ಕುರ್ಚಿ ಕದನಕ್ಕೆ ವಿರಾಮ ಘೋಷಿಸಿದ ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್: ಡಿ ಕೆ ಸುರೇಶ್ ರಿಯಾಕ್ಷನ್
ದೆಹಲಿ, ನವೆಂಬರ್ 29: ಕಾಂಗ್ರೆಸ್ ಹೈಕಮಾಂಡ್ ಸೂಚನೆ ಮೇರೆಗೆ ಇಂದು ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಬ್ರೇಕ್ ಫಾಸ್ಟ್ ಮೀಟಿಂಗ್ ಮಾಡಿದ್ದು, ಜಂಟಿ ಸುದ್ದಿಗೋಷ್ಠಿ ನಡೆಸುವ ಮೂಲಕ ಕುರ್ಚಿ ಕದನಕ್ಕೆ ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಕದನ ವಿರಾಮ ಘೋಷಿಸಿದ್ದು, ಈ ಬಗ್ಗೆ ಬಮುಲ್ ಅಧ್ಯಕ್ಷ ಡಿ ಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಸುರೇಶ್ ಅವರು ಮಾತನಾಡಿ, ಸಿಎಂ, ಡಿಸಿಎಂ ಎಲ್ಲಾ ಗೊಂದಲಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ, ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ. ಇನ್ನೂ ಹೆಚ್ಚಿನದ್ದೇನಾದರೂ ಇದ್ದರೇ ಅದನ್ನು ವರಿಷ್ಠರು ಬಗೆಹರಿಸುತ್ತಾರೆ. ಈ ಬಗ್ಗೆ ಇಬ್ಬರು ನಾಯಕರು ಈಗಾಗಲೇ ಸ್ಪಷ್ಟನೆ ನೀಡಿರುವಾಗ ಹೆಚ್ಚಿನ ವ್ಯಾಖ್ಯಾನಗಳು ಬೇಡ. ಶಿವಕುಮಾರ್ ಅವರ ಮಾತು ಒಂದೇ, 140 ಶಾಸಕರು ನಮ್ಮವರೇ. ಅವರು ಪಕ್ಷದ ರಾಜ್ಯ ಅಧ್ಯಕ್ಷ ಎಂದು ಈ ಹಿಂದೆ ಹೇಳಿದ್ದಾರೆ, ಇಂದು, ನಾಳೆಯೂ ಹೇಳುತ್ತಾರೆ ಎಂದರು.

ಸಿಎಂ- ಡಿಸಿಎಂ ಒಟ್ಟಾಗಿ ಪಕ್ಷ ಕಟ್ಟುತ್ತೇವೆ, ನಮ್ಮ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಉಪಹಾರ ಸಭೆಯ ನಂತರ ಹೇಳಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದು, ಇದು ಅವರ ಕರ್ತವ್ಯ ಕೂಡ. ರಾಜ್ಯದ ಜನರಿಗೆ ಕೊಟ್ಟ ಮಾತನ್ನು ಮುಖ್ಯಮಂತ್ರಿಯವರು ಹಾಗೂ ಉಪಮುಖ್ಯಮಂತ್ರಿಯವರು ಉಳಿಸಿಕೊಳ್ಳುತ್ತಾರೆ ಎನ್ನುವ ನಂಬಿಕೆ ನನಗಿದೆ ಎಂದು ಹೇಳಿದರು.
ಸಿಎಂ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಎಂದು ಹಿಂದೆ ನೀಡಿದ ಹೇಳಿಕೆ ಬಗ್ಗೆ ಕೇಳಿದಾಗ, ನಾನು ಆ ರೀತಿಯ ಹೇಳಿಕೆ ನೀಡಿಲ್ಲ. ನಾನು ಹೇಳಿದ್ದು ಬೇರೆ, ರೀತಿ ಅದನ್ನು ನೀವು (ಮಾಧ್ಯಮದವರು) ತಿರುಚಿದ್ದೀರಿ. ಆದರೂ ಸಿಎಂ ಮತ್ತು ಡಿಸಿಎಂ ಇಬ್ಬರೂ ಇಂದು ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಕಾರಣಕ್ಕೆ ಇದನ್ನು ಮತ್ತೆ ಚರ್ಚೆ ಮಾಡುವ ಅವಶ್ಯಕತೆ ಇಲ್ಲ ಎಂದರು. ಇಬ್ಬರು ನಾಯಕರು ಖುದ್ದಾಗಿ ಮಾಧ್ಯಮಗಳ ಮುಂದೆಯೇ ಮಾತನಾಡಿದ್ದಾರೆ. ಈಗ ಮತ್ತೊಬ್ಬರು ಮಾತನಾಡುವುದರಿಂದ ಹೆಚ್ಚಿನ ಅರ್ಥ ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ಸೋನಿಯಾಗಾಂಧಿ ಅವರ ತ್ಯಾಗದ ಬಗ್ಗೆ ಸಿಎಂ ಸಮ್ಮುಖದಲ್ಲೇ ಶಿವಕುಮಾರ್ ಅವರು ಹೇಳಿದ ಕುರಿತು ಮಾತನಾಡಿ, ಡಿಸಿಎಂ ಅವರು, ನೆಹರು ಅವರ ಕುಟುಂಬದ ತ್ಯಾಗ, ಬಲಿದಾನದ ಬಗ್ಗೆ ಯಾವಾಗಲೂ ಹೇಳುತ್ತಿರುತ್ತಾರೆ. ಈ ಸಂದರ್ಭದಲ್ಲಿ ಮಾತ್ರವಲ್ಲ, ಸೋನಿಯಾ ಗಾಂಧಿಯವರ ತ್ಯಾಗದ ಬಗ್ಗೆ ಹೃದಯದಿಂದ ತಿಳಿಸುವ ಕೆಲಸವನ್ನು ಕಾರ್ಯಕರ್ತರಿಗೆ, ಮುಖಂಡರಿಗೆ ಈ ಹಿಂದೆಯೂ ಮಾಡಿದ್ದಾರೆ. ಇದೇನು ಹೊಸದಲ್ಲ ಎಂದು ಹೇಳಿದರು.
ಉಪಹಾರ ಭೇಟಿ ತಾತ್ಕಾಲಿಕ ಕದನ ವಿರಾಮವೇ? ವಿಧಾನಸಭಾ ಅಧಿವೇಶನದ ತನಕ ಒಗ್ಗಟ್ಟಾಗಿ ನಡೆಯುತ್ತೇವೆ ಎಂದು ಮುಖ್ಯಮಂತ್ರಿಯವರು ಹೇಳಿದ್ದಾರಲ್ಲ ಎಂದು ಕೇಳಿದಾಗ, ಅವರು ಏನು ಹೇಳಿದ್ದಾರೋ, ಮಾಧ್ಯಮದವರು ಯಾವ ರೀತಿ ವ್ಯಾಖ್ಯಾನ ಮಾಡಿದ್ದಿರೋ ಗೊತ್ತಿಲ್ಲ. ಅವರ ಹೇಳಿಕೆ, ನಿಮ್ಮ ವ್ಯಾಖ್ಯಾನ ನೋಡಿ ಆನಂತರ ಮಾತನಾಡುತ್ತೇನೆ ಎಂದರು. ಹೈಕಮಾಂಡ್ ನವರು ಪ್ರತಿದಿನ ಸಭೆ ಸೇರುತ್ತಿರುತ್ತಾರೆ. ರಾಷ್ಟ್ರಮಟ್ಟದ ವಿಚಾರ, ಸಂಘಟನೆ, ರಾಜ್ಯಗಳ ವಿಚಾರಗಳ ಬಗ್ಗೆ ಚರ್ಚೆ ನಡೆಸುತ್ತಲೇ ಇರುತ್ತಾರೆ. ಲೋಕಸಭಾ ಅಧಿವೇಶನ ಸೋಮವಾರದಿಂದ ಪ್ರಾರಂಭ ಆಗುತ್ತಿರುವುದರಿಂದ ಆಡಳಿತ ಪಕ್ಷದ ವೈಫಲ್ಯಗಳನ್ನು ಎತ್ತಿಹಿಡಿಯಲು ಸಭೆ ಸೇರಬೇಕಾಗುತ್ತದೆ. ಚರ್ಚೆ ನಡೆಸಬೇಕಾದ ವಿಚಾರಗಳ ಬಗ್ಗೆ ತಿಳಿಸಬೇಕಾಗುತ್ತದೆ. ಈ ನಿಟ್ಟಿನಲ್ಲಿ ಹೈಕಮಾಂಡ್ ಸಭೆ ಸಹಜ ಎಂದು ಹೇಳಿದರು.
ದೆಹಲಿ ಭೇಟಿಯ ಬಗ್ಗೆ ಕೇಳಿದಾಗ, "ಸಂಜೆ ಖಾಸಗಿ ಕಾರ್ಯಕ್ರಮವಿದ್ದು, ನಮ್ಮ ಸ್ನೇಹಿತರು ಅದಕ್ಕೆ ಆಹ್ವಾನಿಸಿದ್ದಾರೆ. ಆದ ಕಾರಣಕ್ಕೆ ದೆಹಲಿಗೆ ಬಂದಿದ್ದೇನೆ. ಇದರ ನಡುವೆ ಪಕ್ಷದ ವರಿಷ್ಠರು ಅವಕಾಶ ನೀಡಿದರೆ ಭೇಟಿ ಮಾಡುತ್ತೇನೆ. ನಾನು ಇನ್ನೂ ಭೇಟಿಗೆ ಸಮಯ ಕೇಳಿಲ್ಲ. ವರಿಷ್ಠರು ಯಾರು ಲಭ್ಯವಿದ್ದಾರೆ ಎಂದು ಗೊತ್ತಿಲ್ಲ. ವಾರಾಂತ್ಯವಾದ ಕಾರಣಕ್ಕೆ ಯಾರೂ ಭೇಟಿಗೆ ಸಿಗುವುದಿಲ್ಲ ಎಂದುಕೊಂಡಿರುವೆ. ಸಿಕ್ಕಿದರೆ ಭೇಟಿ ಮಾಡಿ ಆನಂತರ ಮಾಧ್ಯಮಗಳಿಗೆ ಮಾಹಿತಿ ನೀಡುತ್ತೇನೆ ಎಂದು ತಿಳಿಸಿದರು.












Click it and Unblock the Notifications