DK Shivakumar: 2028 ರ ಚುನಾವಣೆಗೆ ರೆಡಿ: ಅಭ್ಯರ್ಥಿಗಳ ಕುರಿತು ಡಿ ಕೆ ಶಿವಕುಮಾರ್ ಕೊಟ್ಟ ಸೂಚನೆ ಏನು?
ಬೆಳಗಾವಿ, ಡಿಸೆಂಬರ್ 17: ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಮತ್ತು ನಂಬರ್ 136+2+2= 140. ಮೂರು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶದಿಂದ ಗೌರವ ಬಂದಿದೆ. ವಿಶ್ವಾಸ ಹೆಚ್ಚಿದೆ. 2028 ರ ಚುನಾವಣೆಗೆ ಈ ಫಲಿತಾಂಶ ಮುನ್ನುಡಿ ಬರೆದಿದೆ. ಎಲ್ಲೆಲ್ಲಿ ಅಭ್ಯರ್ಥಿಗಳ ಕೊರತೆ ಇತ್ತೋ ಅಲ್ಲಿ ಆ ಕೊರತೆ ಸರಿ ಮಾಡಿದ್ದೇವೆ, ಈಗಿನಿಂದಲೇ 2028 ರ ಚುನಾವಣೆಗೆ ರೆಡಿ ಆಗಿ. ಅಭ್ಯರ್ಥಿಗಳನ್ನು ಫೈನಾಲಿಸ್ ಮಾಡಿ ಇಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದ್ದಾರೆ.
ಬೆಳಗಾವಿ ಹೊರವಲಯದ ಶೂನ್ಯ ರೆಸಾರ್ಟ್ ನಲ್ಲಿ ಮಂಗಳವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಿವಕುಮಾರ್ ಅವರು ಮಾತನಾಡಿ, ಸಂಸತ್ ಚುನಾವಣೆಯಲ್ಲಿ ಕಲ್ಯಾಣ ಕರ್ನಾಟಕ ಬಿಟ್ಟು ಉಳಿದಕಡೆ ವಾತಾವರಣ ಅಷ್ಟು ಚನ್ನಾಗಿರಲಿಲ್ಲ. ಈಗ ಎಲ್ಲಾ ಕಡೆ ಚನ್ನಾಗಿ ಇದೆ. 2028 ಕ್ಕೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಡಿ ಕೆ ಶಿವಕುಮಾರ್ ತಿಳಿಸಿದರು.

ಮಹಾತ್ಮ ಗಾಂಧೀಜಿ ಅವರು 1924 ರಲ್ಲಿ ಅಧ್ಯಕ್ಷತೆ ವಹಿಸಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆ ಕಾರ್ಯಕ್ರಮದಿಂದ ಇಡೀ ದೇಶಕ್ಕೆ ಸಂದೇಶ ರವಾನೆ ಆಗಬೇಕು. 1924 ರಲ್ಲಿ ಮಹಾತ್ಮ ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ಸಿದ್ಧತೆಗಳು ನಡೆದಿವೆ.
ಇಡೀ ವರ್ಷ ಕಾರ್ಯಕ್ರಮ ಮಾಡಲು ಯೋಜನೆ ರೂಪಿಸಲಾಗಿದೆ. ಸರಕಾರ ಮತ್ತು ಕಾಂಗ್ರೆಸ್ ಪಕ್ಷ ಒಟ್ಟಾಗಿ ಮಾಡಲಿದೆ. ಕಾಂಗ್ರೆಸ್ ಪಕ್ಷಕ್ಕೆ ಇರುವ ಇತಿಹಾಸ ಬೇರೆ ಪಕ್ಷಗಳಿಗೆ ಇಲ್ಲ. ಇದರ ಸದ್ಬಳಕೆ ಮಾಡಿಕೊಳ್ಳಿ. ಈ ಸಮಾವೇಶ ಐತಿಹಾಸಿಕ ಸಮಾವೇಶ. ಇದೊಂದು ಸುವರ್ಣ ಅವಕಾಶ. ಇದರಲ್ಲಿ ನೀವೆಲ್ಲರೂ ಪಾಲ್ಗೊಳ್ಳಬೇಕು.
