Honeytrap: ರಾಜ್ಯದಲ್ಲಿ ಪ್ರಭಾವಿ ಸಚಿವರ ಹನಿಟ್ರ್ಯಾಪ್ ಸದ್ದು: ಡಿ ಕೆ ಶಿವಕುಮಾರ್ ಏನಂದ್ರು?
ಬೆಂಗಳೂರು, ಮಾರ್ಚ್ 20: ರಾಜ್ಯ ರಾಜಕಾರಣದಲ್ಲಿ ಹನಿ ಟ್ರ್ಯಾಪ್ ಚರ್ಚೆ ತೀವ್ರಗೊಳ್ಳುತ್ತಿದೆ. ವಿಧಾನಸಭೆಯಲ್ಲೂ ಬುಧವಾರ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪವಾಗಿತ್ತು. ಬಜೆಟ್ ಅಧಿವೇಶನದ ಸಂದರ್ಭದಲ್ಲಿ ಹನಿಟ್ರ್ಯಾಪ್ ವಿಚಾರ ಬಹಿರಂಗಗೊಂಡಿತ್ತು. ಕರ್ನಾಟಕದ ಪ್ರಭಾವಿ ಸಚಿವರನ್ನು ಹನಿಟ್ರ್ಯಾಪ್ ಮಾಡಲು ಪ್ರಯತ್ನ ನಡೆಸಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ರಾಜಕೀಯವಾಗಿ ಹಣಿಯಲು ಹನಿಟ್ರ್ಯಾಪ್ ಯತ್ನ ನಡೆಸಲಾಗಿದೆ ಎಂಬ ಗುಸುಗುಸು ಕೇಳಿಬರುತ್ತಿದ್ದು, ಈ ಕುರಿತು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ್ದಾರೆ. ಸಚಿವರ ಹನಿ ಟ್ರ್ಯಾಪ್ ವಿಚಾರವಾಗಿ ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಇದರ ಬಗ್ಗೆ ತನಿಖೆ ಮಾಡಿಸೋಣ ಎಂದು ಹೇಳಿದರು.
ವಿಧಾನಸೌಧದ ಆವರಣದಲ್ಲಿ ಮಾಧ್ಯಮಗಳ ಜೊತೆಗೆ ಮಾತು ಮುಂದುವರೆಸಿದ ಅವರು, ದ್ವೇಷ ರಾಜಕಾರಣ ಎಂಬುದು ಅವರ (ಕೇಂದ್ರ ಸಚಿವ ಕುಮಾರಸ್ವಾಮಿ) ಡಿಎನ್ ಎ ಯಲ್ಲಿದೆ. ಕೇತಗಾನಹಳ್ಳಿ ಜಮೀನು ವಿಚಾರವಾಗಿ ಕೇಸ್ ದಾಖಲಿಸಿರುವುದು ಎಸ್.ಆರ್ ಹಿರೇಮಠ್ ಅವರು. ಕೋರ್ಟ್ ಆದೇಶದಂತೆ ಅಧಿಕಾರಿಗಳು ಕೆಲಸ ಮಾಡಿದ್ದು, ನಾವು ಹೇಗೆ ದ್ವೇಷ ರಾಜಕಾರಣ ಮಾಡಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.

ಕೇಂದ್ರ ಸಚಿವ ಕುಮಾರಸ್ವಾಮಿ ಕೇತಗಾನಹಳ್ಳಿ ಜಮೀನು ಒತ್ತುವರಿ ತೆರವು ದ್ವೇಷದ ರಾಜಕಾರಣ ಎಂಬ ಆರೋಪದ ಬಗ್ಗೆ ಕೇಳಿದಾಗ, "ಈ ವಿಚಾರವಾಗಿ ನಾವು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದೇವಾ? ಈ ವಿಚಾರವಾಗಿ ಎಸ್.ಆರ್ ಹಿರೇಮಠ್ ಅವರು ಪ್ರಕರಣ ದಾಖಲಿಸಿದ್ದಾರೆ. ನನ್ನ ಮೇಲೂ ಹಿರೇಮಠ್ ಅವರು ಅನೇಕ ಕೇಸ್ ದಾಖಲಿಸಿದ್ದರು. ಅವರ ಅರ್ಜಿ ಮೇರೆಗೆ ನ್ಯಾಯಾಲಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅಧಿಕಾರಿಗಳು ಕೋರ್ಟ್ ಆದೇಶದಂತೆ ಕೆಲಸ ಮಾಡುತ್ತಿದ್ದಾರೆ. ಇದರಲ್ಲಿ ದ್ವೇಷದ ರಾಜಕಾರಣ ಏನಿದೆ? ಎಂದು ತಿಳಿಸಿದರು.
