ಮತದಾರರಿಗೆ ಡಿಜಿಟಲ್ ಪೇಮೆಂಟ್; ಪತ್ತೆ ಹಚ್ಚುವುದು ಸವಾಲು!
ಬೆಂಗಳೂರು, ಏಪ್ರಿಲ್ 23; ಕರ್ನಾಟಕ ವಿಧಾನಸಭೆ ಚುನಾವಣೆ 2023ರ ವೇಳಾಪಟ್ಟಿಯನ್ನು ಮಾರ್ಚ್ 29ರಂದು ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿದೆ. ಅಂದಿನಿಂದಲೇ ರಾಜ್ಯದಲ್ಲಿ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಮೇ 10ರಂದು ನಡೆಯುವ ಚುನಾವಣೆಗೆ ಮತದಾರರನ್ನು ಸೆಳೆಯಲು ಅಭ್ಯರ್ಥಿಗಳು ಕಸರತ್ತು ಆರಂಭಿಸಿದ್ದಾರೆ.
ಮುಕ್ತ ಮತ್ತು ನ್ಯಾಯ ಸಮ್ಮತವಾಗಿ ಚುನಾವಣೆ ನಡೆಸಲು ಚುನಾವಣಾ ಆಯೋಗ ಜನರ ಸಹಕಾರ ಕೇಳಿದೆ. ಚುನಾವಣಾ ವೆಚ್ಚದ ಮೇಲೆ ಕಣ್ಗಾವಲು ಇಡಲು ವೆಚ್ಚ ವೀಕ್ಷಕರು, ಸಾಮಾನ್ಯ ವೀಕ್ಷಕರು ಕಾರ್ಯ ನಿರ್ವಹಣೆ ಮಾಡುತ್ತಿದ್ದಾರೆ. ಆದರೆ ಅಭ್ಯರ್ಥಿಗಳ ಹೊಸ ಹೊಸ ತಂತ್ರಗಳು ಆಯೋಗಕ್ಕೆ ಪತ್ತೆ ಹಚ್ಚಲು ಸವಾಲಾಗಿದೆ.

ಇದು ಡಿಜಿಟಲ್ ಪೇಮೆಂಟ್ ಯುಗ. ಟೀ ಕುಡಿದರೆ, ತರಕಾರಿ ಖರೀದಿ ಮಾಡಿದರೆ ಜನರು ಡಿಜಿಟಲ್ ಪೇಮೆಂಟ್ ಮಾಡುತ್ತಾರೆ. ಅದರಲ್ಲೂ ಕೋವಿಡ್ ಪರಿಸ್ಥಿತಿ ಬಳಿಕ ಜನರು ಜೇಬಲ್ಲಿ ಹಣವಿಲ್ಲದಿದ್ದರೂ ಕೈಯಲ್ಲಿ ಮೊಬೈಲ್ ಇದ್ದರೆ ಸಾಕು ಎಂದು ಡಿಜಿಟಲ್ ಪೇಮೆಂಟ್ ಬಳಕೆ ಮಾಡುತ್ತಿದ್ದಾರೆ. ಈ ಬಾರಿಯ ಕರ್ನಾಟಕದ ಚುನಾವಣೆಯಲ್ಲಿ ಇದೇ ಪ್ರಯೋಗ ಆಗುತ್ತಿದೆ.
ಶೇ 15ರಷ್ಟು ಡಿಜಿಟಲ್ ಪೇಮೆಂಟ್; ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳ ಪ್ರಕಾರ ಶೇ 10 ರಿಂದ 15ರಷ್ಟು ಹಣ ಡಿಜಿಟಲ್ ಮೂಲಕ ಬಳಕೆಯಾಗುತ್ತಿದೆ. ಹಣ ಸಾಗಣೆ, ಸಿಕ್ಕಿಬೀಳುವುದು, ಕಮೀಷನ್ ಕೊಡುವುದು ಯಾವುದೇ ತಲೆನೋವು ಇಲ್ಲ. ಮತದಾರರ ಖಾತೆಗೆ ನೇರವಾಗಿ ಹಣ ಸಂದಾಯ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಚುನಾವಣೆ ದಿನಾಂಕ ಘೋಷಣೆಗೂ ಮೊದಲೇ ನಗದು ಹಣ ಎಲ್ಲಿಗೆ ಸೇರಬೇಕೋ ಅಲ್ಲಿಗೆ ಸೇರಿಸಿಯಾಗಿದೆ. ಹಣ ಹಂಚಿಕೆ ಮಾಡಲು ಕೆಲವು ಗ್ರಾಮಗಳಲ್ಲಿ ಜನರೇ ಸಹಕಾರ ನೀಡುತ್ತಾರೆ ಎಂದು ಆಯೋಗದ ಅಧಿಕಾರಿಗಳು ಅಸಹಕಾರ ವ್ಯಕ್ತಪಡಿಸಿದ್ದಾರೆ. ಉಳಿದಂತೆ ಪೇಟಿಎಂ, ಗೂಗಲ್ ಪೇ, ಫೋನ್ ಪೇ ಬಳಕೆಯನ್ನು ಮಾಡಿ ಹಣ ತಲುಪಿಸಲಾಗುತ್ತಿದೆ.
ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಅಂಗಡಿಗಳು, ಪೆಟ್ರೋಲ್ ಬಂಕ್, ಗುತ್ತಿಗೆದಾರರನ್ನು ಬುಕ್ ಮಾಡಿಕೊಂಡಿದ್ದಾರೆ. ಅವರ ಖಾತೆಯಿಂದ ಪ್ರತಿದಿನ 3 ರಿಂದ 5 ಲಕ್ಷದ ತನಕ ವಹಿವಾಟು ತೋರಿಸಲು ಅವಕಾಶವಿದೆ. ಜನರಿಗೆ ಹಂಚುವ ಹಣವನ್ನು ಪ್ರತಿದಿನದ ಲೆಕ್ಕ ಎಂದು ತೋರಿಸುವ ಮಾರ್ಗವನ್ನು ಕಂಡುಕೊಂಡಿದ್ದಾರೆ.
ಚುನಾವಣಾ ಕಾರ್ಯದಲ್ಲಿ ತೊಡಗಿರುವ ಹೆಸರು ಹೇಳಲು ಇಚ್ಚಿಸಿದ ಅಧಿಕಾರಿಯೊಬ್ಬರು ಹಿಂದೆ ಚುನಾವಣೆಗೆ ಎರಡು ದಿನಗಳು ಬಾಕಿ ಇರುವಾಗ ಹಣದ ಹಂಚಿಕೆ ನಡೆಯುತ್ತಿತ್ತು. ಆದರೆ ಈಗ ಹಣ ಹಂಚಿಕೆ ಪ್ರಕ್ರಿಯಿಯೇ ಬೇರೆಯಾಗಿದೆ. ಹಣ, ವೋಚರ್ ಹಂಚಿಕೆಗಳು ನಡೆಯುತ್ತಲೇ ಇವೆ. ಇವುಗಳನ್ನು ತಡೆಯಲು ಜನರ ಸಹಕಾರವೂ ಬೇಕಿದೆ ಎಂದರು.
ಡಿಜಿಟಲ್ ಪೇಮೆಂಟ್ ಮೂಲಕ ಹಣ ಹಂಚಿಕೆ ಪತ್ತೆ ಹಚ್ಚಲು ಆಧುನಿಕ ತಂತ್ರಜ್ಞಾನಗಳು ಅಗತ್ಯವಿದೆ. ಆದರೆ ಅಕ್ರಮವಾಗಿ ಹಣ ಸಾಗಣೆ, ಹಣ ಹಂಚಿಕೆ ಮಾಡುವುದನ್ನು ಜನರ ಸಹಕಾರದಿಂದ ಸುಲಭವಾಗಿ ಪತ್ತೆ ಹಚ್ಚಿ ಕ್ರಮಗಳನ್ನು ಕೈಗೊಳ್ಳಬಹುದಾಗಿದೆ ಎಂದು ಚುನಾವಣಾ ಕಾರ್ಯದಲ್ಲಿ ತೊಡಗಿರುವ ಅಧಿಕಾರಿಗಳು ಹೇಳಿದ್ದಾರೆ.
ರಾಜ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಮಾತನಾಡಿ, "ಡಿಜಿಟಲ್ ಪೇಮೆಂಟ್ ಪತ್ತೆ ಹಚ್ಚಬಹುದು. ಆದರೆ ಬ್ಯಾಂಕ್ ಪೇಮೆಂಟ್ ಕಂಪನಿಗಳು ಹೇಗೆ ಮಾಹಿತಿ ಹಂಚಿಕೆ ಮಾಡಿಕೊಳ್ಳುತ್ತವೆ ಎಂಬುದರ ಮೇಲೆ ಅದು ನಿರ್ಧರಿತವಾಗಿದೆ. ಪ್ರತಿ ಜಿಲ್ಲೆಗೆ ನಾವು ಒಬ್ಬರನ್ನು ನೇಮಕ ಮಾಡಿದ್ದೇವೆ. ಬ್ಯಾಂಕುಗಳಲ್ಲಿ ನಡೆಯುವ ವಿಶೇಷ ಹಣ ವರ್ಗಾವಣೆ ಕುರಿತು ಬ್ಯಾಂಕುಗಳು ಈ ಅಧಿಕಾರಿಗಳಿಗೆ ಮಾಹಿತಿ ನೀಡಲಿದ್ದಾರೆ" ಎಂದರು.
ರಾಜಕೀಯ ಪಕ್ಷಗಳು ಚುನಾವಣೆಗಾಗಿಯೇ ಹಣವನ್ನು ಸಂಗ್ರಹ ಮಾಡಿರುತ್ತವೆ. ಇಂತಹ ಪಕ್ಷವೆಂದು ಅಲ್ಲ ಎಲ್ಲಾ ಪಕ್ಷಗಳಿಗೂ ಜನರಿಗೆ ಹಣ ತಲುಪಿಸುವುದು ತಿಳಿದಿದೆ. ಕೆಲವು ಬಾರಿ ಅವರು ಕಣ್ಣಿಗೆ ಕಾಣುತ್ತವೆ. ಆದರೆ ಡಿಜಿಟಲ್ ಪೇಮೆಂಟ್ ಕಾರಣಕ್ಕೆ ಇದನ್ನು ಹಚ್ಚಲು ಸಾಧ್ಯವಾಗುತ್ತಿಲ್ಲ ಎಂದು ರಾಜಕೀಯ ತಜ್ಞರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.












Click it and Unblock the Notifications