ಕಾಂಗ್ರೆಸ್ ಬಿಡುವ ಆತಂಕ: ಲಕ್ಷ್ಮಣ್ ಸವದಿಗೆ ಭರ್ಜರಿ ಗಿಫ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 12: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜ್ಯ ರಾಜಕಾರಣದಲ್ಲಿ ಮತ್ತೆ ಆಪರೇಷನ್ ಸದ್ದು ಜೋರಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ಕಂಡ ಕಾಂಗ್ರೆಸ್, ಲೋಕಸಭಾ ಚುನಾವಣೆ ಆಪರೇಷನ್ ಹಸ್ತದ ಮೂಲಕ ಬಿಜೆಪಿ ಹಾಗೂ ಜೆಡಿಎಸ್ ನ ಅಸಮಾಧಾನಿತ ನಾಯಕರಿಗೆ ಹಾಗೂ ಮಾಜಿ ಶಾಸಕರಿಗೆ ಗಾಳ ಹಾಕಿತ್ತು. ಆದರೆ, ಇದೀಗ ಬಿಜೆಪಿ ರಿವರ್ಸ್ ಆಪರೇಷನ್ ನಡೆಸಿದೆ.
ಹೌದು, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇದೀಗ ಮರಳಿ ಬಿಜೆಪಿ ಸೇರ್ಪಡೆಯಾಗಿದ್ದು, ಜಗದೀಶ್ ಶೆಟ್ಟರ್ ಘರ್ ವಾಪ್ಸಿಯಾದ ನಂತರ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸಹ ಬಿಜೆಪಿಗೆ ಹೋಗ್ತಾರೆ ಎಂಬ ಚರ್ಚೆಗಳು ರಾಜಕೀಯ ಅಂಗಳದಲ್ಲಿ ನಡೆಯುತ್ತಿವೆ.

ಬಿಜೆಪಿಗೆ ಲಕ್ಷ್ಮಣ್ ಸವದಿ ಅವರು ಮರು ಸೇರ್ಪಡೆಯಾಗುವುದನ್ನ ತಡೆಯುವ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಈಗಾಗಲೇ ಲಕ್ಷ್ಮಣ್ ಸವದಿ ಅವರ ಜೊತೆಗೆ ಸುದೀರ್ಘ ಚರ್ಚೆಯನ್ನ ನಡೆಸಿದ್ದಾರೆ.
ಸವದಿ ಅಸಮಾಧಾನ ಬೆನ್ನಲ್ಲೇ ಸವದಿ ತನ್ನಗಾಗಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅಲ್ಲದೇ ಲಕ್ಷ್ಮಣ ಸವದಿ ಕ್ಷೇತ್ರ ಅಥಣಿ ಮತಕ್ಷೇತ್ರಕ್ಕೆ ಭರಪೂರ ಅನುದಾನ ಸಿಕ್ಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಥಣಿ ಕ್ಷೇತ್ರಕ್ಕೆ ಭರ್ಜರಿ ಗಿಫ್ಟ್ ನೀಡಲಾಗಿದೆ.

ಲಕ್ಷ್ಮಣ್ ಸವದಿಯವರ ಅಥಣಿ ಕ್ಷೇತ್ರದ ಮಹತ್ತರ ಯೋಜನೆಯಾದ ಅಮ್ಮಾಜೇಶ್ವರಿ ಏತ ನೀರಾವರಿಗೆ ಸಿಎಂ ಸಿದ್ದರಾಮಯ್ಯ ಗ್ರೀನ್ ಸಿಗ್ನಲ್ ನೀಡಿದ್ದಾರೆ. 1486 ಕೋಟಿ ರೂಪಾಯಿ ವೆಚ್ಚದ ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅನುದಾನ ನೀಡಲಾಗಿದ್ದು, 11 ಹಳ್ಳಿಗಳ 9950 ಹೆಕ್ಟೇರ್ ಪ್ರದೇಶ ಹಾಗೂ 13 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದೆ.
ಅಮ್ಮಾಜೇಶ್ವರಿ ಏತ ನೀರಾವರಿ ಯೋಜನೆಗೆ ಅಂದಿನ ಬಿಜೆಪಿ ಸರ್ಕಾರದ ವೇಳೆ ಚುನಾವಣೆ ಸಂದರ್ಭದಲ್ಲಿ ಬಸವರಾಜ ಬೊಮ್ಮಾಯಿ ಅವರು ಚಾಲನೆ ನೀಡಿದ್ದರು. ಆದರೆ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಮಗಾರಿಯನ್ನ ಕೈ ಬಿಡಲಾಗಿತ್ತು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡನೇ ಹಂತದ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ಇದೇ ತಿಂಗಳು 18 ಅಥವಾ 19 ರಂದು ಕಾಮಗಾರಿಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.












Click it and Unblock the Notifications