ಬಿಲ್ ಹರಿದು ಸದನಕ್ಕೆ ಅಗೌರವ: ಅಂದು ಕಾಂಗ್ರೆಸ್, ಇಂದು ಬಿಜೆಪಿ: ವ್ಯತ್ಯಾಸ ಇಷ್ಟೇ!

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದ ಇತಿಹಾಸದಲ್ಲೇ ಮರೆಯಲಾಗದ ಘಟನೆ ಇಂದು ನಡೆದಿದೆ. ಸರ್ಕಾರದ ಬಿಲ್‌ ಪ್ರತಿ ಹರಿದು ಹಾಕಿದ ಬಿಜೆಪಿಯ ಒಟ್ಟು 10 ಶಾಸಕರನ್ನು ಸ್ಪೀಕರ್ ಯು.ಟಿ.ಖಾದರ್ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಆದ್ರೆ ಈ ರೀತಿಯ ವರ್ತನೆ ತೋರಿದ್ದು ಬಿಜೆಪಿ ಶಾಸಕರು ಮಾತ್ರನಾ? ಇಲ್ಲ ಇಲ್ಲ ಕಾಂಗ್ರೆಸ್ ನಾಯಕರು ಕೂಡ ಅದರಲ್ಲೂ ಡಿಸಿಎಂ ಡಿಕೆ ಶಿವಕುಮಾರ್ ಹಿಂದೆ ಇದೇ ರೀತಿ ನಡೆದುಕೊಂಡಿದ್ದರು.

ಅಂದಹಾಗೆ ಅದು ಡಿಸೆಂಬರ್ 21, 2021. ಬೆಳಗಾವಿಯ ಸುವರ್ಣಸೌಧದಲ್ಲಿ ಆ ದಿನ ಅಧಿವೇಶನ ನಡೆಯುತ್ತಿತ್ತು. ವಿಪಕ್ಷಗಳ ತೀವ್ರ ವಿರೋಧ, ಆಕ್ರೋಶ ಭರಿತ ಮಾತುಗಳ ಮಧ್ಯೆ ಮತಾಂತರ ನಿಷೇಧಿಸುವ ಮಸೂದೆಯನ್ನು ಅಂದಿನ ಬಿಜೆಪಿ ಸರ್ಕಾರ ವಿಧಾನಸಭೆಯಲ್ಲಿ ಮಂಡಿಸಿತ್ತು. ಅದೇ ದಿನ ಭೋಜನ ವಿರಾಮದ ಬಳಿಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೆಚ್ಚುವರಿ ಕಾರ್ಯಸೂಚಿ ಅಡಿ ಮಸೂದೆ ಮಂಡಿಸುವುದಾಗಿ ಹೇಳಿ, ಧ್ವನಿಮತದ ಮೂಲಕ ಮಂಡನೆಗೆ ಅಂದು ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರಗೆ ಅವಕಾಶ ನೀಡಿದ್ದರು. ಆದರೆ ಆಗಲೇ ನೋಡಿ ಶುರುವಾಗಿದ್ದು ಕುರುಕ್ಷೇತ್ರ.

karnataka vidhan sabha

ಅಂದು ಕೂಡ ಹೀಗೆ ಬಿಲ್ ಹರಿದಿದ್ದರು!

ಅಷ್ಟಕ್ಕೂ 'ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ಮಸೂದೆ 2021'ನ್ನ ಅಂದಿನ ಗೃಹ ಸಚಿವ ಜ್ಞಾನೇಂದ್ರ ಮಂಡಿಸಿದರು. ಆಗ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನ ಪ್ರಮುಖ ನಾಯಕರು ಸದನದ ಒಳಗೆ ಇರಲಿಲ್ಲ. ಮಸೂದೆ ಮಂಡನೆ ಆಗುತ್ತಿರುವ ಮಾಹಿತಿ ಸಿಗುತ್ತಿದ್ದಂತೆ ಒಳಗೆ ದೌಡಾಯಿಸಿದ್ರು. ಅಷ್ಟೊತ್ತಿಗಾಗಲೇ ಮಸೂದೆ ಕೂಡ ಮಂಡನೆ ಆಗಿತ್ತು. ಘಟನೆಯಿಂದ ಸಿಟ್ಟಿಗೆದ್ದಿದ್ದ ಕಾಂಗ್ರೆಸ್‌ ಸದಸ್ಯರು ಸಭಾಧ್ಯಕ್ಷರು ಹಾಗೂ ಸರ್ಕಾರದ ವಿರುದ್ಧ ಹರಿಹಾಯ್ದಿದ್ದರು. ಮಸೂದೆ ಮಂಡನೆಗೇ ನಮ್ಮ ವಿರೋಧವಿದೆ. ಗಮನಕ್ಕೆ ತಾರದೇ ಹೇಗೆ ಮಂಡಿಸುತ್ತೀರಿ? ಇದು ಕರಾಳ ಮಸೂದೆ, ಸಂವಿಧಾನ ವಿರೋಧಿ. ವ್ಯಕ್ತಿ ಸ್ವಾತಂತ್ರ್ಯದ ಹರಣವಾಗಿದೆ ಎಂದು ಸಿದ್ದರಾಮಯ್ಯ ಗುಡುಗಿದ್ದರು. ಇಷ್ಟಕ್ಕೇ ಸುಮ್ಮನಾಗದೆ ಇನ್ನೊಂದು ಕೆಲಸ ಕೂಡ ನಡೆದೇ ಹೋಗಿತ್ತು.

