ರಾಜ್ಯದಲ್ಲಿ ಬೈ ಎಲೆಕ್ಷನ್ ಬಿಸಿ; ಪುತ್ರನಿಗೆ ಟಿಕೆಟ್ ಕೊಡಿಸಲು ಇಬ್ರಾಹಿಂ ಲಾಬಿ.!
ಬೆಂಗಳೂರು,ಜುಲೈ 25: ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕದಲ್ಲಿ ಬೈ ಎಲೆಕ್ಷನ್ ಕಾವು ಜೋರಾಗಿದೆ. ಶಿಗ್ಗಾವಿಯ ಶಾಸಕರಾಗಿದ್ದ ಬಸವರಾಜ ಬೊಮ್ಮಾಯಿ ಅವರು ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದು, ತೆರವಾದ ಶಿಗ್ಗಾವಿ ಕ್ಷೇತ್ರದ ಬೈ ಎಲೆಕ್ಷನ್ ಗೆ ಭರ್ಜರಿ ಸಿದ್ದತೆ ನಡೆಯುತ್ತಿದೆ.
ಶಿಗ್ಗಾವಿ ಕ್ಷೇತ್ರಕ್ಕೆ ನಡೆಯುವ ಉಪಚುನಾವಣಾ ಟಿಕೆಟ್ ಗಾಗಿ ತೀವ್ರ ಫೈಪೋಟಿ ಹೆಚ್ಚಾಗಿದೆ. ಕಾಂಗ್ರೆಸ್ ಹಾಗೂ ಮೈತ್ರಿಯಲ್ಲಿ ಶಿಗ್ಗಾವಿ ಟಿಕೆಟ್ ಗಾಗಿ ಹತ್ತು ಹಲವು ಜನರು ರೇಸ್‌ನಲ್ಲಿದ್ದಾರೆ. ಇತ್ತ ಶಿಗ್ಗಾವಿ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ತಮ್ಮ ಪುತ್ರನಿಗೆ ಸ್ಪರ್ಧಿಸಲು ಟಿಕೆಟ್ ನೀಡಬೇಕು ಎಂದು ಮಾಜಿ ಕೇಂದ್ರ ಸಚಿವ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ನಾಯಕರ ಬಳಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ನಲ್ಲಿ ಸಿಎಂ ಇಬ್ರಾಹಿಂ ಹಲವು ಹಲವು ನಾಯಕರ ಜೊತೆಗೆ ಉತ್ತಮ ಸಂಬಂಧ ಹೊಂದಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರ ಆಪ್ತರಾಗಿದ್ದ ಸಿ.ಎಂ.ಇಬ್ರಾಹಿಂ, ವಿಧಾನಪರಿಷತ್ನಲ್ಲಿ ವಿರೋಧಪಕ್ಷದ ನಾಯಕನ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಅಸಮಾಧಾನಗೊಂಡಿದ್ದರು. ಪಕ್ಷ ಹಾಗೂ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡಿ ಮುಜುಗರ ಉಂಟು ಮಾಡಿದ್ದರು. ಅಲ್ಲದೇ ಕಾಂಗ್ರೆಸ್ ತೊರೆದು ಜೆಡಿಎಸ್ ಪಕ್ಷ ಸೇರ್ಪಡೆಯಾಗಿದ್ದರು.
ಕಾಂಗ್ರೆಸ್ ತೊರೆದು ಜೆಡಿಎಸ್ ಸೇರ್ಪಡೆಯಾಗಿದ್ದ ಸಿ ಎಂ ಇಬ್ರಾಹಿಂ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದರು. ಜೆಡಿಎಸ್ ಬಿಜೆಪಿ ಜೊತೆಗೆ ಮೈತ್ರಿಯಾದ ಬಳಿಕ ಅಸಮಾಧಾನಗೊಂಡಿದ್ದರು. ಇದೀಗ ಜೆಡಿಎಸ್ ನಿಂದ ಹೊರ ಬಂದ ಸಿ.ಎಂ.ಇಬ್ರಾಹಿಂ ರಾಜಕೀಯವಾಗಿ ಅತಂತ್ರ ಸ್ಥಿತಿಯಲ್ಲಿದ್ದಾರೆ. ಇದೀಗ ಕಾಂಗ್ರೆಸ್ ಸೇರ್ಪಡೆಯಾಗದೇ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಆದರೆ, ಸಿ ಎಂ ಇಬ್ರಾಹಿಂ ಪುತ್ರ ಕಾಂಗ್ರೆಸ್ ಸೇರ್ಪಡೆಯಾಗಿದ್ದು, ಮಗನ ರಾಜಕೀಯ ಭವಿಷ್ಯಕ್ಕಾಗಿ ಹಿರಿಯ ಕಾಂಗ್ರೆಸ್ ನಾಯಕರನ್ನ ಸಂಪರ್ಕಿದ್ದಾರೆ.
ಹಿರಿಯ ನಾಯಕ ಸಿಎಂ ಇಬ್ರಾಹಿಂ ಅವರು ತಮ್ಮ ಪುತ್ರ ಫಯಾಜ್ ಅವರಿಗೆ ಟಿಕೆಟ್ ಕೊಡಿಸುವ ಸಲುವಾಗಿ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದು, ಶಿಗ್ಗಾವಿ ವಿಧಾನಸಭಾ ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಸಿ.ಎಂ.ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಒತ್ತಡ ಹೇರಿದ್ದಾರೆ ಎಂದು ಹೇಳಲಾಗಿದೆ.
ಇತ್ತೀಚೆಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ ಆಯ್ಕೆಯಾದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಶಿಗ್ಗಾವಿ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ನಡೆಯಬೇಕಿದೆ.
2023 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಯಾಸಿರ್ ಅಹಮದ್ಖಾನ್ ಪಠಾಣ್ ಸ್ಪರ್ಧೆ ಮಾಡಿದ್ದರು. ಹೀಗಾಗಿ ಈ ಬಾರಿ ಪುತ್ರಿಗೆ ಕಾಂಗ್ರೆಸ್ ಟಿಕೆಟ್ ಕೊಡಿಸುವ ಸಲುವಾಗಿ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಶಿಗ್ಗಾವಿ ಕ್ಷೇತ್ರವನ್ನು ಅಲ್ಪಸಂಖ್ಯಾತರ ವರ್ಗಕ್ಕೆ ಮೀಸಲಿಡುತ್ತಾ ಬಂದಿದೆ. ಹೀಗಾಗಿ ಸಿ.ಎಂ.ಇಬ್ರಾಹಿಂ ತಮ್ಮ ಪುತ್ರನಿಗೆ ಅವಕಾಶ ಕೊಡಿಸಲು ಪ್ರಯತ್ನ ನಡೆಸುತ್ತಿದ್ದಾರೆ.












Click it and Unblock the Notifications