ತಮಿಳುನಾಡು ವಿರುದ್ಧ ಮತ್ತೆ ಕನ್ನಡಿಗರ ಕಾನೂನು ಸಮರ!
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಕಿಚ್ಚು ಜೋರಾಗಿದ್ದು ನಿನ್ನೆಯಷ್ಟೇ ಕರ್ನಾಟಕ ಬಂದ್ ಬಿಸಿ ಎದುರಿಸಿದ್ದಾರೆ ಕನ್ನಡಿಗರು. ಕರ್ನಾಟಕದಲ್ಲಿ ಬರ ಸ್ಥಿತಿ ಎದುರಾಗಿರುವ ಸಮಯದಲ್ಲಿ ತಮಿಳುನಾಡು ಕಾವೇರಿ ನೀರಿಗಾಗಿ ಕಿರಿಕ್ ಜಾಸ್ತಿ ಮಾಡ್ತಿದೆ. ಹೀಗಾಗಿ ಕರ್ನಾಟಕ ಸರ್ಕಾರ ಕೂಡ ದಿಟ್ಟ ಹೆಜ್ಜೆ ಇಟ್ಟಿದ್ದು, ತಮಿಳುನಾಡು ವಿರುದ್ಧ ಮತ್ತೆ ಕಾನೂನು ಸಮರ ಶುರು ಮಾಡಿದೆ.
ಈ ಬಗ್ಗೆ ಇಂದು ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ, ಕಾವೇರಿ ನೀರು ಬಿಡುವ ಆದೇಶ ಸಂಬಂಧ ಕಾವೇರಿ ನೀರು ನಿರ್ವಹಣೆ ಮಂಡಳಿ ಮುಂದೆ ಮರುಪರಿಶೀಲನೆ ಅರ್ಜಿಯನ್ನ ಇಂದು ಸಲ್ಲಿಸಲಾಗಿದೆ. ನಂತರ ಪರಿಸ್ಥಿತಿ ಅವಲೋಕಿಸಿ ಸರ್ವೋಚ್ಛ ನ್ಯಾಯಾಲಯದ ಮುಂದೆ ಕೂಡ ಮರುಪರಿಶೀಲನಾ ಅರ್ಜಿಯನ್ನ ಸಲ್ಲಿಸಲಾಗುವುದು ಎಂದಿದ್ದಾರೆ. ಇಂದು ಮಾಧ್ಯಮಗಳ ಜತೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು & ಅಡ್ವೊಕೇಟ್ ಜನರಲ್ ಅವರ ಜತೆಗೆ ಸಭೆ ನಡೆಸಿ ಸಲಹೆಗಳನ್ನು ಪಡೆಯಲಾಗಿದ್ದು, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಹೊಸ ಸಮಿತಿ ರಚನೆ ಆಗುತ್ತಾ?
ನಿನ್ನೆ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶರು & ಅಡ್ವೊಕೇಟ್ ಜನರಲ್ ಅವರ ಜತೆಗೆ ಸಭೆ ನಡೆಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಹಲವು ವಿಚಾರ ಪ್ರಸ್ತಾಪ ಮಾಡಿದ್ರು. ಈ ವೇಳೆ ಪರಿಣಿತರ ಸಲಹಾ ಸಮಿತಿ ರಚನೆಗೆ ಸಲಹೆ ನೀಡಲಾಗಿತ್ತು. ಈ ಮೂಲಕ ಮುಖ್ಯವಾಗಿ ರಾಜ್ಯ ನೀರಾವರಿಗೆ ಸಂಬಂಧಿಸಿದಂತೆ ಪರಿಣಿತರ ಸಲಹಾ ಸಮಿತಿಯು ಡಾಟಾ ಸಂಗ್ರಹ ಮಾಡಿ, ಸಲಹೆ ನೀಡುವ ಕಾರ್ಯ ಮಾಡಲಿ ಎಂದು ಸಲಹೆ ಕೇಳಿಬಂದಿತ್ತು. ಹೀಗಾಗಿ ಸಮಿತಿ ರಚನೆ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ರು. ಇಂದು ನೀರು ಬಿಡುವ ವಿಚಾರವಾಗಿ ಮರುಪರಿಶೀಲನೆ ಅರ್ಜಿ ಸಲ್ಲಿಕೆಯಾಗಿದ್ದು ಮತ್ತೆ ಸುಪ್ರೀಂ ಕೋರ್ಟ್ ಮೆಟ್ಟಿಲೇರುವ ಸೂಚನೆ ನೀಡಿದೆ ರಾಜ್ಯ ಸರ್ಕಾರ.
ಯಾರಿಗೂ ಅನ್ಯಾಯ ಆಗುವುದಿಲ್ಲ!
ಒಟ್ನಲ್ಲಿ ರಾಜ್ಯದಲ್ಲಿ ಕಾವೇರಿ ಕಾವು ಕಡಿಮೆ ಆಗುತ್ತಿದ್ದರೂ, ತಮಿಳುನಾಡು ಸರ್ಕಾರದಿಂದ ಕಿರಿಕ್ ಮುಂದುವರಿದಿದೆ. ಹೀಗಾಗಿ ರಾಜ್ಯ ಸರ್ಕಾರ ಕೂಡ ಕಾನೂನು ಹೋರಾಟಕ್ಕೆ ಹೆಜ್ಜೆ ಇಟ್ಟಿದೆ. ಇನ್ನು ಮತ್ತೊಂದ್ಕಡೆ ಲಿಂಗಾಯತ ಸಮುದಾಯದ ಅಧಿಕಾರಿಗಳಿಗೆ ಗೌರವ ಸಿಗುತ್ತಿಲ್ಲ ಎಂಬ ದೂರಿನ ಬಗ್ಗೆ ಉತ್ತರ ನೀಡಿರುವ ಸಿಎಂ ಸಿದ್ದರಾಮಯ್ಯ, ಲಿಂಗಾಯತ ಸಮುದಾಯಕ್ಕೆ ಸೇರಿದ ಏಳು ಸಚಿವರು ಸಚಿವ ಸಂಪುಟದಲ್ಲಿ ಇದ್ದಾರೆ. ಲಿಂಗಾಯತ ಸಮುದಾಯಕ್ಕೆ ಸೇರಿದ ಅಧಿಕಾರಿಗಳಿಗೆ ಅನ್ಯಾಯವಾಗಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಜಾತಿ ಮತ್ತು ಧರ್ಮದವರಿಗೂ ಅನ್ಯಾಯವಾಗುವುದಿಲ್ಲ ಎಂದು ಸಿಎಂ ತಿಳಿಸಿದರು.












Click it and Unblock the Notifications