ಸಿಎಂ ಸಿದ್ದು ಮನೆ ನವೀಕರಣಕ್ಕೆ 2ಕೋಟಿ ಸುರಿದಿದ್ದಾರೆ

ಆದರೆ ಇವೆರಡಕ್ಕೂ ಆಸ್ಪದ ನೀಡುವಂತೆ ಅವರ ಮನೆಯಿಂದಲೇ ಅಪವ್ಯಸನಗಳು ಕಂಡುಬಂದಿವೆ. 9 ಬಜೆಟ್ಟುಗಳನ್ನು ಮಂಡಿಸಿ, ಸೈ ಎನಿಸಿಕೊಂಡಿರುವ ಸಿದ್ದರಾಮಯ್ಯನವರು ತಮ್ಮ ಅಧಿಕೃತ ನಿವಾಸವನ್ನು ಚೊಕ್ಕಟಗೊಳಿಸುವ ಭರದಲ್ಲಿ ಒಂದಷ್ಟು ಆರ್ಥಿಕ ಅಶಿಸ್ತಿಗೆ ನೀರೆರೆದಿದ್ದಾರೆ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದು ಇನ್ನೂ 8 ತಿಂಗಳು ಕಳೆದಿಲ್ಲ, ಅದಾಗಲೇ ಸಾಹೇಬರು ತಮ್ಮ ಅಧಿಕೃತ ನಿವಾಸದ ನವೀಕರಣಕ್ಕಾಗಿ 2.22 ಕೋಟಿ ರೂ ಸುರಿದಿದ್ದಾರೆ. ಗಮನಿಸಿ, ಇದು ಜನರ ದುಡ್ಡು. ಅವರ ಜೇಬಿನಿಂದ ತೆಗೆದುಕೊಟ್ಟ ಹಣವಲ್ಲ.
ಜೆಡಿಎಸ್ ಪಕ್ಷದ ಶಾಸಕ ಕೆ ಗೋಪಾಲಯ್ಯ ಅವರು ಈ ಸಂಬಂಧ ಕೇಳಿದ ಪ್ರಶ್ನೆಗೆ ಲೋಕೋಪಯೋಗಿ ಸಚಿವ, ಸಿದ್ದರಾಮಯ್ಯನವರ ಪರಮಾಪ್ತ ಡಾ. ಎಚ್ ಸಿ ಮಹದೇವಪ್ಪ ಅವರೇ ವಿಧಾನಸಭೆಗೆ ನಿನ್ನೆ ಶುಕ್ರವಾರ ಈ ವಿಷಯ ತಿಳಿಸಿದ್ದಾರೆ.
ಇದು ಸಿದ್ದರಾಮಯ್ಯ ಅವರೊಬ್ಬರಿಗೇ ಸೀಮಿತವಾಗಿಲ್ಲ. ಅವರ ಸಂಪುಟದ 15 ಸಹೋದ್ಯೋಗಿಗಳು ಇಂತಹ ದುಂದುವೆಚ್ಚಕ್ಕೆ ಕೈಹಾಕಿದ್ದಾರೆ. ಹಿರಿಯರಾದ ಎಚ್ ಕೆ ಪಾಟೀಲ್, ದೇಶಪಾಂಡೆ, ಖಮರುಲ್ ಇಸ್ಲಾಂ ಸೇರಿದಂತೆ ಅನೇಕ ಸಚಿವರು ಈ ಆರೆಂಟು ತಿಂಗಳಲ್ಲಿ ಅದಾಗಲೇ 4.5 ಕೋಟಿ ರೂ ಖರ್ಚು ಮಾಡಿದ್ದಾರೆ.
ಹೊಸದಾಗಿ ಸಚಿವರಾದವರು 10 ಲಕ್ಷ ರೂ ಖರ್ಚು ಮಾಡಬಹುದು. ಅದಕ್ಕಿಂತ ಹೆಚ್ಚು ಖರ್ಚು ಮಾಡಬೇಕಾದರೆ ಮುಖ್ಯಮಂತ್ರಿಗಳ ಅನುಮತಿ ಪಡೆಯಬೇಕಾಗುತ್ತದೆ. ಆದರೆ ಈ ಸಚಿವ ಮಹಾಶಯರುಗಳೆಲ್ಲಾ 10 ಲಕ್ಷ ರೂ. ಗಿಂತ ಹೆಚ್ಚು ಖರ್ಚು ಮಾಡಿರುವವರೇ.
ಅಂದರೆ ಇವರಿಗೆಲ್ಲಾ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಥಾಸ್ತು ಅಂದಿದ್ದಾರೆ. ಸ್ವತಃ ತಮ್ಮ ಮನೆಗೇ 2.22 ಕೋಟಿ ರೂ ವೆಚ್ಚ ಮಾಡಿರುವಾಗ ತಮ್ಮ ಸಹೋದ್ಯೋಗಿಗಳ ಮನೆ ನವೀಕರಣಕ್ಕೆ ಕಾಸು ಕೊಡೋಲ್ಲ ಅನ್ನುತ್ತಾರಾ ಅವರು. ಹಾಗಾಗಿ ಧಾರಾಳ ಖರ್ಚಿಗೆ ಅಸ್ತು ಅಂದಿದ್ದಾರೆ.
ಅಂದಹಾಗೆ ಸಿದ್ದರಾಮಯ್ಯ ಅವರಾಗಲಿ ಅವರ ಸಹೋದ್ಯೋಗಿಗಳಾಗಲಿ ನವೀಕರಣದ ಖರ್ಚು ಬಾಬತ್ತನ್ನು ಇನ್ನೂ ಚುಕ್ತಾ ಮಾಡಿಲ್ಲ. ಹಾಗಾಗಿ ಮುಂದೆ, ತಮ್ಮದೇ ಜೇಬಿಂದ ಹಣ ನೀಡಿ ಖರ್ಚು ಮಾಡಿಸಿಕೊಂಡಿದ್ದೇವೆ ಎಂದು ಹೇಳಿ ಅಪವಾದದಿಂದ ಇವರುಗಳೆಲ್ಲಾ ತಪ್ಪಿಸಿಕೊಳ್ಳಲು ಯತ್ನಿಸಬಹುದು. ಆದರೆ ಸರಕಾರಿ ಆಸ್ತಿಯನ್ನು ಹಾಗೆಲ್ಲಾ ನವೀಕರಣ ಮಾಡಲು ಖಾಸಗಿ ಹಣ ನೀಡುವಂತಿಲ್ಲ. ಆ ದುಡ್ಡು ಸರಕಾರದ್ದೇ ಆಗಬೇಕು. ಮತ್ತು ಜನರ ತೆರಿಗೆ ಹಣದಿಂದ ತುಂಬಿದ ಖಜಾನೆಯಿಂದಲೇ ಆ ಹಣವನ್ನು ವಿನಿಯೋಗಿಸಬೇಕು.












Click it and Unblock the Notifications