ಮುಂಬೈನಲ್ಲಿ ಅತೃಪ್ತರ ಬೆನ್ನಿಗೆ ಬಿದ್ದಿದ್ದ ಕಾಂಗ್ರೆಸ್ 'ಸ್ಪೈ'ಗಳ ರೋಚಕ ಕತೆ!
ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ವಿಧಾನಸಭೆಯಲ್ಲಿ ವಿಶ್ವಾಸವನ್ನು ಕಳೆದುಕೊಂಡಿದೆ. ಹೊಸ ಸರಕಾರ ರಚನೆ ಪ್ರಕ್ರಿಯೆ ಸುತ್ತ ರಾಜಕೀಯ ಬೆಳವಣಿಗೆಗಳು ಗರಿಗೆದರಿವೆ.
ಈ ಸಮಯದಲ್ಲಿ ಸರಕಾರದ ವಿರುದ್ಧ ಮುನಿಸು ವ್ಯಕ್ತಪಡಿಸಿ ಮುಂಬೈನ ಪಂಚತಾರಾ ಹೋಟೆಲ್ ಸೇರಿಕೊಂಡ ಅತೃಪ್ತ ಸುತ್ತ ನಡೆದ ಕುತೂಹಕಾರಿ ಬೆಳವಣಿಗೆಗಳು ಒಂದೊಂದಾಗಿ ಹೊರಬರುತ್ತಿವೆ.
ಅತೃಪ್ತರ ಚಲನವಲನಗಳ ಮೇಲೆ ನಿಗಾ ಇಡಲು, ಅವರ ಪಕ್ಷ ವಿರೋಧಿ ನಡತೆಯ ಕುರಿತು ಸಾಕ್ಷಿಗಳನ್ನು ಕಲೆ ಹಾಕಲು ಕಾಂಗ್ರೆಸ್ ಪಕ್ಷ ಮೂವರು 'ಗೂಢಾಚಾರರನ್ನು' ಮುಂಬೈನ ಪಂಚತಾರಾ ಹೋಟೆಲ್‌ಗೆ ಕಳುಹಿಸಿತ್ತು ಎಂಬುದು ಲಭ್ಯವಾಗಿರುವ ಮಾಹಿತಿ. ರಾಜಕಾರಣದಲ್ಲಿ ತೆರೆಯ ಮೇಲೆ ನಡೆಯುವ ಬೆಳವಣಿಗಳ ಆಚೆಗೂ ಸುಪ್ತ ಪ್ರಕ್ರಿಯೆಗಳು ಹೇಗೆಲ್ಲಾ ನಡೆಯುತ್ತವೆ ಎಂಬುದನ್ನು ಕಾಂಗ್ರೆಸ್ ಪಕ್ಷದ ಈ ಕಾರ್ಯಚರಣೆ ಮುಂದಿಡುತ್ತಿದೆ.

ಡಿಕೆಶಿ ಭೇಟಿಗೂ ಮುನ್ನ:
ಅದು ಜುಲೈ 6ನೇ ತಾರೀಖು. 9 ಕಾಂಗ್ರೆಸ್ ಶಾಸಕರು ಹಾಗೂ ಮೂವರು ಜೆಡಿಸ್ ಶಾಸಕರು ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಗೆ ಹೋಗಿ ರಾಜೀನಾಮೆ ಸಲ್ಲಿಸಿದರು. ಅಲ್ಲಿಂದ ನೇರವಾಗಿ ಅವರು ಮುಂಬೈನ ಪಂಚತಾರಾ ಹೋಟೆಲ್ ಸೇರಿಕೊಂಡರು. "ಅವರ ಜತೆಗೆ ಇದ್ದ ಎಲ್ಲಾ ಸಂಪರ್ಕಗಳೂ ಕಡಿದು ಹೋಯಿತು. ಪಕ್ಷ ಕಡೆಯಿಂದ ಮಾತುಕತೆ ನಡೆಸಲೂ ಸಂವಹನ ಮಾರ್ಗವೇ ಇರಲಿಲ್ಲ. ಇದನ್ನು ಸವಾಲಾಗಿ ಸ್ವೀಕರಿಸಬೇಕಾಯಿತು,'' ಎನ್ನುತ್ತಾರೆ ಕಾಂಗ್ರೆಸ್ ಕಾರ್ಯಕರ್ತರೊಬ್ಬರು.
