Cauvery Dispute: ಕನ್ನಡಿಗರ ಪರವಾಗಿ ನಿಂತಿದ್ದ ಕನ್ನಡಿಗ ಅನಂತ್ ಕುಮಾರ್!
ಬೆಂಗಳೂರು: ರಾಜ್ಯದಲ್ಲಿ ಕಾವೇರಿ ಕಾವು ಜೋರಾಗಿರುವ ಸಮಯದಲ್ಲೇ ಡಿಸಿಎಂ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹೌದು, ಇಂದು ಬೆಂಗಳೂರಲ್ಲಿ ಇಂದು ಮಾತನಾಡಿದ ಡಿಸಿಎಂ, ಅನಂತ್ ಕುಮಾರ್ ಅವರು ಇದ್ದಿದ್ರೆ ಯಾವುದೇ ಕಾರಣಕ್ಕೂ ಕಾವೇರಿ ವಿವಾದ ಇಷ್ಟರಮಟ್ಟಿಗೆ ಹೋಗಲು ಬಿಡುತ್ತಿರಲಿಲ್ಲ. ಅವರು ಅಜಾತಶತ್ರು ಎಂದಿದ್ದಾರೆ ಡಿಸಿಎಂ ಡಿಕೆಶಿ.
ಬೆಂಗಳೂರಲ್ಲಿ ಇಂದು ನಡೆದ ಅನಂತ ನಮನ -64 ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದಾರೆ. ಅನಂತ್ ಕುಮಾರ್ ಕೇಂದ್ರ ಸಚಿವರಾಗಿದ್ದಾಗ ಕಾವೇರಿ ನೀರಿನ ಬಗ್ಗೆ ರಾತ್ರೋರಾತ್ರಿ ಅಫೀಡವಿಟ್ ಬದಲಾಯಿಸಿ ಕರ್ನಾಟಕದ ಪರವಾಗಿಯೇ ನಿಂತಿದ್ದರು. ರಾಜ್ಯದ ಹಿತಾಸಕ್ತಿಗೆ ಯಾವುದೇ ತೊಂದರೆ ತೆಗೆದುಕೊಳ್ಳಲು ಅವರು ಸದಾ ತಯಾರಿರುತ್ತಿದ್ದರು. 1985ರ ಸಮಯದಲ್ಲಿ ನನಗೆ ಮೊದಲ ಬಾರಿ ವಿಧಾನಸಭೆ ಟಿಕೆಟ್ ಸಿಕ್ಕಿದಾಗ ಅನಂತ್‌ಕುಮಾರ್ ಅವ್ರು ರಹಸ್ಯವಾಗಿ 5 ಸಾವಿರ ಹಣ ನೀಡಿದ್ದರು. ರಾಜ್ಯದ ಪರವಾಗಿ ನಿಲ್ಲುತ್ತಿದ್ದ ಅವರನ್ನು ಸರ್ವಪಕ್ಷ ಸಭೆಯಲ್ಲಿ ಎಲ್ಲರೂ ನೆನಪಿಸಿಕೊಂಡರು ಎಂದಿದ್ದಾರೆ ಡಿಸಿಎಂ.

ಸಹೋದರಿ ತೇಜಸ್ವಿನಿ ರಾಜಕೀಯದಲ್ಲಿ...
ಹಾಗೇ ಈ ವೇಳೆ ನನ್ನ ಸಹೋದರಿ ತೇಜಸ್ವಿನಿ ಧೈರ್ಯ ಮಾಡಿ ರಾಜಕೀಯದಲ್ಲಿ ಮುನ್ನುಗ್ಗಲಿ ಎಂದು ಡಿಕೆ ಶಿವಕುಮಾರ್ ಸಲಹೆ ನೀಡಿದರು. ಅನಂತ್ ಕುಮಾರ್ ಅವರ ಜೊತೆಗೆ ಸಂಸಾರ ಮಾಡಿ ನಿಮ್ಮದೇ ಆದ ರಾಜಕೀಯ ಜ್ಞಾನವಿದೆ, ನೀವು ರಾಜಕೀಯಕ್ಕೆ ಬರಬೇಕು. ಎಷ್ಟೋ ಹಸುಗಳು ಹುಟ್ಟುತ್ತವೆ, ಆದರೆ ಎಲ್ಲವೂ ಬಸವ ಆಗಲು ಸಾಧ್ಯವಿಲ್ಲ. ನೀವು ಇಲ್ಲೇ ಅಡುಗೆ ಮನೆಯಲ್ಲಿ ಅದಮ್ಯ ಚೇತನದ ಜೊತೆಯಲ್ಲೇ ಇರಬೇಕಾಗುತ್ತದೆ. ನಿಮ್ಮ ಹಿಂದೆ ದೊಡ್ಡ ಪಡೆ ಇದೆ, ಸಮಾಜವಿದೆ. ಮುನ್ನುಗ್ಗಿ, ನಿಮ್ಮನ್ನು ನಂಬಿಕೊಂಡಿರುವ ಹಿಂಬಾಲಕರನ್ನು ರಕ್ಷಣೆ ಮಾಡಿ ಎಂದರು.
