ಕಾಂಗ್ರೆಸ್ ಪ್ರಭಾವಿ ಶಾಸಕ ನರೇಂದ್ರಸ್ವಾಮಿಗೆ ಜೀವ ಬೆದರಿಕೆ, ಯಾರಿಂದ?
ಕಾಂಗ್ರೆಸ್ ಪಕ್ಷದ ಪ್ರಭಾವಿ ರಾಜಕಾರಣಿ ಹಾಗೂ ಮಳವಳ್ಳಿ ಕ್ಷೇತ್ರ ಶಾಸಕ ನರೇಂದ್ರಸ್ವಾಮಿ ಅವರಿಗೆ ಜೀವ ಬೆದರಿಕೆ ಹಾಕಲಾಗಿದೆ ಎಂಬ ಶಾಕಿಂಗ್ ವಿಚಾರ ಕೇಳಿಬಂದಿದೆ. ಮಂಡ್ಯ ಜಿಲ್ಲೆಯ ಅಭಿವೃದ್ಧಿ ಕಾಮಗಾರಿಗಳ ಸಂಬಂಧ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆಯಾಗಿದ್ದು, ಸಭೆಯಲ್ಲಿ ಪಾಲ್ಗೊಂಡಿದ್ದ ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ಈ ಗಂಭೀರ ವಿಚಾರವನ್ನು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ. ಈ ಸಭೆಯಲ್ಲಿ ಸಚಿವರು ಕೂಡ ಇದ್ದು, ತಮಗೆ ಜೀವ ಬೆದರಿಕೆ ಇರುವ ವಿಚಾರ ಬಹಿರಂಗಪಡಿಸಿದ್ದಾರೆ.
ಮಂಡ್ಯದ ಜಿಲ್ಲಾ ಪಂಚಾಯಿತಿ ಕಾವೇರಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಸಚಿವ ಚಲುವರಾಯಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಇದೇ ಸಭೆಯಲ್ಲಿ ಜಿಲ್ಲೆಯ ಶಾಸಕರಾದ ನರೇಂದ್ರ ಸ್ವಾಮಿ ಕೂಡ ಇದ್ದರು. ಈ ವೇಳೆ ಮಾತನಾಡುವಾದ ತಮಗೆ ಭೂಗಳ್ಳರಿಂದ ಜೀವ ಬೆದರಿಕೆ ಇದೆ ಎಂಬ ವಿಚಾರ ಪ್ರಸ್ತಾಪಿಸಿದ್ದಾರೆ. ಶಾಸಕರು ಇತ್ತೀಚೆಗೆ ತಮ್ಮ ಕ್ಷೇತ್ರವಾದ ಮಳವಳ್ಳಿ ಭಾಗದಲ್ಲಿ ನಡೆದಿದ್ದ ಭೂಗಳ್ಳತನದ ವಿರುದ್ಧ ಸಮರ ಸಾರಿದ್ದರು. ಈ ತಾಲ್ಲೂಕಿನಲ್ಲೇ ಸುಮಾರು 2,500 ಎಕರೆಗೂ ಹೆಚ್ಚಿನ ಸರ್ಕಾರಿ ಭೂಮಿ ಭೂಗಳ್ಳರ ಪಾಲಾಗಿದೆ ಎಂದು ಆರೋಪಿಸಿದ್ದರು. ಈ ಗಂಭೀರ ವಿಚಾರ ಸದನದಲ್ಲೂ ಸದ್ದು ಮಾಡಿದ್ದರಿಂದ ಸರ್ಕಾರವು ತನಿಖಾ ತಂಡ ರಚಿಸಿತ್ತು.

ಬಳಿಕ ಆ ಸಮಿತಿಯು ಭೂಗಳ್ಳರು ವಶಪಡಿಸಿಕೊಂಡಿದ್ದ ಸುಮಾರು 800 ಎಕರೆ ಸರ್ಕಾರಿ ಭೂಮಿಯನ್ನ ಮತ್ತೆ ಸರ್ಕಾರದ ವಶಕ್ಕೆ ಬರುವಂತೆ ಮಾಡಿತ್ತು. ಈ ಕಾರಣಕ್ಕೆ ಶಾಸಕ ನರೇಂದ್ರ ಸ್ವಾಮಿ ಅವರ ಮೇಲೆ ಭೂಗಳ್ಳರು ಕಿಡಿಕಾರುತ್ತಿದ್ದು, ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಇದನ್ನು ಸಭೆಯಲ್ಲೇ ಹೇಳಿರುವುದು ಸಂಚಲನ ಸೃಷ್ಟಿಸಿದೆ.