ಇದಾದ ಎರಡು ದಿನಗಳಿಗೆ ಇಬ್ಬರು ಸಚಿವರು ಹಾಗೂ ಒಬ್ವರು ಸಂಸದರ ಮೇಲ್ವಿಚಾರಣೆಯಲ್ಲಿ ಅತೃಪ್ತರು ಉಳಿದುಕೊಂಡಿದ್ದ ಹೋಟೆಲ್‌ಗೆ ಮೂವರು 'ಗೂಢಾಚಾರರನ್ನು' ಕಳುಹಿಸುವ ಯೋಜನೆ ಸಿದ್ಧವಾಯಿತು. ಅವತ್ತೇ ಮೂವರು ಕಾಂಗ್ರೆಸ್ ಕಾರ್ಯಕರ್ತರು ಬೆಂಗಳೂರು ವಿಮಾನ ನಿಲ್ದಾಣದಿಂದ ಮುಂಬೈಗೆ ಪ್ರಯಾಣ ಬೆಳೆಸಿದರು.
"ನಾವು ಹೊರಡುವ ಮುನ್ನವೇ ಪ್ರತ್ಯೇಕ ಕಾರ್ಯಾಚರಣೆ ನಡೆಸುವುದಾಗಿ ಮಾತನಾಡಿಕೊಂಡೆವು. ಮುಂಬೈನಲ್ಲಿ ವಿಮಾನ ಇಳಿದ ನಂತರ ಬೇರೆ ಬೇರೆಯಾಗಿ ಹೋಟೆಲ್ ಸೇರಿಕೊಂಡೆವು. ಈ ಸಮಯದಲ್ಲಿ ಕರ್ನಾಟಕದ ನನ್ನ ವಿಳಾಸ ನೋಡಿದ ಹೋಟೆಲ್‌ನವರು ಒಳಗೆ ಬಿಟ್ಟುಕೊಳ್ಳಲು ಹಿಂದೆ ಮುಂದೆ ನೋಡಿದರು,'' ಎಂದು ಮಾಹಿತಿ ನೀಡುತ್ತಾರೆ ನವ್ಯಶ್ರೀ ಆರ್ ರಾವ್.
'ಒನ್ಇಂಡಿಯಾ ಕನ್ನಡ'ದ ಜತೆ ರಹಸ್ಯ ಕಾರ್ಯಾಚರಣೆಯ ಕುರಿತು ಮಾತನಾಡುತ್ತಿದ್ದ ಅವರು ಅವತ್ತು ಹೋಟೆಲ್ ಒಳಗೆ ನಡೆದ ಘಟನಾವಳಿಗಳನ್ನು ಒಂದೊಂದಾಗಿ ಬಿಡಿಸಿಟ್ಟರು.

"ನನಗೆ ಕಾರ್ಪೊರೇಟ್ ಪ್ರವಾಸದ ಹಿನ್ನೆಲೆ ಇತ್ತು. ಜತೆಗೆ ಮರಾಠಿ ಬರುತ್ತಿದ್ದರಿಂದ ಸಮಸ್ಯೆಯಾಗಲಿಲ್ಲ. ಕೊನೆಗೆ ಹೋಟೆಲ್‌ನಲ್ಲಿ ಬುಕ್ ಆಗಿದ್ದ ರೂಮಿಗೆ ಪ್ರವೇಶ ಸಿಕ್ಕಿತು. ಅದೇ ರೀತಿ ಉಳಿದ ಇಬ್ಬರಿಗೂ ಅವಕಾಶ ಸಿಕ್ಕಿತು. ಆದರೆ ಮಾರನೇ ದಿನವೇ ನಮ್ಮ ತಂಡದಲ್ಲಿ ಇದ್ದ ಒಬ್ಬರು ಸಿಕ್ಕಿ ಬಿದ್ದರು. ಕೊನೆಗೆ ಅನಿವಾರ್ಯವಾಗಿ ರೂಮು ಖಾಲಿ ಮಾಡಬೇಕಾಯಿತು. ಈ ಸಮಯದಲ್ಲಿ ನಾವಿಬ್ಬರೇ ಉಳಿದುಕೊಂಡೆವು,'' ಎಂದು ನವ್ಯಶ್ರೀ ಆರಂಭದಲ್ಲಿಯೇ ತಪ್ಪಿದ ಹೆಜ್ಜೆಯನ್ನು ವಿವರಿಸಿದರು.
