ಕೊಡಗು ಪ್ರವಾಹ ಹಿನ್ನೆಲೆ ಸಮನ್ವಯ ಸಮಿತಿ ಮುಂದಕ್ಕೆ: ಪರಮೇಶ್ವರ್
ಬೆಂಗಳೂರು, ಆಗಸ್ಟ್ 22: ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುವ ಕಾರಣ, ಮುಖ್ಯಮಂತ್ರಿಗಳು, ಸಚಿವರು ಅಲ್ಲಿನ ಜನರ ಪರಿಸ್ಥಿತಿ ಸುಧಾರಣೆಗೆ ಹೆಚ್ಚಿನ ಗಮನ ನೀಡುವ ಈ ಸಮಯದಲ್ಲಿ ಸಮನ್ವಯ ಸಮಿತಿ ಸಭೆ ನಡೆಸುವುದು ಬೇಡವೆಂದು ತೀರ್ಮಾನಿಸಿದ್ದೇವೆ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಕೊಡಗಿನಲ್ಲಿ ಭಾರಿ ಅನಾಹುತ ಸಂಭವಿಸಿದ್ದು ಈ ಹಂತದಲ್ಲಿ ಸಭೆ ನಡೆಸುವುದು ಸೂಕ್ತವಲ್ಲ ಎಂಬ ಕಾರಣಕ್ಕೆ ಸಮನ್ವಯ ಸಮಿತಿಯ ಸಭೆಯನ್ನು ಮುಂದೂಡಲಾಗಿದ್ದು, ಕೊಡಗಿನ ಪರಿಸ್ಥಿತಿ ಸುಧಾರಿಸಿದ ನಂತರ ಸಭೆ ಮಾಡಲಾಗುವುದು ಎಂದು ಅವರು ಹೇಳಿದ್ದಾರೆ.
ಸದಾಶಿವನಗರದ ತಮ್ಮ ಮನೆಯಲ್ಲಿ ಧಿಡೀರ್ ಸುದ್ದಿಗೋಷ್ಟಿ ನಡೆಸಿ ಈ ವಿಷಯವನ್ನು ಅವರು ಮಾಧ್ಯಮಗಳಿಗೆ ತಿಳಿಸಿದರು. ಜೊತೆಗೆ ಕೊಡಗು ಪ್ರಸ್ತುತ ಸ್ಥಿತಿ ಮತ್ತು ಕೊಡಗಿನ ಪುನರ್ ನಿರ್ಮಾಣಕ್ಕೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆಯೂ ಮಾಹಿತಿ ನೀಡಿದರು.

ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸಮನ್ವಯ ಸಮಿತಿ
ಸಿದ್ದರಾಮಯ್ಯ ಅಧ್ಯಕ್ಷರಾಗಿರುವ ಸಮನ್ವಯ ಸಮಿತಿಯ ಸಭೆ ಈ ತಿಂಗಳು ನಡೆಯಬೇಕಿತ್ತು. ಸಭೆಯಲ್ಲಿ ಅಧಿಕಾರಿಗಳ ವರ್ಗಾವಣೆ, ಶಾಧಿ ಭಾಗ್ಯಕ್ಕೆ ಅನುದಾನ ಕಡಿತ, ನಿಗಮ ಮಂಡಳಿಗಳ ನೇಮಕ, ಸಂಪುಟ ವಿಸ್ತರಣೆ, ಸ್ಥಳೀಯ ಸಂಸ್ಥೆ ಚುನಾವಣೆ, ಲೋಕಸಭೆ ಚುನಾವಣೆಗಳ ಬಗ್ಗೆ ಚರ್ಚೆ ನಡೆಯುವ ಭರವಸೆ ಇತ್ತು.

ಕುಮಾರಸ್ವಾಮಿ ಮೇಲೆ ಹರಿಹಾಯಲಿದ್ದ ಸಿದ್ದರಾಮಯ್ಯ
ಈ ಬಾರಿಯ ಸಮನ್ವಯ ಸಮಿತಿಯಲ್ಲಿ ಸಿದ್ದರಾಮಯ್ಯ ಅವರು, ಕುಮಾರಸ್ವಾಮಿ ಅವರ ಮೇಲೆ ಮುರಿದು ಬೀಳಲಿದ್ದಾರೆ ಎಂದು ಎಣಿಸಲಾಗಿತ್ತು. ಅಧಿಕಾರಿಗಳ ವರ್ಗಾವಣೆ, ತಮ್ಮ ಆಪ್ತರಿಗೆ ಮನ್ನಣೆ ನೀಡದಿರುವುದು, ಜೆಡಿಎಸ್ ಪಕ್ಷದ ಶಾಸಕರಿಗೆ ಉತ್ತರ ಕರ್ನಾಟಕದಲ್ಲಿ ಜಿಲ್ಲಾ ಉಸ್ತುವಾರಿ ಸ್ಥಾನ ನೀಡಿರುವುದು, ಉಚಿತ ಬಸ್ ಪಾಸ್ ವಿತರಣೆ, ಇನ್ನೂ ಹಲವು ವಿಷಯಗಳ ಬಗ್ಗೆ ಅವರು ಕುಮಾರಸ್ವಾಮಿ ವಿರುದ್ಧ ಹರಿಹಾಯಲಿದ್ದಾರೆ ಎಂದು ಎಣಿಸಲಾಗಿತ್ತು.

ಎಚ್‌ಡಿಕೆ-ಪರಮೇಶ್ವರ್ ಅಲ್ಪ ನಿರಾಳ
ಈಗ ಸಮನ್ವಯ ಸಮಿತಿ ಸಭೆ ಮುಂದೂಡಲ್ಪಟ್ಟಿರುವುದರಿಂದ ಸಂಪುಟ ವಿಸ್ತರಣೆ ಇನ್ನಷ್ಟು ವಿಳಂಬವಾಗುವ ಸಾಧ್ಯತೆ ಇದೆ. ಅಲ್ಲದೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ವಿರುದ್ಧ ಕೆಂಪು ಬಾವುಟ ಹಾರಿಸಿರುವ ಪರಮೇಶ್ವರ್ ಅವರಿಗೂ ಸ್ವಲ್ಪ ಕಾಲ ನಿರಾಳ ಭಾವ ದೊರಕಲಿದೆ.

ಕೊಡಗಿನ ಪರಿಸ್ಥಿತಿ ಬಗ್ಗೆ ಪ್ರಸ್ತುತ ಮಾಹಿತಿ
ಕೊಡಗಿನ ಪ್ರಸ್ತುತ ಪರಿಸ್ಥಿತಿಯ ಬಗ್ಗೆಯೂ ಮಾಹಿತಿ ನೀಡಿದ ಪರಮೇಶ್ವರ್ ಅವರು, ಪ್ರವಾಹದಿಂದಾಗಿ ಈವರೆಗೆ 8 ಜನ ಮೃತಪಟ್ಟಿದ್ದು, ಹಲವರು ನಿರಾಶ್ರಿತರಾಗಿದ್ದಾರೆ ಎಂದರು. 40 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ, ಸರ್ಕಾರದ ನೆರವಿನೊಂದಿಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ ಎಂದು ಅವರು ಮಾಹಿತಿ ನೀಡಿದರು.












Click it and Unblock the Notifications