ವಿಧಾನ ಪರಿಷತ್ ಆಯ್ಕೆ ಕುರಿತು ಅಪ್‌ಡೇಟ್ ಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಏಪ್ರಿಲ್ 03: ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳು ಒಂದು ವರ್ಷಕ್ಕೂ ಹೆಚ್ಚು ಕಾಲ ಖಾಲಿ ಉಳಿದಿದೆ. ಮೇಲ್ಮನೆಯಲ್ಲಿ ಆಡಳಿತ ಪಕ್ಷವು ತನ್ನ ಎಲ್ಲಾ ವಿಧೇಯಕಗಳಿಗೆ ಅಂಗೀಕಾರ ಪಡೆಯಲು ಬಹುಮತದ ಅವಶ್ಯಕತೆಯಿದೆ. ಆದರೆ ಮೇಲ್ಮನೆಗೆ ತನ್ನ ಸದಸ್ಯರನ್ನು ನೇಮಕ ಮಾಡಲು ಸರ್ಕಾರ ನಿರಾಸಕ್ತಿ ತೋರುತ್ತಿದೆ ಎನ್ನುವ ಮಾತು ರಾಜ್ಯ ರಾಜಕೀಯದಲ್ಲಿ ಕೇಳಿ ಬರುತ್ತಿದೆ. ಪರಿಷತ್ ಸ್ಥಾನಗಳ ನೇಮಕಾತಿ ವಿಳಂಬದ ಹಿಂದೆ ಕಾಂಗ್ರೆಸ್ ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿರಬಹುದು ಎಂಬ ಊಹಾಪೋಹ ವ್ಯಕ್ತವಾಗಿದೆ. ಇದೀದ ಈ ವಿಚಾರವಾಗಿ ದೆಹಲಿ ವರಿಷ್ಠರ ಜೊತೆಗೆ ಸಿಎಂ ಹಾಗೂ ಡಿಸಿಎಂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್ ಅವರು ಮಾತನಾಡಿ, ನಾಲ್ಕು ಸ್ಥಾನಗಳಲ್ಲಿ ಎರಡು ಅಕ್ಟೋಬರ್ 2023 ರಿಂದ, ಇನ್ನೊಂದು ನವೆಂಬರ್ 2023 ರಿಂದ ಮತ್ತು ಜನವರಿ 2024 ರಿಂದ ಖಾಲಿಯಾಗಿ ಉಳಿದಿವೆ. ಖಾಲಿ ಇರುವ ನಾಲ್ಕು ವಿಧಾನ ಪರಿಷತ್ ಸ್ಥಾನಗಳ ಬಗ್ಗೆ ಹೈಕಮಾಂಡ್ ಬಳಿ ಚರ್ಚೆ ನಡೆಸಲಾಗುವುದು. ಎಷ್ಟು ದಿನ ಸ್ಥಾನಗಳನ್ನು ಖಾಲಿ ಬಿಡಲು ಸಾಧ್ಯ ಎಂದು ಹೇಳಿದರು.

ಆಲಮಟ್ಟಿ ಜಲಾಶಯದ ಎತ್ತರವನ್ನು ಆದಷ್ಟು ಬೇಗ ಎತ್ತರಿಸಿ ಈ ಭಾಗದ ರೈತರ ಪಾಲಿಗೆ ನಾವು ಬೆಳಕಾಗಲಿದ್ದೇವೆ. ಈ ಕೆಲಸಕ್ಕೆ ನಮ್ಮ ಸರ್ಕಾರ ಬದ್ದವಾಗಿದೆ. ಈ ಭಾಗದಲ್ಲಿ ಅನೇಕ ರೈತರು ಹೆಚ್ಚಿನ ಪರಿಹಾರ ನೀಡಬೇಕು ಎಂದು ನ್ಯಾಯಲಯದಿಂದ ಆದೇಶ ತಂದಿದ್ದಾರೆ. ಬೆಂಗಳೂರಿಗಿಂತ ಹೆಚ್ಚು ಪರಿಹಾರ ಕೇಳುತ್ತಿದ್ದಾರೆ. ಇಷ್ಟೊಂದು ಹಣ ನೀಡಲು