ಹನಿಟ್ರ್ಯಾಪ್ ವಿವಾದ: ಸಿದ್ದರಾಮಯ್ಯ ಭೇಟಿಯಾದ ಮಲ್ಲಿಕಾರ್ಜುನ್ ಖರ್ಗೆ: ಮಹತ್ವದ ಚರ್ಚೆ ಬಗ್ಗೆ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಮಾರ್ಚ್ 24: ರಾಜ್ಯ ರಾಜಕೀಯಲ್ಲಿ ಮತ್ತೆ ಹನಿಟ್ರ್ಯಾಪ್ ಸದ್ದು ಜೋರಾಗಿದೆ. ಕಳೆದ ಮೈತ್ರಿ ಸರ್ಕಾರದ ಸಂದರ್ಭದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಹನಿಟ್ರ್ಯಾಪ್ ರಾಷ್ಟ್ರ ಮಟ್ಟದಲ್ಲೂ ಸದ್ದು ಮಾಡಿತ್ತು. ಇದೀದ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರಿಗೆ ಹನಿಟ್ರ್ಯಾಪ್ ಮಾಡಲು ಯತ್ನಿಸಿರುವುದು ಭಾರೀ ಸದ್ದು ಮಾಡುತ್ತಿದೆ. ಹನಿಟ್ರ್ಯಾಪ್ ವಿಚಾರವಾಗಿ ವಿಧಾನಸಭೆಯಲ್ಲಿ ಗದ್ದಲವೇ ನಡೆದಿದೆ.ಹನಿಟ್ರ್ಯಾಪ್ ವಿಚಾರವಾಗಿ ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿರುವುದು ತೀವ್ರ ಕುತೂಹಲ ಮೂಡಿಸಿದೆ.
ಬೆಂಗಳೂರಿನ ಮುಖ್ಯಮಂತ್ರಿಗಳ ಕಾವೇರಿ ನಿವಾಸಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ, ಉಭಯ ಕುಶಲೋಪರಿ ವಿಚಾರಿಸಿದರು. ನಮ್ಮದೇ ಸಚಿವರ ಮೇಲೆ ಹನಿಟ್ರ್ಯಾಪ್ ನಡೆದಿದೆ. ಈ ವಿವಾದದ ಬೆನ್ನಲ್ಲೇ ಸ್ವತಃ ಮಲ್ಲಿಕಾರ್ಜುನ ಖರ್ಗೆ ಅವರೇ ಬಂದು ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಹನಿಟ್ರಾಪ್ ವಿಚಾರದ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ರಾಜ್ಯ ನಾಯಕರಿಂದ ದೂರವಾಣಿ ಮೂಲಕ ಮಾಹಿತಿ ಪಡೆದಿದೆ. ಆದರೂ ಸಹ ಎಐಸಿಸಿ ಅಧ್ಯಕ್ಷರು ಸಿಎಂ ಅವರ ಆರೋಗ್ಯ ವಿಚಾರಿಸುವ ನೆಪದಲ್ಲಿ ಬಂದು ಹನಿಟ್ರ್ಯಾಪ್ ಬಗ್ಗೆ ಸುದೀರ್ಘವಾಗಿ 45 ಮಿಮಿಷಗಳ ಮಹತ್ವದ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಇನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಅವರು ಭೇಟಿ ಮಾಡಿ ಮಾತುಕತೆ ನಡೆಸಿರುವ ಕುರಿತು ಡಿಸಿಎಂ ಡಿ ಕೆ ಶಿವಕುಮಾರ್ ಮಾಧ್ಯಮಗಳ ಜೊತೆಗೆ ಪ್ರತಿಕ್ರಿಯಿಸಿದ್ದಾರೆ. ಮುಖ್ಯಮಂತ್ರಿಯವರನ್ನು ಯಾರು ಬೇಕಾದರೂ ಭೇಟಿ ಮಾಡಬಹುದು. ಅವರನ್ನು ಯಾರು ಭೇಟಿ ಮಾಡಿದರು ಎಂಬುದರ ಬಗ್ಗೆ ನನ್ನನ್ನು ಏಕೆ ಕೇಳುತ್ತೀರಿ? ನನಗೆ ಸಂಬಂಧಿಸಿದ ವಿಚಾರಗಳೇನಾದರೂ ಇದ್ದರೆ ಆ ಬಗ್ಗೆ ಮಾತ್ರ ಪ್ರಶ್ನೆ ಕೇಳಿ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ರಾಜೇಂದ್ರ ರಾಜಣ್ಣ ಅವರು ಶನಿವಾರ ಸಿಎಂ ಭೇಟಿಯಾಗಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಆ ವಿಚಾರವಾಗಿ ಏನನ್ನೂ ಕೇಳಬೇಡಿ. ಮುಖ್ಯಮಂತ್ರಿಗಳನ್ನು ಯಾರು ಬೇಕಾದರೂ ಭೇಟಿ ಮಾಡಿಕೊಳ್ಳಲಿ. ನನ್ನ ಇಲಾಖೆಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾತ್ರ ನನ್ನನ್ನು ಕೇಳಿ. ಅವರು ಇವರನ್ನು ಭೇಟಿ ಮಾಡಿದರು, ಇವರು ಅವರನ್ನು ಭೇಟಿ ಮಾಡಿದರು ಎಂದು ನನ್ನನ್ನು ಯಾಕೆ ಕೇಳುತ್ತೀರಾ? ಮುಖ್ಯಮಂತ್ರಿಗಳು ಅಂದಮೇಲೆ ಎಲ್ಲಾ ಸಚಿವರು, ಶಾಸಕರು, ಸಂಸದರು, ಸಾರ್ವಜನಿಕರು ಭೇಟಿ ಮಾಡುವುದು ಸಹಜ. ನನ್ನನ್ನೂ ಅನೇಕರು ಭೇಟಿ ಮಾಡುತ್ತಾರೆ. ಇಂಥ ವಿಚಾರವಾಗಿ ಯಾವುದೇ ಪ್ರಶ್ನೆಗಳನ್ನು ನನಗೆ ಕೇಳಬೇಡಿ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು.
ಹೇಮಾವತಿ ಕೆನಾಲ್ ವಿಚಾರವಾಗಿ ನೀವು ಮತ್ತು ಶಾಸಕ ರಂಗನಾಥ್ ಅವರು ತೊಂದರೆ ಮಾಡುತ್ತಿದ್ದೀರಿ ಎಂದು ರಾಜೇಂದ್ರ ಅವರು ಆರೋಪಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರು ಏನು ಬೇಕಾದರೂ ಮಾತನಾಡಲಿ. ಹೇಮಾವತಿ ನಾಲೆ ಬಗ್ಗೆ ಇಂದಲ್ಲ, 20-30 ವರ್ಷಗಳಿಂದಲೂ, ವೈ.ಕೆ ರಾಮಯ್ಯ ಅವರ ಕಾಲದಿಂದಲೂ ಚರ್ಚೆ ನಡೆಯುತ್ತಿದೆ. ಕುಮಾರಸ್ವಾಮಿ ಅವರ ಸರ್ಕಾರದಲ್ಲಿ ನಾವು ಇದನ್ನು ಪಾಸ್ ಮಾಡಿದ್ದೆವು. ಆ ಕೆಲಸ ಈಗಲೂ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದರು.
ನೀವು ದೆಹಲಿ ಪ್ರವಾಸ ಮಾಡುತ್ತಿದ್ದು, ಹೈಕಮಾಂಡ್ ನಾಯಕರ ಜೊತೆ ಇತ್ತೀಚಿನ ಬೆಳವಣಿಗೆ ಬಗ್ಗೆ ಚರ್ಚೆ ಮಾಡುತ್ತೀರಾ ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಇಂಥ ಸುಳ್ಳು ಸುದ್ದಿಗಳ ಬಗ್ಗೆ ನಾನು ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಮಾಧ್ಯಮ ಸ್ನೇಹಿತರು ಸಮ್ಮೇಳನಕ್ಕೆ (Conclave) ಆಹ್ವಾನ ನೀಡಿದ್ದು, ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಕಾರ್ಯಕ್ರಮ ಮುಗಿದ ಬಳಿಕ ರಾತ್ರಿಯೇ ಮರಳುತ್ತಿದ್ದೇನೆ ಎಂದು ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಸ್ಪಷ್ಟಪಡಿಸಿದರು.
