ರಾಮದೇವ್ ವಿರುದ್ಧ ಪ್ರತಿಭಟನೆ, ಚಿಕ್ಕಮಗಳೂರು ಬಂದ್
ಚಿಕ್ಕಮಗಳೂರು, ಮೇ.9 : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಕುರಿತು ಯೋಗಗುರು ಬಾಬಾ ರಾಮದೇವ್ ನೀಡಿರುವ ಹೇಳಿಕೆ ಖಂಡಿಸಿ ಮೇ 10ರ ಶನಿವಾರ ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲಾಗಿದೆ. ವಿವಿಧ ಪ್ರಗತಿ ಪರ ಸಂಘಟನೆಗಳು ಕರೆ ನೀಡಿರುವ ಬಂದ್ ಗೆ ಜೆಡಿಎಸ್, ಸಿಪಿಐ, ಡಿಎಸ್ಎಸ್, ಸಿಪಿಐಎಂಎಲ್ ಮುಖಂಡರು ಬೆಂಬಲ ಸೂಚಿಸಿದ್ದಾರೆ.
ಬಂದ್ ಬಗ್ಗೆ ಮಾಹಿತಿ ನೀಡಿರುವ ಪ್ರಗತಿಪರ ವೇದಿಕೆ ಮುಖಂಡ ಪರಮೇಶ್ವರ್, ಯೋಗಗುರು ಬಾಬಾ ರಾಮದೇವ್ ಉತ್ತರ ಪ್ರದೇಶದ ಲಕ್ನೋದಲ್ಲಿ ಕೆಲವು ದಿನಗಳ ಹಿಂದೆ ಚುನಾವಣಾ ಪ್ರಚಾರ ನಡೆಸುವ ಸಂದರ್ಭದಲ್ಲಿ "ರಾಹುಲ್ ಗಾಂಧಿ ದಲಿತರ ಮನೆಗಳಿಗೆ ಭೇಟಿ ನೀಡುವುದು ಹನಿಮೂನ್ ಹಾಗೂ ಪಿಕ್‌ನಿಕ್ ಗಾಗಿ" ಎಂದು ಹೇಳಿದ್ದಾರೆ.
ಬಾಬಾ ರಾಮದೇವ್ ಹೇಳಿಕೆ ನಾಗರೀಕ ಸಮಾಜ ತಲೆತಗ್ಗಿಸುವಂತಹದ್ದು. ಬೇರೆ-ಬೇರೆ ಸಂದರ್ಭಗಳಲ್ಲಿ ಬೀದಿಗಿಳಿದು ಪ್ರತಿಭಟನೆ ಮಾಡುವ ಮಠಾಧಿಪತಿಗಳು ಬಾಬಾ ರಾಮದೇವ್ ಹೇಳಿಕೆ ಬಗ್ಗೆ ಏಕೆ ಮೌನವಾಗಿದ್ದಾರೆ ಎಂದು ಪ್ರಶ್ನಿಸಿದರು. ರಾಮದೇವ್ ಹೇಳಿಕೆಯನ್ನು ಖಂಡಿಸಿ ಚಿಕ್ಕಮಗಳೂರು ಬಂದ್ ಗೆ ಕರೆ ನೀಡಲಾಗಿದೆ ಎಂದು ಹೇಳಿದರು. [ಮಂಗಳೂರು : ರಾಮದೇವ್ ಹೇಳಿಕೆ ಖಂಡಿಸಿ ಪ್ರತಿಭಟನೆ]
ಶನಿವಾರ ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಚಿಕ್ಕಮಗಳೂರು ಬಂದ್ ಗೆ ಕೆ ನೀಡಲಾಗಿದೆ. ವಿವಿಧ ಸಂಘಟನೆಗಳು ಪ್ರತಿಭಟನಾ ಮೆರವಣಿಗೆ ನಡೆಸಲಿದ್ದು, ಬೆಳಗ್ಗೆ ಹಳೆ ತಾಲೂಕು ಕಚೇರಿಯಿಂದ ಎಂಜಿ ರಸ್ತೆ ಮೂಲಕ ಸಾಗಿ ಎಸ್‌ಪಿ ಕಚೇರಿಗೆ ತೆರಳಿ ರಾಮದೇವ್ ಅವರನ್ನು ಬಂಧಿಸುವಂತೆ ಮನವಿ ಸಲ್ಲಿಸಲಾಗುವುದು ಎಂದು ಪರಮೇಶ್ವರ್ ತಿಳಿಸಿದರು. [ಕರ್ನಾಟಕದ ಇತರ ಜಿಲ್ಲಾಸುದ್ದಿಗಳು]