ಜೀವ ಬೆದರಿಕೆ ಇರುವ ವಿಚಾರವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಭೆಯಲ್ಲಿ ಹೇಳಿಕೊಂಡಿದ್ದಾರೆ ಎನ್ನಲಾಗಿದ್ದು, ಇದಕ್ಕೆ ಕಾರಣ ಭೂಗಳ್ಳರು ಎಂಬ ಆರೋಪ ಕೇಳಿಬಂದಿದೆ. ಈಗಾಗಲೇ ಮಂಡ್ಯ ಭಾಗದದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗಿದ್ದು, ಇದು ಶಾಸಕರಿಗೆ ಜೀವ ಬೆದರಿಕೆ ಹಾಕುವ ಮಟ್ಟಕ್ಕೆ ಬಂದಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಇದಕ್ಕೆಲ್ಲ ನಾನು ಹೆದರಲ್ಲ
ನಾನೊಬ್ಬ ಜನಪ್ರತಿನಿಧಿ, ಸಾರ್ವಜನಿಮ ವಲಯದಲ್ಲಿದ್ದಾಗ ಇದೆಲ್ಲವೂ ಸರ್ವೇಸಾಮಾನ್ಯ. ಇದಕ್ಕೆಲ್ಲ ನಾನು ಅಂಜುವುದಿಲ್ಲ. ನಾನು ಸಾರ್ವಜನಿಕರ ಹಿತದೃಷ್ಟಿಯಿಂದ ಸರ್ಕಾರಿ ಆಸ್ತಿ ರಕ್ಷಣೆ ಮಾಡುವ ಕೆಲಸ ಮಾಡಿದ್ದೇನೆ. ಹಾಗಾಗಿ ನನ್ನ ಮೇಲೆ ಏನೇನೋ ಆರೋಪಗಳು ಬರುತ್ತಿವೆ. ನನ್ನ ಪ್ರಾಮಾಣಿಕ ಕೆಲಸ ನಾನು ಮಾಡುತ್ತೇನೆ. ಜೀವ ಬೆದರಿಕೆ ಹಾಕಿರುವ ವಿಚಾರದ ಬಗ್ಗೆ ನಾನು ಆ ಮೇಲೆ ಮಾತನಾಡುತ್ತೇನೆ, ಈಗ ಅದರ ಅವಶ್ಯಕತೆ ಇಲ್ಲ ಎಂದು ಮಾಧ್ಯಮಗಳ ಮುಂದೆ ಶಾಸಕ ನರೇಂದ್ರ ಸ್ವಾಮಿ ಹೇಳಿದ್ದಾರೆ.
ಇದನ್ನೆಲ್ಲ ತಡೆಯುವ ಶಕ್ತಿ ನನಗಿದೆ. ಮುಂದೆ ಇದಕ್ಕೆ ಏನು ಮಾಡಬೇಕೋ ಮಾಡ್ತೀನಿ. ಈ ಬಗ್ಗೆ ಸೂಕ್ತ ಸಮಯದಲ್ಲಿ, ಅವಶ್ಯಕತೆ ಇದ್ದಾಗ ದಾಖಲೆ ಬಿಡುಗಡೆ ಮಾಡ್ತೀನಿ. ಈಗ ತನಿಖೆ ದಿಕ್ಕುತಪ್ಪಬಾರದು. ಪ್ರಾಥಮಿಕ ಹಂತದಲ್ಲೇ ನಾನು ಅಂಜುವಂತೆ ವರ್ತಿಸುವುದು ಸರಿಯಲ್ಲ. ಯಾರೋ ಥರ್ಡ್ ಪಾರ್ಟಿಗಳು ಇದನ್ನ ಮಾತನಾಡಿದ್ದಾರೆ. ನನಗೆ ನೇರವಾಗಿ ಬೆದರಿಕೆ ಹಾಕಿದರೆ ಬುದ್ಧಿ ಕಲಿಸೋದು ಗೊತ್ತಿದೆ ಎಂದೂ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications