ಮೂರನೇ ಬಾರಿ ಪ್ರಧಾನಿಯಾಗಲು ಹೊರಟ ಮೋದಿಯವರೇ...! ಸಿಎಂ ಸಿದ್ದರಾಮಯ್ಯ ಟ್ವೀಟ್
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಲ್‌ಪಿಜಿ ಸಿಲಿಂಡರ್ ಬೆಲೆ ಕಡಿಮೆ ಮಾಡಿದ ಪ್ರಧಾನಿ ಮೋದಿಯವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಈ ಘೋಷಣೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಅನೇಕ ಪ್ರಶ್ನೆಗಳನ್ನು ಪ್ರಧಾನಿ ಮೋದಿ ಮುಂದಿಟ್ಟಿದ್ದು ಉತ್ತರ ಕೊಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಜನಪರ ಯೋಜನೆಗಳನ್ನು ಜಾರಿಗೆ ತಂದರೆ ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

"ಕೊನೆಗೂ ನಮ್ಮ ಗ್ಯಾರಂಟಿ ಯೋಜನೆಗಳಿಂದ ಪ್ರೇರಣೆ ಪಡೆದು ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು 200 ರೂಪಾಯಿ ಕಡಿಮೆ ಮಾಡಿರುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಜ್ಯದ ಸಮಸ್ತ ಜನತೆಯ ಪರವಾಗಿ ಧನ್ಯವಾದಗಳು. ಕಾಂಗ್ರೆಸ್‌ನ ಜನಪರವಾದ ಯೋಜನೆಗಳಿಂದ ಪ್ರೇರಿತರಾಗಿ ಜಾರಿಗೆ ತರುವ ಎಲ್ಲ ಯೋಜನೆಗಳನ್ನು ನಾನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇನೆ." ಎಂದು ಹೇಳಿದ್ದಾರೆ.
ನುಡಿದಂತೆ ನಡೆಯುವ ಬದ್ಧತೆ ಇರಲಿ
ಚುನಾವಣಾ ಪೂರ್ವದಲ್ಲಿ ನಾವು ಪ್ರಣಾಳಿಕೆ ಮೂಲಕ ನೀಡಿದ ಭರವಸೆಗಳಲ್ಲಿ ಪ್ರಮುಖವಾದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನ್ನು ನೂರು ದಿನಗಳೊಳಗೆ ಅನುಷ್ಠಾನಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ. ನುಡಿದಂತೆ ನಡೆಯುವ ನಮ್ಮ ಬದ್ಧತೆ ನಿಮಗೂ ಪ್ರೇರಣೆಯಾಗಲಿ, ಅದರಿಂದ ಜನರಿಗೆ ಒಳ್ಳೆಯದಾಗಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.
2013ರ ವಿಧಾನಸಭಾ ಚುನಾವಣೆಯ ಕಾಲದಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದ ಜನತಗೆ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಹಿಂದಿನ ನಮ್ಮ ಸರ್ಕಾರ ಈಡೇರಿಸಿದ್ದು, ಅದರ ಬಗೆಗಿನ ವಿವರವಾದ ಅಧಿಕೃತ ಮಾಹಿತಿಯನ್ನು ರಾಜ್ಯದ ಜನರ ಮುಂದಿಟ್ಟಿದ್ದೇವೆ. ಈ ನಮ್ಮ ಬದ್ಧತೆ ಕೂಡಾ ನಿಮಗೆ ಪ್ರೇರಣೆ ನೀಡಲಿ ಎಂದು ಹೇಳಿದ್ದಾರೆ.
ದೇಶದ ಜನತೆಗೆ ಲೆಕ್ಕ ಕೊಡಿ
2014 ಮತ್ತು 2018ರ ಲೋಕಸಭಾ ಚುನಾವಣಾ ಪೂರ್ವದಲ್ಲಿ ಭಾರತೀಯ ಜನತಾ ಪಕ್ಷ ಬಿಡುಗಡೆಗೊಳಿಸಿರುವ ಎರಡು ಪ್ರಣಾಳಿಕೆಗಳು ನನ್ನ ಮುಂದಿದೆ. ಮೂರನೇ ಬಾರಿ ಪ್ರಧಾನ ಮಂತ್ರಿಯಾಗಲು ಹೊರಟಿರುವ ನರೇಂದ್ರ ಮೋದಿ ಅವರೇ, ಕಳೆದ ಎರಡು ಚುನಾವಣೆಗಳಲ್ಲಿ ನೀಡಿರುವ ಎಷ್ಟು ಭರವಸೆಗಳನ್ನು ಈಡೇರಿಸಲಾಗಿದೆ ಎನ್ನುವ ಲೆಕ್ಕವನ್ನು ದೇಶದ ಜನತೆಗೆ ಕೊಡಿ ಎಂದು ಮನವಿ ಮಾಡಿದ್ದಾರೆ.
