ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೇ ಕಾಂಗ್ರೆಸ್ ಶಾಸಕರ ಖರೀದಿ: ಡಿ ಕೆ ಶಿವಕುಮಾರ್ ರಿಯಾಕ್ಷನ್
ಚಿಕ್ಕಬಳ್ಳಾಪುರ, ನವೆಂಬರ್24: ಕಾಂಗ್ರೆಸ್ ಪಕ್ಷದ ಘಟಾನುಘಟಿ ನಾಯಕರೇ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ ಎಂದು ಬಿಜೆಪಿ ನಾಯಕರ ಆರೋಪ ಕೇಳಿ ಬಂದಿದ್ದು, ಬಿಜೆಪಿ ನಾಯಕರು ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಶಾಸಕರ ಖರೀದಿ ಹಾಗೂ ಕುದುರೆ ವ್ಯಾಪಾರ ಬಿಜೆಪಿ ಸಂಸ್ಕೃತಿ ಎಂದು ತಿರುಗೇಟು ನೀಡಿದರು.
ಶಿಡ್ಲಘಟ್ಟದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಮಾತನಾಡಿ, ಈ ಹಿಂದೆ ಬಿಜೆಪಿ ಸರ್ಕಾರ ರಚನೆಯಾದಾಗ ಅವರು ಎಷ್ಟು ಸಾವಿರ ಕೋಟಿ ಖರ್ಚು ಮಾಡಿದ್ದರು. ಮುಖ್ಯಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಬೇಕಾಗಿತ್ತು, ಮಂತ್ರಿ ಹುದ್ದೆಗೆ ಎಷ್ಟು ಹಣ ನೀಡಲಾಗಿದೆ ಎಂದು ಅವರದೇ ಪಕ್ಷದ ನಾಯಕರು ಬಹಿರಂಗ ಹೇಳಿಕೆ ನೀಡಿದ್ದಾರೆ. ಅವರು ಎಷ್ಟು ಹಣ ಆಮೀಷ ಒಡ್ಡಿದ್ದರು ಎಂದು ವಿಧಾನಸಭೆಯಲ್ಲೂ ಪ್ರಸ್ತಾಪವಾಗಿದ್ದು, ದಾಖಲೆಗಳಲ್ಲಿ ಸೇರಿವೆ. ಈಗ ಬಿಜೆಪಿಯವರು ತಮ್ಮ ಪ್ರವೃತ್ತಿಯನ್ನು ನೆನೆಸಿಕೊಳ್ಳುತ್ತಿದ್ದಾರೆ ಎಂದು ಹರಿಹಾಯ್ದರು.

ಹೈಕಮಾಂಡ್ ಹೇಳಿದ್ದನ್ನು ನಾನು, ಶಿವಕುಮಾರ್ ಸೇರಿದಂತೆ ಎಲ್ಲರೂ ಒಪ್ಪಬೇಕು ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಕುರಿತು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ್ದು, ಅವರು ಹೇಳಿದ ಮೇಲೆ ಅದೇ ನಮಗೆ ವೇದವಾಕ್ಯ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ತಿಳಿಸಿದರು.
ವಿರೋಧ ಪಕ್ಷಗಳು ಹಗಲುಗನಸು ಕಾಣುವುದನ್ನು ಬಿಡಬೇಕು. ಏಕೆಂದರೆ 2028 ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದು ಜನಸೇವೆ ಮುಂದುವರೆಸಲಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು. ರಾಜ್ಯದಲ್ಲಿ ಅಭಿವೃದ್ಧಿಯ ಸಂಗಮವಾಗಿದೆ. 2 ಸಾವಿರ ಕೋಟಿ ರೂ. ಮೊತ್ತದ ಅಭಿವೃದ್ಧಿ ಕೆಲಸವನ್ನು ವಿರೋಧ ಪಕ್ಷದ ಶಾಸಕರ ಕ್ಷೇತ್ರಕ್ಕೆ ಕಾಂಗ್ರೆಸ್ ಸರ್ಕಾರ ನೀಡುತ್ತಿದೆ ಎಂದರೆ ನಮ್ಮ ಜನಪರ ಧೋರಣೆಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಈ ಕ್ಷೇತ್ರದ ಅಭಿವೃದ್ಧಿಗೆ ಇಡೀ ಸರ್ಕಾರವೇ ಬಂದಿದೆ ಎಂದರೆ ನಮಗೆ ಜನರ ಮೇಲಿನ ಪ್ರೀತಿಯೇ ಕಾರಣ ಎಂದು ಹೇಳಿದರು.
