ಕಿಚ್ಚ ಸುದೀಪ್ ಭೇಟಿ ಗುಟ್ಟು ಬಿಟ್ಟುಕೊಟ್ಟ ಡಿ ಕೆ ಶಿವಕುಮಾರ್
ಬೆಂಗಳೂರು, ಫೆಬ್ರವರಿ 06: ನಟ ಕಿಚ್ಚ ಸುದೀಪ್ ಅವರು ದಿಢೀರ್ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನ ಭೇಟಿಯಾಗಿದ್ದು, ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ನಟ ಸುದೀಪ್ ಅವರು ಕಾಂಗ್ರೆಸ್ ಸೇರ್ಪಡೆಯಾಗುತ್ತಾರಾ ಎನ್ನುವ ಪ್ರಶ್ನೆ ಉದ್ಭವಿಸಿದ್ದು, ಈ ಎಲ್ಲಾ ಪ್ರಶ್ನೆಗಳಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಗುರುವಾರ ಸದಾಶಿವನಗರದ ನಿವಾಸದ ಬಳಿ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ ಕೆ ಶಿವಕುಮಾರ್ ಅವರು, ನಟ ಸುದೀಪ್ ಅವರದ್ದು ಸೌಜನ್ಯಯುತ ಭೇಟಿ. ಚಿತ್ರೀಕರಣಕ್ಕೆ ತೊಂದರೆಯಾದ ಕಾರಣಕ್ಕೆ ಬಂದಿದ್ದರು. ಸಂಬಂಧಪಟ್ಟವರಿಗೆ ತಿಳಿಸುತ್ತೇನೆ ಎಂದು ಹೇಳಿದ್ದೇನೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ. ಅವರು ಒಬ್ಬ ಗೆಳೆಯರಾಗಿ ಬಂದು ಭೇಟಿಯಾಗಿದ್ದಾರೆ ಎಂದು ತಿಳಿಸಿದ್ದಾರೆ.

ಮೇಕೆದಾಟು ಅಣೆಕಟ್ಟಿಗೆ ಅನುಮತಿಯನ್ನು ಒಂದೇ ದಿನದಲ್ಲಿ ಕೊಡಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದ್ದರಲ್ಲ, ಮೊದಲು ಈ ಕೆಲಸವನ್ನು ಮಾಡಲಿ, ಆಮೇಲೆ ಮಾತಾಡಲಿ. ಅವರು ಅಧಿಕಾರದಲ್ಲಿ ಇದ್ದಾಗ ಎರಡನೇ ವಿಮಾನ ನಿಲ್ದಾಣ ಮಾಡಲು ಯಾವುದೇ ಹೆಜ್ಜೆಯಿಡಲಿಲ್ಲ. ನಾವು ಈಗ ಹೆಜ್ಜೆ ಇಟ್ಟಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ತಿರುಗೇಟು ನೀಡಿದರು.
ಕೈಗಾರಿಕಾ ಸಚಿವರಾದ ಎಂ.ಬಿ.ಪಾಟೀಲ್ ಅವರ ನೇತೃತ್ವದಲ್ಲಿ ಸ್ಳಳ ಪರಿಶೀಲನೆ ನಡೆಯುತ್ತಿದೆ. ಅವರು ಮುಖ್ಯಮಂತ್ರಿಗಳು ಹಾಗೂ ನನ್ನ ಬಳಿ ಮಾತನಾಡಿ ಆನಂತರ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಪ್ರಾಧಿಕಾರದ ಅನುಮತಿ ಪಡೆದು ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಹೇಳಿದರು.
