ರಾಜ್ಯದಲ್ಲಿ ಕಾಂಗ್ರೆಸ್ 9 ಕ್ಷೇತ್ರದಲ್ಲಿ ಗೆಲುವು: ಡಿ ಕೆ ಶಿವಕುಮಾರ್ ಹೇಳಿದ್ದೇನು?
ಬೆಂಗಳೂರು, ಜೂನ್ 04: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಭಾವನೆಗಿಂತ ಬದುಕು ಗೆದ್ದಿದೆ. ಉತ್ತರ ಭಾರತದ ರಾಜ್ಯಗಳಲ್ಲೂ ಮೋದಿ ಹಾಗೂ ರಾಮಮಂದಿರದ ಅಲೆ ಇಲ್ಲವಾಗಿದೆ ಎಂಬುದನ್ನು ಚುನಾವಣೆ ಫಲಿತಾಂಶ ಸಾಬೀತುಪಡಿಸಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಲೋಕಸಭೆ ಚುನಾವಣೆ ಫಲಿತಾಂಶ ಕುರಿತಂತೆ ಸದಾಶಿವನಗರ ನಿವಾಸದಲ್ಲಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ರಾಜ್ಯ ಹಾಗೂ ದೇಶದಲ್ಲಿ ಜನರ ತೀರ್ಪನ್ನು ಗೌರವಿಸುತ್ತೇನೆ. ಅಧಿಕಾರ ರಾಜಕೀಯಕ್ಕಿಂತ ವಿಶ್ವಾಸ ರಾಜಕೀಯ ಗೆದ್ದಂತಾಗಿದೆ. ದೇಶದಲ್ಲಿ ಭಾವನೆ ಸೋತಿದ್ದು, ಬದುಕು ಗೆದ್ದಿದೆ. ಬಿಜೆಪಿಯವರು 400 ಸೀಟುಗಳನ್ನು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದರು. ಅದು ಸಾಧ್ಯವಾಗಿಲ್ಲ. ಅಯೋದ್ಯೆಯಲ್ಲೇ ಬಿಜೆಪಿ ಸೋತಿದೆ.

ರಾಜ್ಯದಲ್ಲಿ ನಾವು 1 ಸ್ಥಾನದಿಂದ 9 ಸ್ಥಾನಗಳಿಗೆ ಏರಿಕೆ ಕಂಡಿದ್ದೇವೆ. ನಾವು 14 ಸ್ಥಾನಗಳ ನಿರೀಕ್ಷೆಯಲ್ಲಿದ್ದೆವು. ನನ್ನ ಕ್ಷೇತ್ರದಲ್ಲಿ ಡಾ. ಮಂಜುನಾಥ್ ಅವರ ಗೆಲುವಿಗೆ ವೈಯಕ್ತಿಕವಾಗಿ ಅವರಿಗೆ ಅಭಿನಂದಿಸುತ್ತೇನೆ. ಅವರ ಪಕ್ಷ ಗೆಲ್ಲುವುದಕ್ಕಿಂತ ಇಲ್ಲಿ ವ್ಯಕ್ತಿ ಗೆದ್ದಿದ್ದಾರೆ.
ಬಹಳ ಲೆಕ್ಕಾಚಾರದಲ್ಲಿ ಅವರನ್ನು ಬಿಜೆಪಿಯಿಂದ ಸ್ಪರ್ಧಿಸುವಂತೆ ಮಾಡಿದ್ದರು. ಇಷ್ಟು ದೊಡ್ಡ ಅಂತರದ ಸೋಲಿನ ನಿರೀಕ್ಷೆ ಮಾಡಿರಲಿಲ್ಲ. ನನ್ನ ತಮ್ಮ ಉತ್ತಮ ಕೆಲಸ ಮಾಡಿದ್ದು, ಆಡಳಿತ ವಿರೋಧಿ ಅಲೆ ಇರಲಿಲ್ಲ. ಆದರೆ ಮಂಜುನಾಥ್ ಅವರಿಗೆ ಅವಕಾಶ ನೀಡಬೇಕು ಎಂದು ಜನ ಅವರನ್ನು ಗೆಲ್ಲಿಸಿದ್ದಾರೆ.
