ಡಿ. ಕೆ. ಶಿವಕುಮಾರ್ ವಿರುದ್ಧ ಅಪಪ್ರಚಾರ, ಬಿಜೆಪಿ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು, ಮಾರ್ಚ್ 29: ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಸಂವಿಧಾನ ಬದಲಾವಣೆ ಮಾಡುವ ವಿಚಾರದಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಪ್ರತಿಪಕ್ಷಗಳು ದೂರುತ್ತಿವೆ. ಈ ಕುರಿತು ಡಿ. ಕೆ. ಶಿವಕುಮಾರ್ ಸ್ಪಷ್ಟನೆಯನ್ನು ಸಹ ನೀಡಿದ್ದಾರೆ. ಈ ವಿಚಾರದ ಕುರಿತು ರಾಜ್ಯಸಭೆಯಲ್ಲಿಯೂ ಚರ್ಚೆ ನಡೆದಿದೆ. ಆದರೆ ಈ ವಿಚಾರದಲ್ಲಿ ಡಿ. ಕೆ. ಶಿವಕುಮಾರ್ ವಿರುದ್ಧ ಅಪಪ್ರಚಾರವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ದೂರು ನೀಡಿದೆ.
ಕೆಪಿಸಿಸಿ ಮಾಧ್ಯಮ ವಿಭಾಗದ ಮುಖ್ಯಸ್ಥ ರಮೇಶ್ ಬಾಬು ಹಾಗೂ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್. ಮನೋಹರ್ ನೇತೃತ್ವದ ನಿಯೋಗ ಹೆಚ್ಚುವರಿ ಪೊಲೀಸ್ ಮಹಾ ನಿದೇಶಕರಾದ ಹಿತೇಂದ್ರ ಅವರಿಗೆ ಈ ಕುರಿತು ದೂರು ನೀಡಿದೆ. ಸಂವಿಧಾನದ ವಿಷಯದಲ್ಲಿ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಪಕ್ಷದ ವಿರುದ್ಧ ದೂರು ನೀಡಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಕೆಪಿಸಿಸಿ ಪೋಸ್ಟ್ ಹಾಕಿದೆ.

ಈ ದೂರು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರು ಹಾಗೂ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಸಂವಿಧಾನವನ್ನು ಬದಲಾಯಿಸುತ್ತೇನೆ ಎಂದು ಎಲ್ಲೂ ಸಹ ಹೇಳಿಕೆ ನೀಡಿಲ್ಲ. ಆದರೂ ಸಹ ಭಾರತೀಯ ಜನತಾ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಉದ್ದೇಶಪೂರ್ವಕವಾಗಿ ಸಂವಿಧಾನವನ್ನು ಡಿ. ಕೆ. ಶಿವಕುಮಾರ್ ಅವರು ಬದಲಾಯಿಸುತ್ತೇನೆ ಎಂದು ಹೇಳಿದ್ದಾರೆ ಎಂದು ಅಪಪ್ರಚಾರ ಮಾಡಿ ಸುಳ್ಳು ವದಂತಿಗಳನ್ನು ಹಬ್ಬಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಬಹಿರಂಗವಾಗಿ ಹೇಳಿಕೆ ನೀಡಿರುವ ಹಿನ್ನಲೆಯಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ನಿಯೋಗದ ಮೂಲಕ ಕೋರಿಕೊಳ್ಳುತ್ತಿದ್ದೇವೆ ಎಂಬ ವಿಷಯವನ್ನು ಒಳಗೊಂಡಿದೆ.
ದೂರಿನ ವಿವರಗಳು: ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಕರ್ನಾಟಕ ಸರ್ಕಾರದ ಮಾನ್ಯ ಉಪಮುಖ್ಯಮಂತ್ರಿಗಳಾದ ಡಿ. ಕೆ. ಶಿವಕುಮಾರ್ ಅವರು ಮಾಧ್ಯಮದಲ್ಲಿ ಸಂದರ್ಶನ ನೀಡುವಾಗ ಸಂವಿಧಾನದ ಹಾಗೂ ಮೀಸಲಾತಿ ಬಗ್ಗೆ ಸಂದರ್ಶನದಲ್ಲಿ ಪ್ರಶ್ನೆ ಕೇಳಿದಾಗ ಸಂವಿಧಾನದ ಬಗ್ಗೆ ಸುಪ್ರೀಂಕೋರ್ಟ್‌ನಲ್ಲಿ ಹಾಗೂ ಉಚ್ಚ ನ್ಯಾಯಲಯದಲ್ಲಿ ಅನೇಕ ಪ್ರಕರಣಗಳದೆ ಈ ಪ್ರಕರಣಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂಬ ಮಾಹಿತಿಯನ್ನು ತಿಳಿಸಿದ್ದಾರೆ.