ಕೆಂದ್ರ ಸರ್ಕಾರವು ಬಹಳಷ್ಟು ಮೀನಮೇಷ ಎಣಿಸಿ ಎಲ್‌ಪಿಜಿ ಸಿಲಿಂಡರ್ ಬೆಲೆಯನ್ನು ರೂ.200 ಕಡಿಮೆ ಮಾಡಿದೆ. ಮೇಲುನೋಟಕ್ಕೆ ಇದರಲ್ಲಿ ಕೇಂದ್ರದ ಪಾಲು ಏನೂ ಇಲ್ಲ ಎನ್ನುವುದು ಸ್ಪಷ್ಟವಾಗಿದೆ. 'ಕಾರ್ಪೊರೆಟ್ ಹೊಣೆಗಾರಿಕೆ'ಯ ರೀತಿ ತೈಲ ಕಂಪೆನಿಗಳೇ ಈ ವೆಚ್ಚವನ್ನು ಭರಿಸಲಿವೆ ಎಂದು ನಿಮ್ಮದೇ ಮಂತ್ರಿಮಂಡಲದ ಸಚಿವರು ಹೇಳುವ ಮೂಲಕ ಅದನ್ನು ಒಪ್ಪಿಕೊಂಡಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
500-600 ರೂಪಾಯಿ ಕಡಿಮೆ ಮಾಡಬೇಕು!
ಅಡುಗೆ ಅನಿಲ ದರ ನಿಗದಿಗೆ ಆಧಾರವಾದ ಅಂತಾರಾಷ್ಟ್ರೀಯ ಮಾರುಕಟ್ಟೆಯ 'ಸೌದಿ ಸಿಪಿ' ದರ ಪ್ರತಿ ಟನ್‌ಗೆ ಈ ಆರ್ಥಿಕ ವರ್ಷಾರಂಭದಲ್ಲಿ 732 ಡಾಲರ್ ಇದ್ದದ್ದು, ಈಗ 385 ಡಾಲರ್‌ಗೆ ಕುಸಿದಿದೆ. ಅಂದರೆ ಶೇ.48ರಷ್ಟು ಇಳಿಕೆಯಾಗಿದೆ. ಸಿಲಿಂಡರ್ ದರವೂ ಹೆಚ್ಚು ಕಡಿಮೆ ಅರ್ಧದಷ್ಟು ಇಳಿಕೆ ಮಾಡಬೇಕಿತ್ತಲ್ಲವೇ? ಆದರೆ, ಕೇಂದ್ರ ಸರ್ಕಾರ ಇಳಿಕೆ ಮಾಡಿರುವುದು ಪ್ರತಿ ಸಿಲಿಂಡರ್‌ಗೆ ರೂ. 200 ಮಾತ್ರ ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಜನರ ಮೇಲಿನ ಬೆಲೆ ಏರಿಕೆಯ ಹೊರೆ ಇಳಿಸುವ ಪ್ರಾಮಾಣಿಕ ಉದ್ದೇಶ ಕೇಂದ್ರ ಸರ್ಕಾರ ಹೊಂದಿದ್ದರೆ ಪ್ರತಿ ಸಿಲಿಂಡರ್‌ನ ಬೆಲೆಯನ್ನು ಕನಿಷ್ಠ ರೂ.500-600ರಷ್ಟು ಇಳಿಸಬೇಕಾಗಿದೆ. ಇದೇ ರೀತಿ ಡೀಸೆಲ್-ಪೆಟ್ರೋಲ್ ಬೆಲೆಯನ್ನು ರೂ.60-70ಕ್ಕೆ ಇಳಿಸಬೇಕಾಗುತ್ತದೆ. ಇಲ್ಲದಿದ್ದರೆ ಇದನ್ನು ಕಣ್ಣೊರೆಸುವ ತಂತ್ರ, ಚುನಾವಣಾ ಗಿಮಿಕ್ ಎಂದು ಹೇಳಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಾಗತಿಕವಾಗಿ ಅನಿಲ ಬೆಲೆಯಲ್ಲಿ ಅಪಾರ ಇಳಿಕೆಯಾದಾಗಲೂ ಜನರ ಹಿತಾಸಕ್ತಿಯನ್ನು ರಕ್ಷಿಸದ ಕೇಂದ್ರ ಸರ್ಕಾರ ಬದಲಿಗೆ ತೈಲೋತ್ಪನ್ನ ಕಂಪೆನಿಗಳಿಗೆ ಅಪಾರ ಪ್ರಮಾಣದ ಲಾಭ ಮಾಡಿಕೊಳ್ಳಲು ಅವಕಾಶ ಕಲ್ಪಿಸಿತ್ತು. ಈಗಲೂ ಸಹ ಅನಿಲ ಬೆಲೆಯನ್ನು ಕೇವಲ ರೂ. 200 ಮಾತ್ರವೇ ಇಳಿಕೆ ಮಾಡಿ ತೈಲೋತ್ಪನ್ನ ಕಂಪೆನಿಗಳಿಗೆ ಲಾಭ ಮಾಡಿಕೊಳ್ಳಲು ಅವಕಾಶ ನೀಡಿದೆ. ಇದರಲ್ಲಿ, ಜನರ ಹಿತಾಸಕ್ತಿ ಎಲ್ಲಿ ಅಡಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.












Click it and Unblock the Notifications