ನನ್ನ ಕ್ಷೇತ್ರದಲ್ಲಿ 60 ಸಾವಿರ ಮತಗಳ ಮುನ್ನಡೆ ಪಡೆಯುವ ನಿರೀಕ್ಷೆ ಇತ್ತು. ಆದರೆ ಇಷ್ಟೊಂದು ಅಂತರದ ಸೋಲುವ ನಿರೀಕ್ಷೆ ಮಾಡಿರಲಿಲ್ಲ. ಈ ಫಲಿತಾಂಶದ ಮೂಲಕ ಜನ ಕೊಟ್ಟಿರುವ ಸಂದೇಶ ಅರಿಯುತ್ತೇನೆ. ಪ್ರಜ್ಞಾವಂತ ಮತದಾರರ ತೀರ್ಪು ಪ್ರಶ್ನಿಸುವುದಿಲ್ಲ.
ನಮಗೆ ಇನ್ನೂ ಹೆಚ್ಚಿನ ಸ್ಥಾನ ಬರಬೇಕಾಗಿತ್ತು. ಯಾಕೆ ಕಡಿಮೆ ಬಂದಿದೆ ಎಂದು ಚಿಂತನೆ ಮಾಡುತ್ತೇವೆ. ಗ್ಯಾರಂಟಿ ಯೋಜನೆಗಳಿಂದ ಹೆಚ್ಚಿನ ಸೀಟು ನಿರೀಕ್ಷೆ ಮಾಡಿದ್ದೆವು. ಜನ ಯಾವ ವಿಚಾರದಲ್ಲಿ ನಮ್ಮನ್ನು ಒಪ್ಪಿಲ್ಲ ಎಂಬುದನ್ನು ಪರಿಶೀಲಿಸಿ ಅದನ್ನು ಮುಂದಿನ ದಿನಗಳಲ್ಲಿ ಸರಿಪಡಿಸಿಕೊಳ್ಳುತ್ತೇವೆ.
ಮೋದಿ ಅವರ ಜನಪ್ರಿಯತೆ ಕುಗ್ಗಿರುವುದು ಸಾಬೀತಾಗಿದೆ. ಹಿಂದಿ ಭಾಷಿಗರ ಭಾಗದಲ್ಲೂ ಕುಗ್ಗಿರುವುದು ಸ್ಪಷ್ಟವಾಗಿದೆ. ಬಿಜೆಪಿಗೆ ಸಂಪೂರ್ಣ ಬಹುಮತ ಇಲ್ಲ ಎಂಬುದನ್ನು ಎಲ್ಲರೂ ಒಪ್ಪಬೇಕು. ನನ್ನ ಕ್ಷೇತ್ರದಲ್ಲಿ ನನಗೆ ಹಿನ್ನಡೆಯಾಗಿದ್ದಂತೆ ಅಯೋಧ್ಯೆಯಲ್ಲೂ ಬಿಜೆಪಿ ಹಿನ್ನಡೆ ಅನುಭವಿಸಿದೆ. ಕಳೆದ ಬಾರಿ 303 ಕ್ಷೇತ್ರ ಗೆದ್ದಿದ್ದ ಬಿಜೆಪಿ 243 ಸ್ಥಾನಕ್ಕೆ ಕುಸಿದಿದೆ. ಬಿಜೆಪಿ ನಿಚ್ಚಳ ಬಹುಮತ ಪಡೆದಿಲ್ಲ. ಎನ್ ಡಿ ಎ ಕೂಡ ಹೇಳಿಕೊಂಡಿದ್ದ ಸಾಧನೆ ಮಾಡಿಲ್ಲ. ಬೇರೆ ಪಕ್ಷಗಳ ಮೇಲೆ ಅವಲಂಬಿತವಾಗಿವೆ ಎಂದು ಹೇಳಿದರು.












Click it and Unblock the Notifications