ಹನಿಟ್ರ್ಯಾಪ್ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿ, ದೂರು ನೀಡದಿದ್ದರೆ ಪಕ್ಷ ಹಾಗೂ ಸರ್ಕಾರಕ್ಕೆ ಮುಜುಗರವಲ್ಲವೇ" ಎಂದು ಕೇಳಿದಾಗ, "ಈ ಬಗ್ಗೆ ಮುಖ್ಯಮಂತ್ರಿಗಳನ್ನು ಕೇಳಿ" ಎಂದಷ್ಟೇ ಹೇಳಿದರು. ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ಸಚಿವರ ವಿರುದ್ಧ ಹೈಕಮಾಂಡ್ ಗರಂ ಆಗಿದೆಯಂತಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇದೆಲ್ಲವೂ ಬೋಗಸ್, ಯಾರು ಗರಂ ಆಗಿದ್ದಾರೆ? ಸುಮ್ಮನೆ ಸುಳ್ಳು ಸುದ್ದಿಗಳನ್ನು ಸೃಷ್ಠಿ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ರಾಜಣ್ಣ ತಮ್ಮನ್ನು ಭೇಟಿ ಮಾಡಿದ್ದರಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಕೆಪಿಸಿಸಿ ಅಧ್ಯಕ್ಷನಾಗಿ ನಿಮ್ಮ ಬಳಿ ಏನಾದರೂ ದಾಖಲೆ ಇದ್ದರೆ ಕೊಡಿ ಎಂದು ಕೇಳಿದ್ದೇನೆ. ನನ್ನ ಬಳಿ ಏನೂ ಇಲ್ಲ ಎಂದು ಅವರು ಹೇಳಿದ್ದಾರೆ. ಅವರು ನನ್ನ ಬಳಿ ಇನ್ನೂ ಏನೇನೂ ಹೇಳಿದ್ದಾರೆ ಎಂಬುದನ್ನು ನಿಮ್ಮ ಮುಂದೆ ಹೇಳಲು ಆಗುವುದಿಲ್ಲ. ನಿಮ್ಮದು ಏನಾದರೂ ಇದ್ದರೆ ದೂರು ನೀಡಿ ಎಂದು ಹೇಳಿದ್ದೇನೆ. ಅವರು ಕೋಲಾರದಲ್ಲಿ ಈಗಾಗಲೇ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ ಎಂದು ಡಿ ಕೆ ಶಿವಕುಮಾರ್ ಅವರು ಕೇಳಿದರು.
ನಿನ್ನೆ ತಮಿಳುನಾಡಿಗೆ ತೆರಳಿ ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ವಿಚಾರವಾಗಿ ರಾಜ್ಯದ ನಿಲುವು ತಿಳಿಸಿದ್ದೇನೆ. ದಕ್ಷಿಣ ಭಾರತ ಹಾಗೂ ಇತರೆ ರಾಜ್ಯಗಳ ಕ್ಷೇತ್ರಗಳನ್ನು ಕಡಿಮೆ ಮಾಡುವ ಪ್ರಯತ್ನ ನಡೆಯುತ್ತಿದ್ದು, ಸಂಬಂಧ ಪಟ್ಟ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳು ಸಭೆ ಮಾಡಿದ್ದರು. ನಮ್ಮ ಸಿಎಂ ಅವರು ವಿಶ್ರಾಂತಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ ನಾನು ಸಭೆಗೆ ಹೋಗಿ ಸರ್ಕಾರದ ಪ್ರತಿನಿಧಿಯಾಗಿ ನಮ್ಮ ಪ್ರಸ್ತಾವನೆ ಸಲ್ಲಿಸಿದ್ದೇನೆ. ಈ ಬಗ್ಗೆ ಮುಖ್ಯಮಂತ್ರಿಗಳು ಹೇಳಿದ್ದ ಎಲ್ಲಾ ವಿಚಾರಗಳನ್ನೂ ಸಭೆಯಲ್ಲಿ ಪ್ರಸ್ತಾಪಿಸಿದ್ದೇನೆ. ನಮ್ಮ ರಾಜ್ಯದಲ್ಲಿ 2 ಕ್ಷೇತ್ರಗಳನ್ನು ಕಡಿಮೆ ಮಾಡುವ ದೊಡ್ಡ ಪ್ರಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಇದು ನಮ್ಮ ರಾಜ್ಯ ಹಾಗೂ ದಕ್ಷಿಣ ಭಾರತದ ಸ್ವಾಭಿಮಾನದ ವಿಚಾರ ಎಂದು ಹೇಳಿದರು.












Click it and Unblock the Notifications