ಶನಿವಾರ ಚಿಕ್ಕಮಗಳೂರು ಬಂದ್
ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಯೋಗಗುರು ಬಾಬಾ ರಾಮದೇವ್ ನೀಡಿರುವ ಹೇಳಿಕೆ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳು ಶನಿವಾರ ಚಿಕ್ಕಮಗಳೂರು ಬಂದ್ ಗೆ ಕರೆ ನೀಡಿವೆ. ಜೆಡಿಎಸ್, ಸಿಪಿಐ, ಡಿಎಸ್ಎಸ್, ಸಿಪಿಐಎಂಎಲ್ ಮುಖಂಡರು ಬೆಂಬಲ ಸೂಚಿಸಿದ್ದಾರೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆವರೆಗೆ ಬಂದ್ ಗೆ ಕರೆ ನೀಡಲಾಗಿದ್ದು, ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ.

ಲೋಕಾಯುಕ್ತ ಬಲೆಗೆ ಮೂವರು ಅಧಿಕಾರಿಗಳು
ಮಂಗಳೂರಿನಲ್ಲಿ ತೆರಿಗೆ ತಪ್ಪಿಸುವ ವರ್ತಕರಿಂದ ಹಣ ವಸೂಲಿ ಮಾಡುತ್ತಿದ್ದ ಕಾನೂನು ಜಾರಿ ಕೋಶ ವಿಭಾಗದ ಜಂಟಿ ನಿರ್ದೇಶಕರ ಸಹಿತ ಮೂರು ಅಧಿಕಾರಿಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕಾನೂನು ಜಾರಿ ಕೋಶ ವಿಭಾಗದ ಜಂಟಿ ನಿರ್ದೇಶಕ ಸತೀಶ್ ಕುಮಾರ್, ಮಾರುಕಟ್ಟೆ ಮೇಲ್ವಿಚಾರಕ ಜಗದೀಶಯ್ಯ ಮತ್ತು ಮಾರುಕಟ್ಟೆ ಅಧಿಕಾರಿ ವೆಂಕಟೇಶಯ್ಯ ಅವರನ್ನು ಪೊಲೀಸರು ಬಂಧಿಸಿದ್ದು 1.62 ಲಕ್ಷ ನಗದನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ. ಪ್ರಾಥಮಿಕ ತನಿಖೆಯಿಂದ ಅಧಿಕಾರಿಗಳು ತೆರಿಗೆ ವಂಚಕರಿಗೆ ದಂಡ ವಿಧಿಸುವ ಬದಲು ಮಾಮೂಲಿ ವಸೂಲಿ ಮಾಡುತ್ತಿರುವುದು ಸಾಬೀತಾಗಿದೆ.

ಅಂಚೆಮತಗಳಲ್ಲಿ ಯಾವುದೇ ಲೋಪವಾಗಿಲ್ಲ
ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಂಚೆ ಮತಗಳ ಎಣಿಕೆಯಲ್ಲಿ ಯಾವುದೇ ಲೋಪವೂ ಆಗಿಲ್ಲ ಎಂದು ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಎಸ್.ಟಿ. ಅಂಜನ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಅಂಚೆ ಮತಗಳ ಎಣಿಕೆಯಲ್ಲಿ ಲೋಪ ನಡೆದಿದೆ ಎಂದು ಬಿಜೆಪಿ ನಾಯಕರು ಮೂರು ದಿನಗಳ ಹಿಂದೆ ರಾಜ್ಯ ಮುಖ್ಯಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಅವರಿಗೆ ದೂರು ನೀಡಿದ್ದಾರೆ. ಈ ಕುರಿತು ಆಯೋಗಕ್ಕೆ ವಿವರಣೆ ನೀಡಿದ್ದೇವೆ ಎಂದರು. ಹೊನ್ನಾಳಿಯಲ್ಲಿ 257 ಅಂಚೆ ಮತಪತ್ರದ ಬದಲಿಗೆ ಇವಿಎಂ ಬ್ಯಾಲೆಟ್ ಹಾಕಿದ್ದರಿಂದ ಒಂದಿಷ್ಟು ಗೊಂದಲ ಉಂಟಾಗಿದ್ದು, ಇವಿಎಂ ಬ್ಯಾಲೆಟ್ ಕಳಿಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಯೋಗಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು. [ಅಂಚೆಮತ ಎಣಿಕೆಯಲ್ಲಿ ತಪ್ಪಾಗಿದೆ]

