Siddaramaiah: ರಾಜ್ಯದ 5605 ಜನರಿಗೆ ಉದ್ಯೋಗಾವಕಾಶ: ಗುಡ್ ನ್ಯೂಸ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಡಿಸೆಂಬರ್ 23 : ರಾಜ್ಯ ಉನ್ನತ ಮಟ್ಟದ ಒಪ್ಪಿಗೆ ನೀಡಿಕೆ ಸಮಿತಿಯ 64 ನೇ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿಗಳು, ಒಟ್ಟು 9823.31 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಿದ್ದು , ಸುಮಾರು 5605 ಜನರಿಗೆ ಉದ್ಯೋಗಾವಕಾಶ ಲಭ್ಯವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು(ಸೋಮವಾರ) ಗೃಹ ಕಚೇರಿ ಕೃಷ್ಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಇಂದಿನ ಸಭೆಯಲ್ಲಿ ಮೂರು ಹೊಸ/ ವಿಸ್ತರಣಾ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಹಾಗೂ ಆರು ಹೆಚ್ಚುವರಿ ಬಂಡವಾಳ ಹೂಡಿಕೆ ಪ್ರಸ್ತಾವನೆಗಳು ಸೇರಿದಂತೆ ಒಟ್ಟು 9 ಯೋಜನಾ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.

ಮೆ.ಡಿ.ಎನ್ ಸಲ್ಯೂಷನ್ಸ್ ಇಂಡಿಯಾ ಪ್ರೈ.ಲಿ ಸಂಸ್ಥೆಯ 998 ಕೋಟಿ ರೂ.ಗಳ ಹೊಸ ಬಂಡವಾಳ ಹೂಡಿಕೆಯ ಯೋಜನೆಯಿಂದ 467 ಉದ್ಯೋಗ , ಮೆ. ಸೈಲೆಕ್ಟ್ರಿಕ್ ಸೆಮಿಕಂಡಕ್ಟರ್ ಮ್ಯಾನುಫ್ಯಾಕ್ಷರಿಂಗ್ ಪ್ರೈ.ಲಿ ಸಂಸ್ಥೆ ಯ 3425.60 ಕೋಟಿ ರೂ. ಹೂಡಿಕೆಯಿಂದ 460 ಉದ್ಯೋಗ ಹಾಗೂ ಮೆ: ಸನ್ಸೆರಾ ಇಂಜಿನಿಯರಿಂಗ್ ಲಿಮಿಟೆಡ್ ಸಂಸ್ಥೆಯ 2150 ಕೋಟಿ ರೂ. ಹೂಡಿಕೆಯಿಂದ 3500 ಉದ್ಯೋಗ ಸೃಷ್ಠಿಯಾಗುತ್ತಿರುವುದಾಗಿ ತಿಳಿಸಿದರು.
ರಾಜ್ಯದ ವಿವಿಧ ಕೈಗಾರಿಕಾ ವಲಯಗಳಲ್ಲಿ ಒಟ್ಟು ರೂ. 9,823 ಕೋಟಿ ಮೊತ್ತದ 9 ಪ್ರಸ್ತಾವನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಕೋಚನಹಳ್ಳಿಯ ಎಲೆಕ್ಟ್ರಾನಿಕ್ಸ್ ಮ್ಯಾನುಫಾಕ್ಚರಿಂಗ್ ಕ್ಲಸ್ಟರ್ ನಲ್ಲಿ ಸೆಮಿಕಂಡಕ್ಟರ್ ವಲಯದಲ್ಲಿ ರೂ. 3425 ಕೋಟಿ ವೆಚ್ಚದ ಪ್ರಥಮ ಯೋಜನೆಗೆ ಸಭೆಯಲ್ಲಿ ಅನುಮೋದನೆ ನೀಡಲಾಯಿತು.