ತೇಜಸ್ವಿನಿ ಅವರೇ ನೀವು ಮುನ್ನುಗ್ಗಬೇಕು. ಹೊಲವನ್ನ ಉಳುವೆ ಮಾಡದಿದ್ದರೆ ಮಟ್ಟ ಆಗಲ್ಲ, ಶಿಲೆ ಶಿಲ್ಪಿ ಕೈಗೆ ಸಿಗದಿದ್ದರೆ ಕಲೆ ಅರಳುವುದಿಲ್ಲ, ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಈ ಕಾರಣಕ್ಕೆ ನೀವು ರಾಜಕಾರಣದಲ್ಲಿ ಇರಬೇಕು ಎಂದು ಸಲಹೆ ನೀಡ್ತೀನೆ. ನಿಮ್ಮ ಇತಿಹಾಸವನ್ನ ಯಾರೂ ಬದಲಾವಣೆ ಮಾಡಲು, ಮುಚ್ಚಿಹಾಕಲು ಆಗುವುದಿಲ್ಲ. ಒಳ್ಳೆ ಕೆಲಸ ಮಾಡಿ ನಿಮ್ಮದೇ ಛಾಪು ಮೂಡಿಸಿಕೊಂಡಿದ್ದೀರಿ. ನಿಮ್ಮ ಜೊತೆ ರಾಜಕೀಯ ಭಿನ್ನಾಭಿಪ್ರಾಯ ಇರಬಹುದು. ಆದರೆ ನಿಮ್ಮ ಬಳಿ ಮೃದು ಹೃದಯವಿದೆ. ಅನಂತ್ ಕುಮಾರ್ ಅವರು ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ, ನೀವು ಹೆಜ್ಜೆ ಗುರುತು ಮೂಡಿಸಿ ಎಂದು ಸಲಹೆ ನೀಡಿದರು.
ಅನಂತ್ ಕುಮಾರ್ ಅವರಿಂದ ಮೆಟ್ರೋ...
ರಾಜ್ಯದಲ್ಲಿ ಮೆಟ್ರೋ ಬರಲು ಎಸ್.ಎಂ. ಕೃಷ್ಣ ಅವರು ಮತ್ತು ಅನಂತ್ ಕುಮಾರ್ ಅವರೇ ಕಾರಣ. ನಾನು ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವನಾಗಿದ್ದೆ. ಕೇಂದ್ರದಲ್ಲಿ ಅನಂತ್ ಕುಮಾರ್ ನಗರಾಭಿವೃದ್ಧಿ ಸಚಿವರಾಗಿದ್ದರು. ಹಿಂದಿನ ಜೆ.ಎಚ್.ಪಟೇಲ್ ಸರ್ಕಾರ ಮೋನೊ ರೈಲಿಗೆ ಒಪ್ಪಿಗೆ ನೀಡಿತ್ತು. ಹುಡ್ಕೋ ಸಂಸ್ಥೆಯಿಂದ ನನ್ನ ಹಾಗೂ ಇತರೇ ಸ್ನೇಹಿತರನ್ನ ವಿದೇಶಕ್ಕೆ ಮೆಟ್ರೊ ಬಗ್ಗೆ ಅಧ್ಯಯನ ಮಾಡಲು ಪ್ರವಾಸ ಕಳುಹಿಸಿದ್ರು. ಶ್ರೀಧರನ್ ಅವರು ಜೊತೆಯಲ್ಲಿ ಇದ್ದರು. ನಾವು ಮೆಟ್ರೋ ಇದ್ದರೆ ಅನುಕೂಲ ಎಂದು ಎಸ್.ಎಂ.ಕೃಷ್ಣ ಅವರಿಗೆ ವರದಿ ನೀಡಿದೆವು. ಅವರು ಅನಂತ್ ಕುಮಾರ್ ಅವರನ್ನು ಭೇಟಿಯಾಗಲು ಹೇಳಿದರು ಎಂದು ಹಳೆ ನೆನಪು ಮೆಲುಕು ಹಾಕಿದ್ದಾರೆ ಡಿಸಿಎಂ.
