Cabinet Reshuffle: ಸಿದ್ದರಾಮಯ್ಯ ದೆಹಲಿಗೆ; ಸಂಚಿವ ಸಂಪುಟ ಬದಲಾವಣೆ ಬಗ್ಗೆ ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ನವದೆಹಲಿ, ಜುಲೈ 10: ಕರ್ನಾಟಕ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಭಾರೀ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ದೆಹಲಿಯಲ್ಲಿ ಹೈಕಮಾಂಡ್‌ನೊಂದಿಗೆ ಚರ್ಚೆ ನಡೆಸಲು ಸಮಯ ನಿಗದಿ ಆಗಿದೆ. ಇಂದು ಸಂಜೆ ಉಭಯ ನಾಯಕರು ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ. ಈ ಮಧ್ಯೆ, ಕೆಲ ಶಾಸಕರು ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎಂದು ಸುರ್ಜೇವಾಲ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಸಚಿವ ಎಂ ಬಿ ಪಾಟೀಲ್ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿದ್ದಾರೆ. ಈಗಾಗಲೇ ರಾಜ್ಯದ ನೀರಾವರಿ ಯೋಜನೆ ಕುರಿತು ಕೇಂದ್ರ ಸಚಿವರನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭೇಟಿ ಮಾಡಿ ಅನುದಾನಕ್ಕಾಗಿ ಮನವಿಯನ್ನ ಸಲ್ಲಿಸಿದ್ದಾರೆ. ಇತ್ತ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ ಕೆ ಶಿವಕುಮಾರ್ ದೆಹಲಿಗೆ ತೆರಳುತ್ತಿದ್ದಂತೆ ಕೈ ಪಾಳಯದಲ್ಲಿ ಸಚಿವ ಸಂಪುಟ ಬದಲಾವಣೆ ವಿಚಾರವಾಗಿ ಚರ್ಚೆ ನಡೆಯುತ್ತಿದ್ದು, ಈ ಬಗ್ಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ದೆಹಲಿಯಲ್ಲಿ ಮಾಧ್ಯಮಗಳ ಜೊತೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ಸದ್ಯಕ್ಕೆ ಸಂಚಿವ ಸಂಪುಟ ಬದಲಾವಣೆ ಕುರಿತು ಯಾವುದೇ ಚರ್ಚೆಯಿಲ್ಲ. ನಾವು ಬಂದಿರುವುದು ಅಭಿವೃದ್ದಿ ವಿಚಾರಗಳನ್ನು ಚರ್ಚೆ ನಡೆಸಲು. ಬೆಂಗಳೂರಿನಲ್ಲಿ ಒಂದಷ್ಟು ರಸ್ತೆಗಳನ್ನು ಅಗಲೀಕರಣ ಮಾಡಬೇಕಿದೆ. ಇದಕ್ಕೆ ರಕ್ಷಣಾ ಇಲಾಖೆ ಭೂಮಿಗಳ ಅವಶ್ಯಕತೆಯಿದೆ. ಈ ಕಾರಣಕ್ಕೆ ಹಾಗೂ ದಸರಾ ವೇಳೆ ಚುಟುಕು ಏರ್ ಶೋ ನಡೆಸಲು ರಕ್ಷಣಾ ಸಚಿವರನ್ನು ಭೇಟಿ ಮಾಡುವುದಕ್ಕಾಗಿ ಬಂದಿದ್ದೇವೆ ಎಂದು ಹೇಳಿದರು.
ನಾಲ್ಕು ಎಂಎಲ್ ಸಿ ಸ್ಥಾನಗಳ ನಾಮನಿರ್ದೇಶನ ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್, ವಿಧಾನಸಭಾ ಅಧಿವೇಶನದ ಮುಂಚಿತವಾಗಿ ಮುಗಿಯುತ್ತದೆ ಎಂದು ಹೇಳಿದರು. ಮಾಧ್ಯಮದವರಿಗೂ ಒಂದು ಸ್ಥಾನ ನೀಡಲಾಗುವುದು ಎಂದು ಡಿ ಕೆ ಶಿವಕುಮಾರ್ ಹೇಳಿದರು.
ನೀವು ಸೋನಿಯಾ ಗಾಂಧಿ ಹಾಗೂ ಇತರೆ ಹಿರಿಯ ನಾಯಕರನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿಲ್ಲ. ಹಿರಿಯ ನಾಯಕರ ಭೇಟಿಗೆ ಸಮಯ ಕೇಳಿದ್ದೇನೆ. ಸಮಯ ನೀಡದಿದ್ದರೆ ಯಾರನ್ನೂ ಭೇಟಿಯಾಗಲು ಆಗುವುದಿಲ್ಲ. ರಾಹುಲ್ ಗಾಂಧಿ ಅವರು ಪಾಟ್ನಾಗೆ ತೆರಳಿದ್ದಾರೆ ಎಂದು ತಿಳಿಸಿದರು.
ಟನಲ್ ರಸ್ತೆ ವಿಚಾರವಾಗಿ ಎರಡು- ಮೂರು ದಿನದಲ್ಲಿ ಗ್ಲೋಬಲ್ ಟೆಂಡರ್ ಕರೆಯಲಾಗುವುದು. ಟೋಲ್ ಇಲ್ಲದೇ ರಸ್ತೆ ಮಾಡಲು ಸಾಧ್ಯವಿಲ್ಲ. ಏರ್ ಪೋರ್ಟ್, ಮೈಸೂರು ರಸ್ತೆ, ನೈಸ್ ರಸ್ತೆಗಳಲ್ಲಿ ಟೋಲ್ ಇದೆಯಲ್ಲಾ ಎಂದು ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಅವರು ಈ ವರ್ಷವನ್ನು ಪಕ್ಷ ಸಂಘಟನಾ ವರ್ಷ ಎಂದು ಘೋಷಣೆ ಮಾಡಿದ್ದಾರೆ. ಜಿಲ್ಲಾ ಅಧ್ಯಕ್ಷರನ್ನು ಕರೆಸಿ ಸಭೆ ನಡೆಸಲಾಗಿದೆ. ರಾಜ್ಯದಾದ್ಯಂತ 100 ಕಾಂಗ್ರೆಸ್ ಕಚೇರಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮಾಧ್ಯಮಗಳು ಹೇಳಿದಂತೆ ಯಾವುದೇ ರಾಜಕೀಯ ವಿಚಾರ ಇಲ್ಲಿಲ್ಲ. ಕೇವಲ ಸಂಘಟನೆ ವಿಚಾರ ಎಂದು ಹೇಳಿದರು.












Click it and Unblock the Notifications