ಗುರುವಾರ ಕರ್ನಾಟಕಕ್ಕೆ ರಾಹುಲ್ ಗಾಂಧಿ; ಇಲ್ಲಿದೆ ಕಾರ್ಯಕ್ರಮ ಪಟ್ಟಿ
ಬೆಂಗಳೂರು, ಮಾರ್ಚ್ 30: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಇನ್ನೊಂದು ವರ್ಷವಷ್ಟೇ ಬಾಕಿ ಇರುವಂತೆ ಕೇಂದ್ರದ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ಕಣ್ಣು ರಾಜ್ಯದ ಮೇಲೆ ನೆಟ್ಟಿದೆ. ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿರುವ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿ ಮೊದಲ ದಿನ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ. ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜನ್ಮದಿನದ ಅಂಗವಾಗಿ ಮಠಕ್ಕೆ ತೆರಳಿ ಗದ್ದುಗೆಗೆ ನಮಿಸಲಿದ್ದಾರೆ. ತದನಂತರದಲ್ಲಿ ಮಠಾಧ್ಯಕ್ಷರಾದ ಸಿದ್ದಲಿಂಗ ಸ್ವಾಮೀಜಿಯವರ ಆಶೀರ್ವಾದ ಪಡೆದುಕೊಳ್ಳಲಿದ್ದಾರೆ.
ಗುರುವಾರ ಬೆಂಗಳೂರಿಗೆ ಆಗಮಿಸಲಿರುವ ರಾಹುಲ್ ಗಾಂಧಿ, ರಸ್ತೆ ಮಾರ್ಗವಾಗಿ ಸಂಜೆ 4 ಗಂಟೆ ವೇಳೆಗೆ ತುಮಕೂರಿಗೆ ತೆರಳಲಿದ್ದಾರೆ. ರಸ್ತೆ ಮಾರ್ಗವಾಗಿ ಆಗಮಿಸುವ ಅವರಿಗೆ ತುಮಕೂರು ಟೋಲ್ ಬಳಿಯಲ್ಲಿಯೇ ಅದ್ಧೂರಿ ಸ್ವಾಗತ ಕೋರಲಾಗುತ್ತದೆ.

ಏಪ್ರಿಲ್ 1ರಂದು ಶಾಸಕರು, ಮಾಜಿ ಶಾಸಕರೊಂದಿಗೆ ಸಭೆ:
ಮೊದಲ ದಿನ ತುಮಕೂರಿನ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ದರ್ಶನ ಪಡೆದ ನಂತರದಲ್ಲಿ ರಾಹುಲ್ ಗಾಂಧಿ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಏಪ್ರಿಲ್ 1ರ ಶುಕ್ರವಾರ ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಕಾಂಗ್ರೆಸ್ಸಿನ ಎಲ್ಲ ಶಾಸಕರು, ಮಾಜಿ ಶಾಸಕರು ಹಾಗೂ ಕಳೆದ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳು, ಸಂಸತ್ ಚುನಾವಣೆಯಲ್ಲಿ ಸೋತ ಕಾಂಗ್ರೆಸ್ ಅಭ್ಯರ್ಥಿಗಳು, ಮಾಜಿ ಸಂಸದರು, ವಿವಿಧ ಘಟಕಗಳ ಅಧ್ಯಕ್ಷರ ಜತೆ ಸಭೆ ನಡೆಸಲಿದ್ದಾರೆ.

ಬೆಲೆ ಏರಿಕೆ ವಿರುದ್ಧ ಅಭಿಯಾನಕ್ಕೆ ಕರೆ:
ದೇಶದಲ್ಲಿ ಬೆಲೆ ಏರಿಕೆಗೆ ಸಂಬಂಧಿಸಿದಂತೆ ರಾಜ್ಯದಲ್ಲೂ ಅಭಿಯಾನ ನಡೆಸುವಂತೆ ಕಾಂಗ್ರೆಸ್ ನಾಯಕರಿಗೆ ಕರೆ ನೀಡಲಾಗಿದೆ. ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಮಾರ್ಚ್ 31ರಂದು ರಾಜ್ಯದ ಕಾಂಗ್ರೆಸ್ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರು ಈ ಅಭಿಯಾನದಲ್ಲಿ ಭಾಗವಹಿಸಬೇಕು. ನಿಮ್ಮ ಮನೆ ಎದುರಿನಲ್ಲಿ ನಿಮ್ಮ ನಿಮ್ಮ ವಾಹನಗಳನ್ನು, ಸಿಲಿಂಡರ್ ಅನ್ನು ಇರಿಸಿ ಅದಕ್ಕೆ ಹೂವಿನ ಹಾರವನ್ನು ಹಾಕಿ ಜಾಗಟೆ ಬಾರಿಸಬೇಕು. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಟ್ಯಾಗ್ ಮಾಡಿ ಪೋಸ್ಟ್ ಹಾಕುವಂತೆ ಸೂಚನೆ ನೀಡಲಾಗಿದೆ.

ಏಪ್ರಿಲ್ 1ರಂದು ರಾಜ್ಯಕ್ಕೆ ಅಮಿತ್ ಶಾ ಭೇಟಿ:
ರಾಹುಲ್ ಗಾಂಧಿ ರಾಜ್ಯ ಪ್ರವಾಸದ ಬೆನ್ನಲ್ಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೂಡ ಏಪ್ರಿಲ್ 1ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಏಪ್ರಿಲ್ 1ರಂದು ತುಮಕೂರಿನ ಸಿದ್ದಗಂಗಾ ಮಠದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ 115ನೇ ಜನ್ಮದಿನಾಚರಣೆ ಅಂಗವಾಗಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ತದನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಮುದ್ದೇನಹಳ್ಳಿಯ ಸತ್ಯಸಾಯಿ ಸಂಸ್ಥೆಯ ಸಮಾರಂಭ ಹಾಗೂ ಬೆಂಗಳೂರಿನಲ್ಲಿ ಸಹಕಾರ ಇಲಾಖೆಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ.












Click it and Unblock the Notifications