಾ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದರು. ಉಚ್ಚ-ವಿದ್ಯುತ್ ತಂತ್ರಜ್ಞಾನ (High Voltage Engineering) ಮತ್ತು ವಿದ್ಯುತ್ಕಾಂತೀಯ ಗಣಿತಶಾಸ್ತ್ರದಲ್ಲಿ ಇವರು ವಿಶೇಷ ಪಾಂಡಿತ್ಯವನ್ನು ಗಳಿಸಿದ್ದಾರೆ. ಬಿಹೆಚ್ಇಎಲ್ ಸಂಸ್ಥೆಯಲ್ಲಿ ಬಾಬು ಕಲ್ಯಾಣ್ ಅವರ ಮಾರ್ಗದರ್ಶನದಲ್ಲಿ ಉನ್ನತ ತಂತ್ರಜ್ಞಾನದ ವ್ಯವಸ್ಥೆಗಳನ್ನು ರೂಪಿಸುವಲ್ಲಿಯೂ, ಅಹಮದಾಬಾದಿನ ಭೌತಿಕ ಸಂಶೋಧನಾಲಯದಲ್ಲಿ 20 ಕೆವಿ ಸಾಮರ್ಥ್ಯದ ವಿದ್ಯುತ್ ವ್ಯವಸ್ಥೆಯ ವಿನ್ಯಾಸದಲ್ಲಿಯೂ ಇವರ ಪಾತ್ರ ಮಹತ್ವದ್ದಾಗಿದೆ.
ವಿಜ್ಞಾನದಷ್ಟೇ ಸಾಹಿತ್ಯ, ಆರೋಗ್ಯ ಮತ್ತು ಕರ್ನಾಟಕ ಸಂಗೀತಗಳಲ್ಲಿಯೂ ಇವರು ಆಳವಾದ ಆಸಕ್ತಿ ಹೊಂದಿದ್ದಾರೆ. ಇವರ ಸೋದರಮಾವ, 'ಹಸುರು ಹೊನ್ನು' ಕೃತಿಕಾರ ಡಾ ಬಿಜಿಎಲ್ ಸ್ವಾಮಿಯವರ ಪ್ರಭಾವ ಇವರ ಮೇಲೆ ಅಧಿಕವಾಗಿದೆ. ಪೂಜ್ಯ ಡಿವಿಜಿ ಅವರ ಮೇರುಕೃತಿಗಳಾದ 'ಜೀವನಧರ್ಮಯೋಗ' ಮತ್ತು 'ಮಂಕುತಿಮ್ಮನ ಕಗ್ಗ'ಗಳನ್ನು ಆಂಗ್ಲ ಭಾಷೆಗೆ ಭಾಷಾಂತರಿಸುವ ಮಹತ್ಕಾರ್ಯಕ್ಕೆ ಇವರು ಕೈಹಾಕಿದ್ದಾರೆ. ಕೆ. ನಟರಾಜನ್ ಅವರ ಜೀವನವು ವಿಜ್ಞಾನ ಮತ್ತು ಸಾಹಿತ್ಯದ ಸಮನ್ವಯದ ಜೀವಂತ ಉದಾಹರಣೆಯಾಗಿದೆ. ಇಂತಹ ವಿಶಿಷ್ಟ ಸಾಧಕರಿಗೆ ಡಿವಿಜಿ ಪ್ರಶಸ್ತಿ ಲಭಿಸಿದೆ.
ಕೊಳ್ಳೇಗಾಲ ಶರ್ಮ ಅವರ ಪರಿಚಯ
ಕಳೆದ ನಾಲ್ಕು ದಶಕಗಳಿಂದ ಕನ್ನಡ ವಿಜ್ಞಾನ ಸಂವಹನ ಕ್ಷೇತ್ರದಲ್ಲಿ ಸಕ್ರಿಯವಾಗಿರುವ ಇವರು, ಮೈಸೂರಿನ ಸಿ.ಎಫ್.ಟಿ.ಆರ್.ಐ.ನಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸುಮಾರು 3500ಕ್ಕೂ ಹೆಚ್ಚು ವಿಜ್ಞಾನ ಲೇಖನಗಳನ್ನು ಬರೆದಿರುವ ಇವರು 'ಜಾಣಸುದ್ದಿ' ಎಂಬ ಧ್ವನಿಪತ್ರಿಕೆಯ (ಪಾಡ್‌ಕಾಸ್ಟ್) ಮೂಲಕ ವಿಜ್ಞಾನವನ್ನು ಮನೆಮನೆಗೆ ತಲುಪಿಸಿದ ಕೀರ್ತಿಗೆ ಭಾಜನರಾಗಿದ್ದಾರೆ. ಇವರ ವಿಶಿಷ್ಟ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರವು ಇವರಿಗೆ 'ರಾಜ್ಯಮಟ್ಟದ ಶ್ರೇಷ್ಠ ವಿಜ್ಞಾನ ಸಂವಹನಕಾರ' ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇವರ ಸಾಧನೆಯನ್ನು ಗುರುತಿಸಿ ಈ ವರ್ಷದ 'ಬಿಜಿಎಲ್ ಸ್ವಾಮಿ ಪ್ರಶಸ್ತಿ'ಯನ್ನು ನೀಡಲಾಗುತ್ತಿದೆ.












Click it and Unblock the Notifications