ಬಾದಾಮಿ ಚಾಲುಕ್ಯ ಉತ್ಸವಕ್ಕೆ ₹1 ಕೋಟಿ ಹೆಚ್ಚುವರಿ ಅನುದಾನ: ಸಿಎಂ ಸಿದ್ದರಾಮಯ್ಯ ಘೋಷಣೆ
ಬಾಗಲಕೋಟೆ: ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪ, ಸಂಸ್ಕೃತಿ ಹಾಗೂ ಆಡಳಿತ ವೈಖರಿಯ ಮಹತ್ವವನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಆಯೋಜಿಸಲಾಗಿರುವ ಚಾಲುಕ್ಯ ಉತ್ಸವಕ್ಕೆ ರಾಜ್ಯ ಸರ್ಕಾರದಿಂದ ₹1 ಕೋಟಿ ಹೆಚ್ಚುವರಿ ಅನುದಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಬಾದಾಮಿಯ ಇಮ್ಮಡಿ ಪುಲಿಕೇಶಿ ವೇದಿಕೆಯಲ್ಲಿ ಬುಧವಾರ ಸಂಜೆ ನಡೆದ ಚಾಲುಕ್ಯ ಉತ್ಸವ-2026ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಈಗಾಗಲೇ ಬಜೆಟ್‌ನಲ್ಲಿ ಘೋಷಿಸಲಾದ ₹3 ಕೋಟಿ ಅನುದಾನಕ್ಕೆ ಹೆಚ್ಚುವರಿಯಾಗಿ ₹1 ಕೋಟಿ ನೀಡಲಾಗುವುದು ಎಂದು ತಿಳಿಸಿದರು. ಚಾಲುಕ್ಯರು ನಿರ್ಮಿಸಿದ ದೇಗುಲಗಳ ವಾಸ್ತುಶಿಲ್ಪದ ಮಹತ್ವವನ್ನು ಅರಿಯುವ ಹಾಗೂ ಬಾದಾಮಿ, ಐಹೊಳೆ, ಪಟ್ಟದಕಲ್ಲುಗಳ ವೈಭವವನ್ನು ಜಗತ್ತಿಗೆ ಪರಿಚಯಿಸುವ ಉದ್ದೇಶ ಈ ಉತ್ಸವಕ್ಕಿದೆ. ದೇಶ-ವಿದೇಶಗಳಿಂದ ಪ್ರವಾಸಿಗರು ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಚಾಲುಕ್ಯರ ಆಡಳಿತದಂತೆ ನಮ್ಮ ಸರ್ಕಾರವೂ ಸರ್ವಧರ್ಮ ಸಮನ್ವಯತೆಯನ್ನು ಪಾಲಿಸುತ್ತದೆ" ಎಂದರು.

ಬಾದಾಮಿಗೆ ₹2,000 ಕೋಟಿ ಅನುದಾನ
ತಮ್ಮ ಆಡಳಿತಾವಧಿಯಲ್ಲಿ ಬಾದಾಮಿ ಕ್ಷೇತ್ರಕ್ಕೆ ನೀಡಿರುವ ಅನುದಾನ ಕುರಿತು ವಿವರಿಸಿದ ಸಿದ್ದರಾಮಯ್ಯ, "ನಾನು ಮುಖ್ಯಮಂತ್ರಿ ಆಗಿರುವ ಈ ಎರಡು ವರ್ಷಗಳಲ್ಲಿ ಬಾದಾಮಿ ಕ್ಷೇತ್ರಕ್ಕೆ ಸುಮಾರು ₹2,000 ಕೋಟಿ ಅನುದಾನ ನೀಡಲಾಗಿದೆ. ಇದರಲ್ಲಿ ₹1,400 ಕೋಟಿ ಏತನೀರಾವರಿ ಯೋಜನೆ, ₹400 ಕೋಟಿ ಕುಡಿಯುವ ನೀರಿನ ಯೋಜನೆ, ₹50 ಕೋಟಿ ರಸ್ತೆ ಅಭಿವೃದ್ಧಿ ಯೋಜನೆ ಸೇರಿದಂತೆ ಹಲವು ಮಹತ್ವದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ನಮ್ಮ ಸರ್ಕಾರ ನುಡಿದಂತೆ ನಡೆಯುವ ಸರ್ಕಾರ" ಎಂದು ಹೇಳಿದರು.
ತಮ್ಮ ರಾಜಕೀಯ ಜೀವನದ ಸ್ಮರಣೆಯನ್ನು ಹಂಚಿಕೊಂಡ ಸಿಎಂ, "ನಾನು ಐದು ವರ್ಷಗಳ ಕಾಲ ಬಾದಾಮಿ ಕ್ಷೇತ್ರದ ಶಾಸಕನಾಗಿದ್ದೆ. 2018ರಲ್ಲಿ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾಗ, ಐದು ಬಾರಿ ಗೆದ್ದಿದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋತರೂ, ಬಾದಾಮಿ ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸಿದರು. ಇಲ್ಲಿನ ಜನರ ದೊಡ್ಡ ಮನಸ್ಸಿನಿಂದಲೇ ನಾನು ಮತ್ತೆ ವಿಧಾನಸಭೆಗೆ ಪ್ರವೇಶಿಸಿ, ಇಂದು ವರುಣಾ ಕ್ಷೇತ್ರದಿಂದ ಗೆದ್ದು ಮುಖ್ಯಮಂತ್ರಿ ಆಗಲು ಸಾಧ್ಯವಾಯಿತು. ಬಾದಾಮಿ ಜನರ ಉಪಕಾರವನ್ನು ನಾನು ಎಂದಿಗೂ ಮರೆಯುವುದಿಲ್ಲ" ಎಂದು ಭಾವುಕವಾಗಿ ಹೇಳಿದರು.
ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆ
ಬಾದಾಮಿ ಶಾಸಕನಾಗಿದ್ದ ಸಂದರ್ಭದಲ್ಲೇ ಚಾಲುಕ್ಯ ಉತ್ಸವ ಹಾಗೂ ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆ ಸಾಧ್ಯವಾಗದಿರುವುದು ನೋವಿನ ಸಂಗತಿ ಎಂದು ಹೇಳಿದ ಸಿಎಂ, "ಇಂದು ಭೀಮಸೇನಾ ಚಿಮ್ಮನಕಟ್ಟಿ ಅವರ ಒತ್ತಾಸೆಯಿಂದ ಇಮ್ಮಡಿ ಪುಲಕೇಶಿ ಪ್ರತಿಮೆ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ. ಪ್ರತಿಮೆ ಅನಾವರಣಕ್ಕೂ ಸರ್ಕಾರ ಸಂಪೂರ್ಣ ನೆರವು ನೀಡಲಿದೆ" ಎಂದು ಭರವಸೆ ನೀಡಿದರು. ಚಾಲುಕ್ಯ ಉತ್ಸವ ಹಾಗೂ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರ್ಕಾರದಿಂದಲೂ ನೆರವು ನೀಡುವುದಾಗಿ ಸಂಸದರು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ನಾಳೆಯೇ ಕೇಂದ್ರ ಸರ್ಕಾರಕ್ಕೆ ಮನವಿ ಪತ್ರ ನೀಡಲಾಗುವುದು. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಅನುದಾನವನ್ನು ಪಡೆಯಲು ಬಿಜೆಪಿ ಸಂಸದರು ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಆಗ್ರಹಿಸಿದರು.












Click it and Unblock the Notifications