ಕೋವಿಡ್ ಹಗರಣ ವರದಿ ಬರೀ ಟ್ರೈಲರ್: ಬಿಜೆಪಿಗೆ ಮುಂದಿದೆ ಮಾರಿ ಹಬ್ಬ, ಹೇಳಿದ್ಯಾರು ?
ಕರ್ನಾಟಕದಲ್ಲಿ ಕೋವಿಡ್ ಹಗರಣ ವರದಿ ಬರೀ ಟ್ರೈಲರ್ ಅಷ್ಟೇ. ಮುಂದಿನ ದಿನಗಳಲ್ಲಿ ರಾಜ್ಯ ಬಿಜೆಪಿಗೆ ಮಾರಿ ಹಬ್ಬ ಕಾದಿದೆ ಎಂದು ರಾಜ್ಯ ಕಾಂಗ್ರೆಸ್‌ನ ಪ್ರಮುಖ ಸಚಿವರೊಬ್ಬರು ಎಚ್ಚರಿಕೆ ನೀಡಿದ್ದಾರೆ. ಮುಂದುವರಿದು ಒತ್ತಡ ಹಾಕಿ ಕೋವಿಡ್ ಹಗರಣದ ವರದಿ ತರಿಸಿಕೊಂಡರೆ ತಪ್ಪೇನಿದೆ ಎಂದೂ ಅವರು ಪ್ರಶ್ನೆ ಮಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಕೋವಿಡ್ ಹಗರಣದ ವರದಿಗೆ ಒತ್ತಡ ಹಾಕಲಾಗಿತ್ತೇ ಎನ್ನುವ ಪ್ರಶ್ನೆಗೆ ಪುಷ್ಠಿ ನೀಡಿದ್ದಾರೆ.
ಮುಡಾ ಹಗರಣದ ಕಾವನ್ನು ಕಡಿಮೆ ಮಾಡಲು ರಾಜ್ಯ ಕಾಂಗ್ರೆಸ್ ಕೋವಿಡ್ ಹಗರಣದ ವರದಿಯನ್ನು ಮುನ್ನೆಲೆಗೆ ತಂದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಇದರ ಬೆನ್ನಲ್ಲೇ ಆ ರೀತಿ ಒತ್ತಡ ಹಾಕಿ ತೆಗೆದುಕೊಂಡರೆ ತಪ್ಪೇನಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಕೇಳಿದ್ದಾರೆ. ಅಲ್ಲದೇ ಇದು ಕೇವಲ ಟ್ರೈಲರ್ ಅಷ್ಟೇ ಕಣ್ರೀ ನಾವು ಬಿಜೆಪಿಯ ಅವಧಿಯಲ್ಲಿ ಆಗಿರುವ ಎಲ್ಲಾ 21 ಹಗರಣಗಳ ಬಗ್ಗೆಯೂ ತನಿಖೆ ನಡೆಸ್ತೀವಿ. ಬಿಜೆಪಿ ಅವರಿಗೆ ಮುಂದಿನ ದಿನಗಳಲ್ಲಿ ಇದೆ ಮಾರಿ ಹಬ್ಬ ಎಂದು ಎಚ್ಚರಿಕೆಯನ್ನು ಸಹ ನೀಡಿದ್ದಾರೆ.