ಅವರ ವಿಚಾರದಲ್ಲಿ ದೇವರು ಕ್ರೂರಿಯಾದ
ಕೇವಲ ಒಂದೇ ದಿನದಲ್ಲಿ ಪ್ರಧಾನಿಗಳಾದ ವಾಜಪೇಯಿ ಅವರನ್ನು ಭೇಟಿ ಮಾಡಿಸಿ, ನಿಮ್ಮ ಸಮಿತಿಯ ವರದಿ ಸರಿಯಾಗಿದೆ ಎಂದು ಹೇಳಿ, ಕೇಂದ್ರದಿಂದ ಒಪ್ಪಿಗೆ ಕೊಡಿಸಿದರು. ಯಾರು ಏನೇ ಹೇಳಿದರೂ ಬೆಂಗಳೂರು ಮೆಟ್ರೋ ಅನಂತ ಕುಮಾರ್ ಅವರ ಹಾಗೂ ಕೃಷ್ಣ ಅವರ ಕೊಡುಗೆ. ನಾನು ದೇವರು, ಧರ್ಮದ ಬಗ್ಗೆ ನಂಬಿಕೆ ಇರುವವನು. ಬಿಟ್ಟು ಹೋಗುವುದಕ್ಕಿಂತ ಕೊಟ್ಟು ಹೋಗುವುದು ಲೇಸಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಬದುಕಿದವರು ಅನಂತ್‌ಕುಮಾರ್. ಆದರೆ ಅವರ ವಿಚಾರದಲ್ಲಿ ದೇವರು ಕ್ರೂರಿಯಾಗಿಬಿಟ್ಟ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
40 ವರ್ಷಗಳಲ್ಲಿ ನೂರಾರು ನಾಯಕರನ್ನು ತಯಾರು ಮಾಡಿ, ಅವರನ್ನು ಅನಾಥರನ್ನಾಗಿ ಮಾಡಿ ಹೋಗಿದ್ದಾರೆ. ಅವರು ಕೇವಲ ತೇಜಸ್ವಿನಿ ಅವರನ್ನ ಮಾತ್ರ ಬಿಟ್ಟು ಹೋಗಿಲ್ಲ. ನನಗೆ ವಿದ್ಯಾರ್ಥಿ ದೆಸೆಯಿಂದಲೂ ಅನಂತ್ ಕುಮಾರ್ ಅವರು ತುಂಬಾ ಆತ್ಮೀಯರು. ಅವರು ಎಬಿವಿಪಿ ನಾಯಕರಾಗಿದ್ದರು, ಆಗಾಗ್ಗೆ ಜನರಲ್ ಹಾಸ್ಟೆಲ್‌ಗೆ ಬಂದು ಕಾಲ ಕಳೆಯುತ್ತಿದ್ದರು. ಇದು ಭಾಗ್ಯ, ಇದು ಭಾಗ್ಯ, ಇದು ಭಾಗ್ಯವಯ್ಯ, ಪದುಮನಾಭನ ಪಾದ ಭಜನೆ ಪರಮ ಸುಖವಯ್ಯ, ಎಂಬ ಮಾತಿನಂತೆ ಇಂದು ನಾವೆಲ್ಲ ಅನಂತಪದುಮನಾಭ ಅವರನ್ನು ನೆನಪಿಸಿ ಕೊಂಡಿದ್ದೇವೆ. ಅವರ ಕನಸುಗಳನ್ನು ನನಸಾಗಿಸೋಣ ಎಂದು ಡಿಸಿಎಂ ಹೇಳಿದರು.












Click it and Unblock the Notifications