ನವ್ಯಶ್ರೀ ಸಾಫ್ಟ್‌ವೇರ್ ಉದ್ಯೋಗಿ. ಚನ್ನಪಟ್ಟಣ ಸುತ್ತ ಸಾಮಾಜಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಕಳೆದ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿ ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್‌ಗೆ ಭೇಟಿ ನೀಡಿದ್ದರು. ಈ ಸಮಯದಲ್ಲಿ ಇಂಗ್ಲಿಷ್ ಮೀಡಿಯಾಗಳಲ್ಲಿ ನವ್ಯಶ್ರೀ ಕಾಂಗ್ರೆಸ್ ಅಧ್ಯಕ್ಷರ ಪರ ಆಡಿದ ಮಾತುಗಳು ರಾಷ್ಟ್ರದ ಗಮನ ಸೆಳೆದಿದ್ದವು.
"ಸ್ವತಃ ರಾಹುಲ್ ಗಾಂಧಿ ನನಗೆ ಅಭಿನಂದಿಸಿದ್ದರು. ಜತೆಗೆ ಪಕ್ಷದಲ್ಲಿ ಹೊಣೆಗಾರಿಕೆ ನೀಡುವಂತೆ ತಿಳಿಸಿದ್ದರು. ಇದರಿಂದಾಗಿ ನಾನು ಕಾಂಗ್ರೆಸ್ ಜತೆ ಗುರುತಿಸಿಕೊಂಡೆ. ಬಿಕ್ಕಟ್ಟು ಎದುರಾದಾಗ ಪಕ್ಷ ಮುಂಬೈನಲ್ಲಿ ಅತೃಪ್ತರ ಮೇಲೆ ನಿಗಾ ಇಡುವ ಕೆಲಸ ನೀಡಿತು. ನಿರಾಕರಿಸಲು ನನ್ನ ಬಳಿ ಕಾರಣಗಳು ಇರಲಿಲ್ಲ,'' ಎಂದರು ನವ್ಯಶ್ರೀ.
ಕಾಮನ್ ಏರಿಯಾ:
ಹೀಗೆ ಹೋಟೆಲ್ ಸೇರಿಕೊಂಡ ನವ್ಯಶ್ರೀ ಹಾಗೂ ಉಳಿದ ಇನ್ನೊಬ್ಬರು ಒಳಗಿದ್ದ ಅತೃಪ್ತರ ಚಲನವಲನಗಳ ಮೇಲೆ ನಿಗಾ ಇಡಲು ಶುರುಮಾಡಿದರು.
"ಅಲ್ಲಿನ 14ನೇ ಅಂತಸ್ತಿನಲ್ಲಿ ಕಾಮನ್ ಏರಿಯಾ ಒಂದಿದೆ. ಮದ್ಯಪಾನಕ್ಕೆ ಎಲ್ಲರೂ ಅಲ್ಲಿಗೆ ಬರುತ್ತಿದ್ದರು. ಈ ಸಮಯದಲ್ಲಿ ಒಂದಷ್ಟು ವಿಡಿಯೋಗಳನ್ನು ನಾವು ಬೆಂಗಳೂರಿನ ಕಾಂಗ್ರೆಸ್ ನಾಯಕರಿಗೆ ತಲುಪಿಸಿದೆವು. ಇದು ನಡೆಯುತ್ತಿರುವಾಗಲೇ ನನ್ನ ಜತೆ ಬಂದಿದ್ದ ಇನ್ನೊಬ್ಬರಿಗೆ ಹೋಟೆಲ್‌ನಿಂದ ಹೊರಗೆ ಕಳುಹಿಸಿದರು. ಕೊನೆಗೆ ನಾನೊಬ್ಬಳೇ ಉಳಿದುಕೊಂಡೆ. ಒಂದು ಹಂತದಲ್ಲಿ ಅತೃಪ್ತರ ಭೇಟಿಗೆ ಬರುತ್ತಿದ್ದ ಬಿಜೆಪಿ ನಾಯಕರ ದಾಖಲೆಗಳೂ ಸಿಕ್ಕವು. ಇವು ಪಕ್ಷ ವಿರೋಧಿ ನಡವಳಿಕೆ ಎಂಬುದನ್ನು ಸಾಬೀತು ಮಾಡಲು ಅನುಕೂಲವಾಗುವಂತಹ ಸಾಕ್ಷಿಗಳು,'' ಎಂದು ನವ್ಯಶ್ರೀ ತಾವು ನಡೆಸಿದ ರಹಸ್ಯ ಕಾರ್ಯಾಚರಣೆಯ ಮಾಹಿತಿ ನೀಡಿದರು.