ಪ್ರತಿ ಹರಿದಿದ್ದರು ಡಿಕೆ ಶಿವಕುಮಾರ್!

ಇಷ್ಟೆಲ್ಲಾ ಘಟನೆ ನಡೆಯುವಾಗಲೇ ಡಿ.ಕೆ.ಶಿವಕುಮಾರ್ ಅವರು ಸರ್ಕಾರ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಕದ್ದು ಮುಚ್ಚಿ ಮಸೂದೆ ಮಂಡಿಸಿದ್ದೀರಿ, ಇದು ಜನವಿರೋಧಿ ಮಸೂದೆ ಎಂದು ಕಾರ್ಯಸೂಚಿ ಪಟ್ಟಿ ಹರಿದು ಎಸೆದಿದ್ದರು. ಆ ಸಂದರ್ಭದಲ್ಲಿ ಅಂದಿನ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಘಟನೆಯನ್ನು ಕಟುವಾಗಿ ಟೀಕಿಸಿದ್ದರು. ಆದರೆ ಅಂದಿನ ಕಾಲಘಟ್ಟದಲ್ಲಿ ಯಾರನ್ನೂ ಅಮಾನತು ಮಾಡಿರಲಿಲ್ಲ. ಆದರೆ ಈಗ ನಡೆದಿರುವ ಘಟನೆ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದೆ. ಅಲ್ಲದೆ ಅಂದಿನ ಘಟನೆಗೂ ಮತ್ತು ಇಂದಿನ ಘಟನೆ ನಡುವೆ ಹೋಲಿಕೆ ಮಾಡಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಬಿಜೆಪಿ ನಾಯಕರು.

karnataka vidhan sabha

ಇಂದು ಅಧಿವೇಶನದಲ್ಲಿ ಆಗಿದ್ದೇನು?

ಡೆಪ್ಯೂಟಿ‌ ಸ್ಪೀಕರ್ ರುದ್ರಪ್ಪ ಲಮಾಣಿ‌ ಅವರ ಮೇಲೆ ವಿಧೇಯಕದ ಪ್ರತಿಯನ್ನು ಹರಿದು ಬಿಜೆಪಿ ಶಾಸಕರು ಎಸೆದಿದ್ದರು. ಹೀಗಾಗಿ ಸದನದಲ್ಲಿ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಸ್ವೀಕರ್‌ ಅಸಮಾಧಾನ ಹೊರಹಾಕಿದ್ರು. ಬಿಜೆಪಿ ಶಾಸಕರಾದ ಆರ್.ಅಶೋಕ್, ಡಾ. ಅಶ್ವಥ್‌ ನಾರಾಯಣ, ವಿ. ಸುನೀಲ್ ಕುಮಾರ್, ಅರವಿಂದ್ ಬೆಲ್ಲದ್, ವೇದವ್ಯಾಸ್ ಕಾಮತ್ ಮತ್ತು ಯಶಪಾಲ್ ಸುವರ್ಣ, ಧೀರಜ್ ಮುನಿರಾಜ್, ಆರಗ ಜ್ಞಾನೇಂದ್ರ, ಭರತ್ ವೈ ಶೆಟ್ಟಿ ಸೇರಿ ಉಮಾನಾಥ್ ಕೋಟ್ಯಾನ್ ಅವರನ್ನ ಅಮಾನತು ಮಾಡಿ ಸ್ಪೀಕರ್ ಆದೇಶ ಹೊರಡಿಸಿದ್ದಾರೆ. ಹೀಗಾಗಿ ಡಿಸೆಂಬರ್ 21, 2021ರ ಘಟನೆಯನ್ನ ಬಿಜೆಪಿ ನಾಯಕರು ಈಗ ಪ್ರಸ್ತಾಪಿಸಿದ್ದಾರೆ.

ಒಟ್ನಲ್ಲಿ ಈ ಬಾರಿಯ ವಿಧಾನಸಭೆ ಅಧಿವೇಶನ ಹಲವು ತಿಕ್ಕಾಟಗಳಿಂದ ಕೂಡಿದೆ. ಬಿಜೆಪಿ ವಿರೋಧ ಪಕ್ಷದ ನಾಯಕನೇ ಇಲ್ಲದೆ ಹೋರಾಡುವ ಸ್ಥಿತಿ ನಿರ್ಮಾಣ ಆಗಿದೆ. ಈ ನಡುವೆ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಹೋಗಿ ಬಿಜೆಪಿಯ ಒಟ್ಟು 10 ಶಾಸಕರನ್ನು ಅಮಾನತು ಮಾಡಲಾಗಿದೆ. ಮುಂದೆ ಕಿರಿಕ್ ಇನ್ನೆಲ್ಲಿಗೆ ಹೋಗಿ ಮುಟ್ಟಲಿದೆ ಅನ್ನೋದನ್ನ ಕಾದು ನೋಡಬೇಕಿದೆ. ನಾಳೆ ಇದೇ ವಿಚಾರ ಮಹಾಯುದ್ಧವಾಗಿ ಬದಲಾಗುವುದು ಕೂಡ ಬಹುತೇಕ ಪಕ್ಕಾ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+