ನಮ್ಮ ಊರಿನಲ್ಲಿ ವಿಮಾನ ನಿಲ್ದಾಣ ಬರಬೇಕು ಎನ್ನುವ ಆಸೆ ನನಗಿದೆ. ಆದರೆ ಆ ರೀತಿ ಮಾಡಲು ಆಗುವುದಿಲ್ಲ. ವಿಮಾನ ನಿಲ್ದಾನ ನಿರ್ಮಾಣ ಆಗಬೇಕು ಎಂದರೆ ಸಾಕಷ್ಟು ರೀತಿ, ರಿವಾಜುಗಳಿವೆ. ಗುಡ್ಡಗಳು ಇರಬಾರದು, ಫ್ಲೈಯಿಂಗ್ ಜೋನ್ ಇರಬೇಕು ಹೀಗೆ ಸಾಕಷ್ಟು ನಿಯಮಗಳಿವೆ. ಅಲ್ಲದೇ ಒಟ್ಟು 4,400 ಎಕರೆ ಭೂಮಿ ಬೇಕು ಎಂದು ಅಂದಾಜಿಸಲಾಗಿದೆ ಎಂದು ತಿಳಿಸಿದರು. ಕೆಂಪೇಗೌಡ ವಿಮಾನ ನಿಲ್ದಾಣ ಮಾಡುವಾಗ ನಾನೇ ನಗರಾಭಿವೃದ್ದಿ ಸಚಿವನಾಗಿದ್ದೆ. ವಿಮಾನ ನಿಲ್ದಾಣ ಮಾಡಬೇಕು ಎಂದರೆ ಒಂದಷ್ಟು ತಾಂತ್ರಿಕ ವಿಚಾರಗಳು ಇರುತ್ತವೆ. ಅದರ ಆಧಾರದ ಮೇಲೆ ತೀರ್ಮಾನ ಮಾಡಲಾಗುವುದು ಎಂದು ಹೇಳಿದರು.
ವಿಮಾಣ ನಿಲ್ದಾಣಕ್ಕೆ ಒತ್ತಡವನ್ನು ಕುಮಾರಸ್ವಾಮಿ ಅವರೇ ತರುತ್ತಿದ್ದಾರೆ ಎಂದು ಕೇಳಿದಾಗ, "ಅವರ ಜಮೀನಿನ ಪಕ್ಕದವರು ಒತ್ತಾಯ ತರುತ್ತಾರೆ. ನಾನೂ ನನ್ನ ಜಮೀನು ಪಕ್ಕದಲ್ಲಿ ಇದ್ದವರಿಂದ ಮಾಡಿಕೊಳ್ಳುತ್ತೇನೆ" ಎಂದು ಮಾರ್ಮಿಕವಾಗಿ ನುಡಿದರು.
ದೆಹಲಿ ಚುನಾವಣೆಯ ಎಕ್ಸಿಟ್ ಪೋಲ್ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನನಗೆ ಯಾವ ಎಕ್ಸಿಟ್ ಪೋಲ್ ಬಗ್ಗೆಯೂ ನಂಬಿಕೆಯಿಲ್ಲ. ಮತದಾರನ ತೀರ್ಮಾನವನ್ನು ಕಾಯೋಣ ಎಂದ ಅವರು, ಮೈಕ್ರೋ ಫೈನಾನ್ಸ್ ಗಳ ಅಂಕುಶಕ್ಕೆ ಸುಗ್ರೀವಾಜ್ಞೆ ನೀಡುವ ಬಗ್ಗೆ ಕೇಳಿದಾಗ, "ರಾಜ್ಯಪಾಲರ ಅಂಕಿತಕ್ಕೆ ಮುಖ್ಯಮಂತ್ರಿಗಳು ಕಳುಹಿಸುತ್ತಿದ್ದಾರೆ. ನಂತರ ಜಾರಿಗೆ ತರಲಾಗುವುದು ಎಂದು ತಿಳಿಸಿದರು. ಇನ್ನೂ ಬಿಟ್ ಕಾಯಿನ್ ವಿಚಾರವಾಗಿ ನಲಪಾಡ್ ಗೆ ಎಸ್ ಐಟಿ ನೋಟಿಸ್ ನೀಡಿರುವ ಬಗ್ಗೆ ಕೇಳಿದಾಗ, "ಇದರ ಬಗ್ಗೆ ನನಗೆ ಗೊತ್ತಿಲ್ಲ. ತನಿಖೆ ಏನಿದೆ ಅದರಂತೆ ನಡೆಯುತ್ತಿದೆ ಎಂದು ಹೇಳಿದರು.












Click it and Unblock the Notifications