ಕಷ್ಟ. ಇದರ ಬಗ್ಗೆ ಗೆಜೆಟ್ ನೋಟಿಫಿಕೇಶನ್ ಮಾಡಲು ಕೇಂದ್ರ ಸರ್ಕಾರದ ಮೇಲೆ ಸಾಕಷ್ಟು ಒತ್ತಡ ತರುತ್ತಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ನೀರಾವರಿ ಕ್ಷೇತ್ರಕ್ಕೆ ಐದು ವರ್ಷದಲ್ಲಿ ರೂ.2 ಲಕ್ಷ ಕೋಟಿ ನೀಡುತ್ತೇವೆ ಎಂದು ಹೇಳಿದ್ದೆವು. ಗ್ಯಾರಂಟಿ ಯೋಜನೆಗಳು ಇರುವ ಕಾರಣಕ್ಕೆ ಪ್ರತಿವರ್ಷ ರೂ.40 ಸಾವಿರ ಕೋಟಿ ನೀಡಲು ಸಾಧ್ಯವಾಗುತ್ತಿಲ್ಲ. ಈ ವರ್ಷ ರೂ. 22 ಸಾವಿರ ಕೋಟಿ ನಿಗಧಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ನಾವು ಮಾತು ಕೊಟ್ಟಷ್ಟು ಅನುದಾನವನ್ನು ನೀಡುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಮುಂದಿನ ದಿನಗಳಲ್ಲಿ ಪ್ರಮುಖ ನೀರಾವರಿ ಯೋಜನೆಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ರಾಹುಲ್ ಕಲೂತಿ ಅವರು ಈ ಬ್ಯಾಂಕಿನ ಅಧ್ಯಕ್ಷರಾದಾಗ 10 ಶಾಖೆಗಳಿದ್ದವು. ಈಗ 16 ಶಾಖೆಗೆ ಹೆಚ್ಚಳ ಮಾಡಿದ್ದಾರೆ. ಯುವಕನ ಮೇಲೆ ನಂಬಿಕೆಯಿಟ್ಟು ಅನೇಕ ಹಿರಿಯರು ಅವರ ಬೆನ್ನಿಗೆ ನಿಂತಿದ್ದಾರೆ. ಈ ಬ್ಯಾಂಕಿನಿಂದ ಬಿ.ಡಿ.ಜತ್ತಿ ಅವರು, ಸಿದ್ದು ನ್ಯಾಮಗೌಡರಂತ ನಾಯಕರು ಹೊರಹೊಮ್ಮಿದ್ದಾರೆ. ಹೀಗೆ ನೂರಾರು ನಾಯಕರು ಜಮಖಂಡಿ ಬ್ಯಾಂಕಿನಿಂದ ಸಮಾಜಕ್ಕೆ ಕೊಡುಗೆಯಾಗಿ ಬಂದಿದ್ದಾರೆ ಎಂದು ಹೇಳಿದರು. ಕೆಎಂಎಫ್ ಸೇರಿದಂತೆ ಅನೇಕ ಸಹಕಾರಿ ತತ್ವದ ಅಡಿಯಲ್ಲಿ ಸ್ಥಾಪನೆಯಾಗಿರುವ ಸಂಸ್ಥೆಗಳು ಕನ್ನಡಿಗರ ಸೇವೆ ಮಾಡುತ್ತಿವೆ. ಸಹಕಾರಿ ಸಂಸ್ಥೆ ಬೆಳೆದರೆ ಜನರ ಬದುಕಿನಲ್ಲಿ ಬದಲಾವಣೆ ಸಾಧ್ಯ. ನಾನು, ಎಚ್.ಆರ್.ಪಾಟೀಲ್ ಅವರು, ಲಕ್ಷ್ಮಣ್ ಸವದಿ ಅವರು, ಶಿವಾನಂದ ಪಾಟೀಲ್ ಅರು, ನಿರಾಣಿ ಅವರು ಸೇರಿದಂತೆ ಅನೇಕ ನಾಯಕರು ಬೆಳೆದಿದ್ದು ಸಹಕಾರಿ ಕ್ಷೇತ್ರದಿಂದ ಎಂದು ಹೇಳಿದರು.