ವಿಡಿಯೋ ಇದೆ ಅಂದ ಕೂಡಲೇ ಸ್ಟೇ ಯಾಕೆ
ಯಾರೋ ವಿಡಿಯೋ ಇದೆ ಎಂದ ಕೂಡಲೇ ತಡೆಯಾಜ್ಞೆ ತರುತ್ತಾರೆ. ಕುಂಬಳ ಕಾಯಿ ಕಳ್ಳ ಎಂದ್ರೆ ಹೆಗಲು ಮುಟ್ಟಿ ನೋಡಿಕೊಂಡ್ರಂತೆ ಆ ರೀತಿ ಮಾಡ್ತಾರೆ ಎಂದು ಪ್ರಿಯಾಂಕ ಖರ್ಗೆ ವಾಗ್ದಾಳಿ ನಡೆಸಿದ್ದಾರೆ. ವರದಿ ಈಗಷ್ಟೇ ಬಂದಿದೆ. ಅದರಲ್ಲಿ ಏನಿದೆ ಅಂತ ಇನ್ನೂ ಗೊತ್ತಿಲ್ಲ. ಆಗಲೇ ಇವರು ಕಾನೂನು ಹೋರಾಟ ಮಾಡ್ತೀನಿ ಅಂತ ಹೇಳ್ತಿದ್ದಾರೆ. ವರದಿ ಬಂದ ಕೂಡಲೇ ಈ ತರ ಹೇಳ್ತಾರೆ ಅಂದ್ರೆ ಏನ್ ಕಾರಣ ಎಂದಿದ್ದಾರೆ.
21 ಹಗರಣಗಳನ್ನೂ ತನಿಖೆ ಮಾಡಿಸ್ತೀವಿ
ಕೋವಿಡ್ ಸಮಯದಲ್ಲಿ (ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ) ನಡೆದಿರುವ ಹಗರಣದ ತನಿಖೆಯ ಮಧ್ಯಂತರ ವರದಿ ಬಂದಿದೆ. ಅದು ಸಚಿವ ಸಂಪುಟ ಸಭೆಯಲ್ಲಿ ಮಂಡನೆಯಾದ ನಂತರ ಮುಂದಿನ ಚರ್ಚೆ ನಡೆಯಲಿದೆ. ಕೋವಿಡ್ ಹಗರಣದ ಮಧ್ಯಂತರ ವರದಿಯು ಕೇವಲ ಟ್ರೈಲರ್ ಅಷ್ಟೇ ಕಣ್ರೀ ಮುಂದಿನ ದಿನಗಳಲ್ಲಿ ಬಿಜೆಪಿಯ ಅವಧಿಯಲ್ಲಿ ನಡೆದಿರುವ ಎಲ್ಲಾ 21 ಹಗರಣಗಳ ತನಿಖೆಯನ್ನು ಮಾಡ್ತೀವಿ. ಆ ಎಲ್ಲಾ ಹಗರಣಗಳನ್ನೂ ನಾವು ಕಂಪ್ಲೀಟ್ ಮಾಡ್ತೀವಿ ಎಂದು ಪ್ರಿಯಾಂಕ್ ಖರ್ಗೆ ಅವರು ವಾರ್ನ್ ಮಾಡಿದ್ದಾರೆ.

ಮಧ್ಯಂತರ ವರದಿಗೆ ಬಿಜೆಪಿ ಗಢಗಢ
ಬಿಜೆಪಿ ಅವಧಿಯಲ್ಲಿ ನಡೆದಿದೆ ಎಂದು ಹೇಳಲಾಗಿರುವ ಕೋವಿಡ್ ಸಮಯದ ಕೋವಿಡ್ ಹಗರಣ. ಈ ಹಗರಣಕ್ಕೆ ಸಂಬಂಧಿಸಿದಂತೆ ಮಧ್ಯಂತರ ವರದಿಯನ್ನು ನ್ಯಾಯಮೂರ್ತಿಗಳಾದ ಡಿ. ಕುನ್ಹಾ ಆಯೋಗವನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ರಚಿಸಿತ್ತು. ಈ ಆಯೋಗವು ಈಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವರದಿ ನೀಡಿದೆ. ಮಧ್ಯಂತರ ವರದಿ ನೀಡಿದ ಬೆನ್ನಲ್ಲೇ ಬಿಜೆಪಿಯ ನಾಯಕರು ಗಢಗಢ ನಡಗುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅಂದಿನ ಆರೋಗ್ಯ ಸಚಿವ ಹಾಗೂ ಚಿಕ್ಕಬಳ್ಳಾಪುರದ ಸಂಸದ ಡಾ. ಸುಧಾಕರ್ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ಡಾ. ಸುಧಾಕರ್ ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಒತ್ತಡ ಹಾಕಿ ಕೋವಿಡ್ ವರದಿಯನ್ನು ತರಿಸಿಕೊಂಡಿದ್ದಾರೆ. ಕಾಂಗ್ರೆಸ್ ಆಯೋಗದ ಮೇಲೆ ಒತ್ತಡ ಹಾಕಿದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಅವರು ನಾವು ಆಯೋಗದವರ ಮೇಲೆ ಒತ್ತಡ ಹಾಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ಒತ್ತಡ ಹಾಕಿಲ್ಲ. ಅದರ ಅವಶ್ಯಕತೆಯೂ ಇಲ್ಲ. ಒಂದೊಮ್ಮೆ ಒತ್ತಡ ಹಾಕಿದ್ರೂ ತಪ್ಪೇನಿದೆ. ಹಗರಣದ ತನಿಖೆ ಮಾಡುವ ಉದ್ದೇಶದಿಂದಲೇ ಆಯೋಗವನ್ನು ನಮ್ಮ ಸರ್ಕಾರ ರಚಿಸಿದೆ. ಬಿಜೆಪಿ ಅವರು ಎಲ್ಲದಕ್ಕೂ ಹೆಗಲು ಮುಟ್ಟಿ ನೋಡಿಕೊಳ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.












Click it and Unblock the Notifications