ಎಐಸಿಸಿ ಮುಖಂಡರು ಇವತ್ತು ಇಡೀ ದಿನ ಬೆಳಗಾವಿಯಲ್ಲಿ ಇದ್ದು, ಪೂರ್ವಸಿದ್ಧತೆಗಳ ಪರಿಶೀಲನೆ ಮಾಡಿದರು, ಮಾಹಿತಿ ಪಡೆದರು. ಈ ಅಭೂತಪೂರ್ವ ಕಾರ್ಯಕ್ರಮದ ಯಶಸ್ಸಿಗೆ ನಾನಾ ಸಮಿತಿಗಳನ್ನು ರಚನೆ ಮಾಡಲಾಗಿದೆ. ಇದು ಬರೀ ಬೆಳಗಾವಿ ಕಾರ್ಯಕ್ರಮ ಅಲ್ಲ. ಇಡೀ ರಾಜ್ಯದ ಕಾರ್ಯಕ್ರಮ. ನೀವೆಲ್ಲರೂ ಸಕ್ರಿಯರಾಗಿ ಪಾಲ್ಗೊಳ್ಳಬೇಕು ಎಂದು ಹೇಳಿದರು.
ರಣದೀಪ್ ಸಿಂಗ್ ಸುರ್ಜೆವಾಲ ಅವರು ಮಾತನಾಡಿ, ಗಾಂಧಿ ಅವರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಕ್ಷಣಕ್ಕೆ ಶತಮಾನೋತ್ಸವದ ಸಂಭ್ರಮ ಕೇವಲ ಕರ್ನಾಟಕ ರಾಜ್ಯದ ಜನರಿಗೆ ಮಾತ್ರವಲ್ಲ, ಇಡೀ ದೇಶದ ಜನರಿಗೆ ಹೆಮ್ಮೆಯ ವಿಚಾರ. ಸೈದ್ಧಾಂತಿಕವಾಗಿ, ಸಾಮಾಜಿಕವಾಗಿ, ರಾಜಕೀಯ ಪರಿವರ್ತನೆಗಾಗಿ ಬಹಳ ಮಹತ್ನದ್ದಾಗಿದೆ.
ಹೀಗಾಗಿ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರು ಸೇರಿ ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಬೆಳಗಾವಿ ಭೂಮಿಯಿಂದ ಬದಲಾವಣೆಯ ಹೊಸ ಸಂಕಲ್ಪ ಮಾಡಿ ಜನ ಕಲ್ಯಾಣದತ್ತ ಕಾಂಗ್ರೆಸ್ ಸಾಗಬೇಕಿದೆ. ಆಗ ಈಸ್ಟ್ ಇಂಡಿಯಾ ಕಂಪನಿ ಅವರು ದೇಶ ಆಳಿದರೆ, ಇಂದು ಮೋದಾನಿ ಕಂಪನಿ ಆಳುತ್ತಿದೆ. ಅವರು ಬಡವರು, ದಲಿತರು, ಶೋಷಿತ ವರ್ಗದವರ ಮೇಲೆ ಆಕ್ರಮಣ ಮಾಡಿದರು.
ಅದೇ ರೀತಿ ಮೋದಾನಿ ಕಂಪನಿಯವರು ಈ ವರ್ಗದವರ ಮೇಲೆ ಆಕ್ರಮಣ ಮಾಡುತ್ತಿದೆ. ಅದರ ಭಾಗವಾಗಿ ಒಂದು ದೇಶ ಒಂದು ಚುನಾವಣೆ. ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಾಗದೆ. ವಾಮಮಾರ್ಗದ ಮೂಲಕ ಪಂಡಿತ್ ನೆಹರೂ, ಸರ್ದಾರ್ ವಲ್ಲಭ ಬಾಯಿ ಪಟೇಲ್, ಅಂಬೇಡ್ಕರ್, ಮೌಲಾನ ಆಜಾದ್, ಡಾ.ರಾಜೇಂದ್ರ ಪ್ರಸಾದ್ ಅವರು ರಚಿಸಿರುವ ಸಂವಿಧಾನದ ಮೇಲೆ ಆಕ್ರಮಣ ಮಾಡಲು ಮುಂದಾಗಿದ್ದಾರೆ. ಈ ಬಾರಿಯ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಎಲ್ಲಾ ವಿಚಾರ ಚರ್ಚೆ ಮಾಡಿ ಪ್ರಮುಖ ನಿರ್ಣಯ ಕೈಗೊಳ್ಳಲಾಗುವುದು. ನಮ್ಮ ಮುಂದಿನ ಹೋರಾಟಕ್ಕೆ ಬೆಳಗಾವಿ ಮತ್ತೊಮ್ಮೆ ನಮಗೆ ದಾರಿ ತೋರಲಿದೆ ಎಂಬ ವಿಶ್ವಾಸವಿದೆ ಎಂದು ತಿಳಿಸಿದರು.












Click it and Unblock the Notifications