ಸಕ್ಕರೆ ಕಾರ್ಖಾನೆಗಳು ಉಪ ಉತ್ಪನ್ನಗಳ ಉತ್ಪಾದನೆ ಸಂದರ್ಭದಲ್ಲಿ ರೈತರಿಗೂ ಲಾಭಾಂಶದಲ್ಲಿ ಪಾಲು ನೀಡುವ ಕುರಿತು ಪರಿಶೀಲನೆ ನಡೆಸಬೇಕು. ಮಹಾರಾಷ್ಟ್ರ ಮತ್ತು ತಮಿಳುನಾಡಿನಲ್ಲಿ ಈ ಕುರಿತು ಅನುಸರಿಸುತ್ತಿರುವ ನಿಯಮಗಳನ್ನು ಪರಿಶೀಲಿಸಲು ಸೂಚನೆ ನೀಡಿದರು. ಕೆಐಎಡಿಬಿಯಿಂದ ಕೈಗಾರಿಕೆಗಳನ್ನು ಆರಂಭಿಸಲು ಜಮೀನು ಪಡೆಯುವ ಕಂಪೆನಿಗಳು ನಿಗದಿತ ಅವಧಿಯಲ್ಲಿ ಕೈಗಾರಿಕೆಯನ್ನು ಆರಂಭಿಸದಿದ್ದರೆ ದಂಡ ವಿಧಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವ ಕುರಿತು ಪರಿಶೀಲನೆ ನಡೆಸಬೇಕು. ಸರ್ಕಾರದ ನಿಯಮಾವಳಿಗೆ ಅನುಸಾರವಾಗಿ ಕೈಗಾರಿಕೆಗಳು ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಲು ಮುಖ್ಯಮಂತ್ರಿ ಮುಖ್ಯಮಂತ್ರಿ ಸೂಚಿಸಿದರು.
ಜನವರಿ 17ರಿಂದ 23ರವರೆಗೆ ಕರ್ನಾಟಕ ಕ್ರೀಡಾಕೂಟ-2025
ಕರ್ನಾಟಕ ಕ್ರೀಡಾಕೂಟ-2025 ಅನ್ನು ಮಂಗಳೂರು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆಯೋಜಿಸುತ್ತಿದ್ದು ವ್ಯವಸ್ಥಿತ ಏರ್ಪಾಡುಗಳನ್ನು ಮಾಡಲು ಮಂಗಳೂರು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು. ಕರ್ನಾಟಕ ಕ್ರೀಡಾಕೂಟ -2025 ವನ್ನು ಜನವರಿ 17ರಿಂದ 23ರವರೆಗೆ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಡಳಿತ ಸಹಯೋಗದಲ್ಲಿ ಆಯೋಜಿಸಲಾಗುತ್ತಿದೆ.
ಕ್ರೀಡಾಕೂಟದ ಉದ್ಘಾಟನಾ ಕಾರ್ಯಕ್ರಮ ಜನವರಿ 17ರಂದು ಮಂಗಳೂರಿನಲ್ಲಿ ನಡೆಯಲಿದ್ದು ಮುಖ್ಯಮಂತ್ರಿಗಳು ಭಾಗವಹಿಸಲಿದ್ದಾರೆ. ಸಮಾರೋಪ ಸಮಾರಂಭ ಉಡುಪಿ ಜಿಲ್ಲೆಯಲ್ಲಿ ನಡೆಯಲಿದ್ದು ಗೃಹ ಸಚಿವರು ಭಾಗಿಯಾಗಲಿದ್ದಾರೆ. ಸುಮಾರು 25 ವಿವಿಧ ಕ್ರೀಡೆಗಳಲ್ಲಿ ಸ್ಪರ್ಧೆಗಳನ್ನು ಆಯೋಜಿಸುತ್ತಿದ್ದು ಕ್ರೀಡಾಕೂಟವನ್ನು ವ್ಯವಸ್ಥಿತವಾಗಿ ಆಯೋಜಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಕ್ರೀಡಾಕೂಟದಲ್ಲಿ 3750 ಕ್ರೀಡಾಪಟುಗಳು ಹಾಗೂ 750 ತಾಂತ್ರಿಕ ಅಧಿಕಾರಿಗಳು ಮತ್ತು ಸಂಘಟಕರು ಸೇರಿದಂತೆ ಅಂದಾಜು 4500 ಜನರು ಭಾಗವಹಿಸಲಿದ್ದು ಊಟ -ತಿಂಡಿ,ವಸತಿ , ಸಾರಿಗೆ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸೂಚಿಸಿದರು. ಮಂಗಳೂರಿನಲ್ಲಿ 12 ಕ್ರೀಡೆಗಳು ಹಾಗೂ ಉಡುಪಿ ಮತ್ತು ಮಣಿಪಾಲಗಳಲ್ಲಿ 11 ಕ್ರೀಡೆಗಳು ಆಯೋಜನೆಗೊಳ್ಳಲ್ಲಿದ್ದು, ಶೂಟಿಂಗ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗುವುದು.












Click it and Unblock the Notifications