ಇದೇ ಹೋಟೆಲ್ ಕೇಂದ್ರವಾಗಿಟ್ಟುಕೊಂಡು ಕರ್ನಾಟಕದ ರಾಜಕೀಯ ಬೆಳವಣಿಗಳು ನಡೆಯುತ್ತಿದ್ದ ಸಮಯ ಅದು. ಒಳಗಿನಿಂದ ಬೆಂಗಳೂರಿನಲ್ಲಿದ್ದ ಕಾಂಗ್ರೆಸ್ ನಾಯಕರಿಗೆ ವಿಡಿಯೋಗಳು ಬಂದು ಬೀಳುತ್ತಿದ್ದವು. ಇದನ್ನು ಇಟ್ಟುಕೊಂಡು ಮನವೊಲಿಸುವ ಪ್ರಯತ್ನಗಳು ತೆರೆಮರೆಯಲ್ಲಿ ಸಾಗುತ್ತಿದ್ದವು. ಅಂತಿಮವಾಗಿ ಇವ್ಯಾವ ಪ್ರಯತ್ನಗಳು ಫಲ ನೀಡದೆ ಸರಕಾರ ಪತನವಾಯಿತು. ಅತೃಪ್ತರು ಕೂಡ ಮುಂಬೈ ಹೋಟೆಲ್ ಬಿಟ್ಟು ಪುಣೆ ಸೇರಿಕೊಂಡರು. ಅಲ್ಲಿಗೆ ಕಾಂಗ್ರೆಸ್ ರೂಪಿಸಿದ್ದ ಗೂಢಾಚಾರಿಕೆ ಕಾರ್ಯಾಚರಣೆಯೂ ಸ್ಥಗಿತಗೊಂಡಿತು.
"ಅತೃಪ್ತರು ವಾಪಾಸ್ ಬಂದಿದ್ದರೆ ಒಳ್ಳೆಯದಾಗುತ್ತಿತ್ತು. ಅವರು ಕೊನೆಗೂ ಒಪ್ಪಲಿಲ್ಲ. ಆದರೆ ನಾವು ಮುಂಬೈ ಹೋಟೆಲ್‌ನಲ್ಲಿ ಕಲೆ ಹಾಕಿದ ಮಾಹಿತಿ ಪಕ್ಷದ ನೆರವಿಗೆ ಬರಲಿದೆ. ಅಷ್ಟರ ಮಟ್ಟಿಗೆ ಸಮಾಧಾನ ಇದೆ,'' ಎನ್ನುತ್ತಾರೆ ನವ್ಯಶ್ರೀ.
ರಾಜಕಾರಣದ ವಿಚಾರ ಬಂದಾಗ ಯಾರು ಹೇಗೆಲ್ಲಾ ತಂತ್ರಗಾರಿಕೆಗಳನ್ನು ಮೆರೆಯುತ್ತಾರೆ ಎಂಬುದಕ್ಕೆ ಇದೊಂದು ನಿದರ್ಶನ ಅಷ್ಟೆ.












Click it and Unblock the Notifications