ಕರಸೇವಕ ಶ್ರೀಕಾಂತ್ ಪೂಜಾರಿಗೆ ಜಾಮೀನು ನೀಡಿದ ನ್ಯಾಯಾಲಯ
ಹುಬ್ಬಳ್ಳಿ, ಜನವರಿ 05: ಶ್ರೀರಾಮ ಜನ್ಮಭೂಮಿ ಗಲಭೆ ಸಂಬಂಧ ನ್ಯಾಂಯಾಂಗ ಬಂಧನದಲ್ಲಿದ್ದ ಕರಸೇವಕ ಶ್ರೀಕಾಂತ ಪೂಜಾರಿಗೆ ಹುಬ್ಬಳ್ಳಿಯ 1ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಶುಕ್ರವಾರ ಶರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಕಳೆದ ಡಿಸೆಂಬರ್ 29ರಂದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿತ್ತು. ಬಳಿಕ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿತ್ತು. ಇದೀಗ ರಾಮಮಂದಿರ ಕರ ಸೇವಕ ಶ್ರೀಕಾಂತ್ ಪೂಜಾರಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಶ್ರೀಕಾಂತ್ ಪೂಜಾರಿ ಬಂಧನ ಖಂಡಿಸಿ ರಾಜ್ಯ ಬಿಜೆಪಿ ಎಲ್ಲ ಜಿಲ್ಲೆಗಳಲ್ಲೂ ಪ್ರತಿಭಟನೆ ಹಮ್ಮಿಕೊಂಡಿತ್ತು. ಅಲ್ಲದೆ ನಾನೂ ಕರಸೇವಕ ನನ್ನನ್ನೂ ಬಂಧಿಸಿ ಎಂದು ಅಭಿಯಾನ ಆರಂಭಿಸಿತ್ತು.

ಜನವರಿ 5 ಗಂಟೆಯ ಸಂಜೆಯಾದರೂ ಜಾಮೀನು ಅರ್ಜಿ ಶ್ರೀಕಾಂತ್ ಪರ ವಕೀಲರ ಕೈ ಸೇರಿರಲಿಲ್ಲ. ಈ ಹಿನ್ನೆಲೆಯಲ್ಲಿ, ಅವರ ಕಾನೂನುಬದ್ಧ ಬಿಡುಗಡೆ ಪ್ರಕ್ರಿಯೆಯು ಜನವರಿ 6ರಂದು ನಡೆಯಲಿದೆ ಎಂದು ಶ್ರೀಕಾಂತ್ ಪರ ವಕೀಲರು ತಿಳಿಸಿದ್ದಾರೆ.
ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣದ ವಿಚಾರವಾಗಿ 1992ರ ಗಲಭೆ ಪ್ರಕರಣದಲ್ಲಿ ಎ3 ಆರೋಪಿ ಶ್ರೀಕಾಂತ ಪೂಜಾರಿ ಅವರು ಡಿ.29ರಂದು ಶಹರ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿ ಶ್ರೀಕಾಂತ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಶ್ರೀಕಾಂತ್ ಪೂಜಾರಿ ಮೇಲಿತ್ತು ರೌಡಿ ಶೀಟ್. ಹುಬ್ಬಳ್ಳಿಯ ಎರಡು ಪೊಲೀಸ್ ಠಾಣೆಯಲ್ಲಿ ರೌಡಿ ಶೀಟ್ ಓಪನ್ ಮಾಡಲಾಗಿತ್ತು. ಶ್ರೀಕಾಂತ್ ಹಾಗೂ ಇದೇ ಪ್ರಕರಣದ ಇನ್ನೋರ್ವ ಆರೋಪಿ ರಾಜು ಧರ್ಮದಾಸ ಮೇಲೆ ರೌಡಿ ಶೀಟ್ ಓಪನ್ ಮಾಡಲಾಗಿತ್ತು.
ಹುಬ್ಬಳ್ಳಿ ಘಟನೆ ನಡೆದ 31 ವರ್ಷಗಳ ಬಳಿಕ, 52 ವರ್ಷದ ಆರೋಪಿ ಶ್ರೀಕಾಂತ್ ಪೂಜಾರಿಯನ್ನು ಪೊಲೀಸರು ಬಂಧಿಸಿ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ 2008, ಜುಲೈ 17ರಂದು ರೌಡಿ ಶೀಟರ್ ಓಪನ್ ಆಗಿದ್ದು, ಬಳಿಕ 2023ರ ಜೂನ್ 16ರಂದು ರೌಡಿ ಶೀಟರ್ ಕ್ಲೋಸ್ ಮಾಡಲಾಗಿತ್ತು.
ಕಸಬಾಪೇಟೆ ಪೊಲೀಸ್ ಠಾಣೆಯಲ್ಲಿ 02.10.13 ರಂದು ರೌಡಿ ಶೀಟರ್ ಒಪನ್ ಮಾಡಲಾಗಿತ್ತು. 09.06.23 ರಂದು ರೌಡಿ ಶೀಟರ್ ಕ್ಲೋಸ್ ಮಾಡಲಾಗಿತ್ತು. ಇನ್ನು ಇದೇ ಪ್ರಕರಣದ ಆರೋಪಿ 2 ರಾಜು ಧರ್ಮದಾಸ್ ವಿರುದ್ದವೂ ರೌಡಿ ಶೀಟರ್ ತೆರೆಯಲಾಗಿತ್ತು. ಹುಬ್ಬಳ್ಳಿ ಶಹರ ಠಾಣೆಯಲ್ಲಿ 01.09.89 ರಂದು ರೌಡಿ ಶೀಟರ್ ತೆರೆಯಲಾಗಿತ್ತು. 12.07.23 ರಂದು ರೌಡಿ ಶೀಟರ್ ಕ್ಲೋಸ್ ಮಾಡಲಾಗಿದೆ.












Click it and Unblock the Notifications