ರಾಜ್ಯದ ಪ್ರತಿ ಮಹಿಳೆಯರು ಅವರ ಖಾತೆಗೆ ಹಣ ಬಂದಾಗಲೆಲ್ಲಾ ನಮ್ಮ ಸರ್ಕಾರವನ್ನು ನೆನಪಿಸಿಕೊಳ್ಳುತ್ತಾರೆ. ಯಾವುದೇ ಪುಣ್ಯ ಕ್ಷೇತ್ರಗಳಿಗೆ ಹೋದರೂ ನಮ್ಮ ಒಳಿತಿಗೆ ಪ್ರಾರ್ಥನೆ ಮಾಡುತ್ತಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರು ಬಂದಾಗ ಮಹಿಳೆಯರು ಗೌರವದಿಂದ ಅವರಿಗೆ ನಮಿಸಿದರು. ಮಹಿಳೆಯರ ಬದುಕಿನಲ್ಲಿ ನಾವು ತಂದಿರುವ ಬದಲಾವಣೆಯನ್ನು ಇಡೀ ದೇಶವೇ ನೋಡುತ್ತಿದೆ ಎಂದರು.
ಸತ್ಯಕ್ಕೂ ಸುಳ್ಳಿಗೂ ಎಷ್ಟು ಅಂತರ ಎಂದು ಅಕ್ಬರ್ ಒಮ್ಮೆ ಬೀರ್ಬಲ್ ಅವರನ್ನು ಕೇಳುತ್ತಾನೆ. ಆಗ ಬೀರ್ಬಲ್ ನಾಲ್ಕು ಬೆರಳಿನ ಅಂತರ ಎಂದು ಹೇಳುತ್ತಾರೆ. ಕಣ್ಣಲ್ಲಿ ನೋಡುವುದು ಸತ್ಯ, ಕಿವಿಯಲ್ಲಿ ಕೇಳುವುದು ಸುಳ್ಳು. ಸಿದ್ದರಾಮಯ್ಯ ಅವರ ನೇತೃತ್ವದ ಕಾಂಗ್ರೆಸ್ ಸರ್ಕಾರ 2 ಸಾವಿರ ಕೋಟಿ ಮೊತ್ತವನ್ನು ನೀಡಿದೆ. ಇದಕ್ಕೆ ನಿಮ್ಮೆಲ್ಲರ ಕಣ್ಣುಗಳೇ ಸಾಕ್ಷಿ ಎಂದು ಹೇಳಿದರು.
ಸಚಿವರಾದ ಕೆ.ಎಚ್.ಮುನಿಯಪ್ಪ ಅವರು, ಸುಧಾಕರ್ ಅವರು ಹಾಗೂ ಕೃಷ್ಣಬೈರೇಗೌಡರು ನನ್ನ ಬೆನ್ನತ್ತಿದ್ದು 2027 ರ ಹೊತ್ತಿಗೆ ಎರಡು ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಹರಿಸಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಪೂರಕವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ನಾವು ಪರ್ಯಾಯವಾಗಿ ಕಂದಾಯ ಭೂಮಿ ನೀಡಿದ್ದರೂ ಕೇಂದ್ರ ಪರಿಸರ ಇಲಾಖೆ ಅರಣ್ಯ ಭೂಮಿ ಬಳಕೆಗೆ ಅನುಮತಿ ನೀಡುತ್ತಿಲ್ಲ ಎಂದರು.












Click it and Unblock the Notifications