ಕೋಟೆ ಅಭಿವೃದ್ಧಿಗೆ 2 ಕೋಟಿ ಹಣ
ಯಾದಗಿರಿ ನಗರದ ಐತಿಹಾಸಿಕ ಕೋಟೆ ಅಭಿವೃದ್ಧಿಗಾಗಿ ಮೀಸಲಿಟ್ಟ 2 ಕೋಟಿ ಹಣವನ್ನು ಕೋಟೆಯ ಜೀರ್ಣೋದ್ಧಾರಕ್ಕಾಗಿಯೇ ಬಳಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಹೇಳಿದ್ದಾರೆ. ಕೋಟೆ ಅಭಿವೃದ್ಧಿಗಾಗಿಮ ಮೀಸಲಿಟ್ಟ ಹಣ ದುರ್ಬಳಕೆ ಆಗುತ್ತಿದೆ ಎಂದು ಕೆಲವು ಸಂಘಟನೆಗಳು ದೂರಿವೆ ಇದರಲ್ಲಿ ಸತ್ಯಾಂಶವಿಲ್ಲ ಎಂದು ಅವರು ಹೇಳಿದರು. ನಗರದ ಐತಿಹಾಸಿಕ ಕೋಟೆ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಪ್ರವಾಸೋದ್ಯಮ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ 2010ರಂದು ಅಂದಿನ ಜಿಲ್ಲಾಧಿಕಾರಿ ಡಾ. ಕೆ.ಜಿ. ಜಗದೀಶ ಅವರು ಕೋರಿದ್ದರು. ಅದರಂತೆ ಅನುದಾನ ಬಿಡುಗಡೆಯಾಗಿದ್ದು, ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದೆ.

ಗುಲ್ಬರ್ಗ ಡಿಡಿಪಿಐ ಬಂಧನ
ಶಿಕ್ಷಕರ ನೇಮಕಾತಿಯಲ್ಲಿ ಅಕ್ರಮ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯಾದಗಿರಿಯ ಅಂದಿನ ಸಾರ್ವಜನಿಕ ಶಿಕ್ಷಣ ಇಲಾಖೆ ಡಿಡಿಪಿಐ ಆಗಿದ್ದ ಹಾಲಿ ಗುಲ್ಬರ್ಗದ ಡಿಡಿಪಿಐ ಬಿ.ಎಸ್.ಪರಮೇಶ್ವರ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಗುಲ್ಬರ್ಗಕ್ಕೆ ಆಗಮಿಸಿದ್ದ ಲೋಕಾಯುಕ್ತ ಪೊಲೀಸರು, ಸಾರ್ವಜನಿಕ ಶಿಕ್ಷಣ ಇಲಾಖೆ ಕಚೇರಿ ಬಳಿ ಡಿಡಿಪಿಐ ಅವರನ್ನು ವಶಕ್ಕೆ ಪಡೆದಿದ್ದಾರೆ. 2006-2010ರವರೆಗೂ ನಕಲಿ ದಾಖಲೆ ತಯಾರಿಸಿ ಮಾಜಿ ಸೈನಿಕರ ಕೋಟಾದಡಿ ಒಟ್ಟು 20 ಶಿಕ್ಷಕರು ನೇಮಕ ಗೊಂಡಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಲಾಗಿದೆ.












Click it and Unblock the Notifications