ವಿಜಯಪುರದ ಇಂಡಿ ತಾಲ್ಲೂಕಿನ ಮಹಿಳೆಯರು ಬೆಂಗಳೂರಿಗೆ ಉಚಿತ ಬಸ್ ನಲ್ಲಿ ಬಂದು ಹೋಳಿಗೆ ಮಾರಾಟ ಮಾಡಿ ತಿಂಗಳಿಗೆ ರೂ. 20 ಸಾವಿರ ದುಡಿಯುತ್ತಿದ್ದಾರೆ. ಗೃಹಲಕ್ಷ್ಮೀ ಯೋಜನೆಯಿಂದ ಅನೇಕ ಮಹಿಳೆಯರ ಬದುಕಿನಲ್ಲಿ ಬದಲಾವಣೆಯಾಗಿದೆ. ಯುವನಿಧಿ ಯುವಕರ ಬದುಕಿಗೆ ನೆರವಾಗಿದೆ ಎಂದರು. ರಾಜ್ಯದ ಇತಿಹಾಸದಲ್ಲಿಯೇ ರೂ.4 ಲಕ್ಷ ಕೋಟಿ ಮೊತ್ತದ ಬಜೆಟ್ ಮಂಡಿಸಿ ಸಿದ್ದರಾಮಯ್ಯ ಅವರು ದಾಖಲೆ ನಿರ್ಮಿಸಿ ಇತಿಹಾಸದ ಪುಟ ಸೇರಿದ್ದಾರೆ. ನಾವು ಜಾತಿ ಮೇಲೆ ರಾಜಕಾರಣ ಮಾಡುತ್ತಿಲ್ಲ, ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ. ಮತ್ತೆ 2028 ಕ್ಕೆ ರಾಜ್ಯದ ಜನ ಮತ್ತೊಮ್ಮೆ ಆಶೀರ್ವಾದ ಮಾಡಿ ಅಧಿಕಾರಕ್ಕೆ ಬರುತ್ತೇವೆ ಎನ್ನುವ ವಿಶ್ವಾಸವಿದೆ" ಎಂದು ಹೇಳಿದರು.
ಉತ್ತರ ಕರ್ನಾಟಕ ಭಾಗದಲ್ಲಿಯೂ ರೈತರು ರೇಷ್ಮೆ ಬೆಳೆಯುತ್ತಿದ್ದಾರೆ. ಇದು ಶುಭ ಸೂಚಕ ಬೆಳವಣಿಗೆ. ನಮ್ಮ ಕಡೆ ಸಿಲ್ಕ್ ಮತ್ತು ಮಿಲ್ಕ್ ಉತ್ಪಾದನೆಗೆ ಹೆಸರುವಾಸಿಯಾಗಿದೆ. ಎಲ್ಲಾ ಭಾಗಗಳಲ್ಲೂ ರೈತರು ಪ್ರಗತಿಪರವಾಗಿ ಬೆಳೆಯಬೇಕು. ಎಂಜಿನಿಯರ್ ಗಳಿಗಿಂತ ಹೆಚ್ಚು ದುಡಿಯುವ ಶಕ್ತಿ ರೈತರಿಗಿದೆ. ಇದನ್ನು ಇಲ್ಲಿಯ ಸಕ್ಕರೆ ಕಾರ್ಖಾನೆಗಳು ನಿಜ ಮಾಡಿವೆ ಎಂದು ಹೇಳಿದರು. ರಾಹುಲ್ ಕಲೂತಿ ಅವರು ಕಳೆದ ಒಂದು ವರ್ಷದಿಂದ ಪಟ್ಟು ಬಿಡದೆ ನನ್ನಿಂದಲೇ ಜಮಖಂಡಿ ಬ್ಯಾಂಕಿನ ಕಟ್ಟಡ ಉದ್ಘಾಟನೆ ಮಾಡಿಸಬೇಕು ಎಂದು ಛಲ ಬಿಡದೆ ನಿಂತಿದ್ದರು. ನನ್ನನ್ನು ಇಲ್ಲಿಗೆ ಕರೆತಂದು ಉದ್ಘಾಟನೆ ಮಾಡಿಸಿದ್ದು ಅತ್ಯಂತ ಸಂತಸದ ವಿಚಾರ. ಸರಳತೆಗೆ ಮತ್ತೊಂದು ಹೆಸರೇ ಇವರು. ಯಾವಾಗ ನನ್ನನ್ನು ಭೇಟಿ ಮಾಡಿದರೂ ಅತ್ಯಂತ ತಾಳ್ಮೆಯಿಂದ ಇರುತ್ತಾರೆ.












Click it and Unblock the Notifications