ಯುವ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರೀತಿಯಿಂದ ಮಂಡ್ಯ ಭಾಗದ ಕೆಲವು ನಾಯಕರನ್ನು ಛತ್ರಿ ಎಂದು ಕರೆದಿರುವುದನ್ನು ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅಧಿಕಾರದ ಮದ ಎಂದು ಟೀಕಿಸಿರುವ ಬಗ್ಗೆ ಕೇಳಿದಾಗ, "ನನಗೆ ಮದ ಏರಿದ್ದರೆ, ಇಳಿಸಲಿ. ನನಗೆ ಬೇಕಾದವರನ್ನು ನಾನು ಪ್ರೀತಿಯಿಂದ ಏನು ಬೇಕಾದರೂ ಕರೆಯುತ್ತೇನೆ. ಅದರಲ್ಲಿ ಇವರದೇನೂ? ಕೆಲವರು ತಮ್ಮ ಆಪ್ತರನ್ನು ಕಳ್ಳ ನನ್ನ ಮಗನೆ... ಅಂತ ಅನ್ನೋದು ಸೇರಿದಂತೆ ಇನ್ನು ಹಲವು ರೀತಿಯಲ್ಲಿ ಕರೆಯುತ್ತಾರೆ. ಅದು ನಮ್ಮ ಮತ್ತು ಅವರ ನಡುವಣ ಬಾಂಧವ್ಯದ ವಿಚಾರ. ಯಾವ ಛತ್ರಿನೂ ಇಲ್ಲ, ಏನೂ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಪಕ್ಷದ ಪದಾಧಿಕಾರಿಗಳ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಹುದ್ದೆ ಬಿಟ್ಟುಕೊಡುವ ವಿಚಾರ ಪ್ರಸ್ತಾಪಿಸಿದ್ದೀರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಈ ವಿಚಾರವಾಗಿ ಪಕ್ಷ ತೀರ್ಮಾನ ಮಾಡಲಿದೆ. ನಾನು ನನ್ನ ಕರ್ತವ್ಯ ಮಾಡಿದ್ದೇನೆ. ನಾನು ಸೇರಿದಂತೆ ಇಲ್ಲಿ ಯಾರೂ ಶಾಶ್ವತವಲ್ಲ. ನನ್ನ ಕಾಲಾವಧಿಯಲ್ಲಿ ಕಾಂಗ್ರೆಸ್ ಕಚೇರಿ ನಿರ್ಮಾಣ ಕಾರ್ಯ ಪೂರ್ಣಗೊಳ್ಳಬೇಕು. ನಾವು ಬೇರೆ ಜವಾಬ್ದಾರಿಗಳನ್ನು ನಿಭಾಯಿಸಬೇಕು. ಪಕ್ಷ ಯಾವಾಗ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧವಾಗಿದ್ದೇವೆ. ಅದು ಇವತ್ತೋ, ನಾಳೆಯೋ, ಐದು ವರ್ಷಗಳ ನಂತರವೋ, 10 ವರ್ಷಗಳ ನಂತರವೋ ಗೊತ್ತಿಲ್ಲ. ಪಕ್ಷಕ್ಕೆ ಹೇಗೆ ನ್ಯಾಯ ಒದಗಿಸಿಕೊಡಬಹುದೋ ನಾನು ನನ್ನ ಪ್ರಯತ್ನ ಮಾಡಿದ್ದೇನೆ. ನಾನು ಯಾವುದೇ ಆತುರದಲ್ಲಿ ಇಲ್ಲ. ಪಕ್ಷದ ತೀರ್ಮಾನದಂತೆ ನಡೆಯುವೆ ಎಂದು ತಿಳಿಸಿದರು.












Click it and Unblock the Notifications