ಆದರೆ ಉದ್ದೇಶಪೂರ್ವಕವಾಗಿ ಭಾರತೀಯ ಜನತಾ ಪಕ್ಷದ ನಾಯಕರು ಸಂಸತ್ತಿನಲ್ಲೂ ಸಹ ಇದರ ಬಗ್ಗೆ ವಿಷಯವನ್ನು ಪ್ರಸ್ತಾಪಿಸಿ ಡಿ. ಕೆ. ಶಿವಕುಮಾರ್ ಅವರು ಸಂವಿಧಾನ ಬದಲಾಯಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ ಎಂದು ಸುಳ್ಳು ಮಾಹಿತಿ ನೀಡಿದ್ದಾರೆ.
ಆದ್ದರಿಂದ ಕೇಂದ್ರ ಸಚಿವರಾದ ಜೆ. ಪಿ. ನಡ್ಡಾ ಹಾಗೂ ಕಿರಣ್ ರಿಜಿಜು ವಿರುದ್ಧ ಕಾನೂನು ಕ್ರಮಕ್ಕೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿ ಸುಳ್ಳು ಮಾಹಿತಿ ಹಾಗೂ ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂಬ ಅಪಪ್ರಚಾರ ಮಾಡುತ್ತಿರುವ ಹಿನ್ನಲೆಯಲ್ಲಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಮನವಿ ಮಾಡಿದ್ದಾರೆ.
ಭಾರತೀಯ ಜನತಾ ಪಕ್ಷ ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನದ ಬದಲಾವಣೆಗೆ ಕಾಂಗ್ರೆಸ್ ಹಾಗೂ ಉಪಮುಖ್ಯಮಂತ್ರಿಗಳು ಮುಂದಾಗಿದ್ದರೆ ಎಂಬ ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಆಶಯಗಳಿಗೆ ವಿರುದ್ಧವಾದ ಹೇಳಿಕೆಗಳನ್ನು ಬಿಜೆಪಿ ನೀಡುತ್ತಿದೆ. ಸಂವಿಧಾನದ ಬದಲಾವಣೆ ಕುರಿತು ಕಾಂಗ್ರೆಸ್ ಅಗಲಿ, ಕಾಂಗ್ರೆಸ್ ನಾಯಕರಾಗಲಿ ಎಲ್ಲೂ ಸಹ ಹೇಳಿಕೆ ನೀಡಿಲ್ಲ. ಆದರೆ ಬಿಜೆಪಿ ರಾಜ್ಯದ ಮತ್ತು ರಾಷ್ಟ್ರದ ಜನರಿಗೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇಂತಹ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ತನಿಖೆ ನಡೆಸಿ ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕು. ಸಂವಿಧಾನವನ್ನು ಕಾಂಗ್ರೆಸ್ ಪಕ್ಷ ಸದಾ ಗೌರವಿಸುತ್ತದೆ ಸಂವಿಧಾನದ ಅಡಿಯಲ್ಲಿ ದೇಶ ಮುನ್ನಡೆಯಲಿದೆ ಎಂದು ಈಗಾಗಲೇ ಅನೇಕ ಬಾರಿ ಕಾಂಗ್ರೆಸ್ ಕಾರ್ಯಕರ್ತರಿಗೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಮುಖ್ಯಮಂತ್ರಿಗಳು ಸಹ ಸೂಚನೆ ನೀಡಿ ಸಂವಿಧಾನವೇ ನಮ್ಮ ಮೂಲ ಧ್ಯೇಯ, ಸಂವಿಧಾನ ರಕ್ಷಣೆಗೆ ನಾವೆಲ್ಲ ಹೋರಾಡಬೇಕು. ಸಂವಿಧಾನವೇ ನಮಗೆ ರಕ್ಷಣೆ ಎಂದು ಈಗಾಗಲೇ ರಾಹುಲ್ ಗಾಂಧಿ ಅವರು ಸಂಸತ್ತಿನಲ್ಲಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸಂವಿಧಾನದ ಪುಸ್ತಕ ಹಿಡಿದು ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಆದ್ದರಿಂದ ಈ ಕೂಡಲೇ ಅಪಪ್ರಚಾರ ಮಾಡುತ್ತಿರುವವರನ್ನು ತನಿಖೆಗೆ ಒಳಪಡಿಸಿ, ಅಗತ್ಯ ಕಾನೂನು ಕ್ರಮ ಕೈಗೊಳ್ಳಬೇಕೆಂದು ಈ ನಿಯೋಗದ ಮೂಲಕ ಈ ದೂರನ್ನು ಸಲ್ಲಿಸುತ್ತಿದ್ದೇವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.












Click it and Unblock the Notifications