ಬಂಡೆ ತಲೆಗೆ ಬಿದ್ದ ಬುಲೆಟ್ ಪೊಲೀಸರಿಗೆ ಸಿಕ್ಕಿಲ್ಲ
ಬೆಂಗಳೂರು, ಜ.29 : ಗುಲ್ಬರ್ಗಾದಲ್ಲಿ ಸುಪಾರಿ ಕಿಲ್ಲರ್ ಮುನ್ನ ಜೊತೆಗಿನ ಗುಂಡಿನ ಕಾಳಗದಲ್ಲಿ ಗಾಯಗೊಂಡು, ಹೈದರಾಬಾದ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಪಿಎಸ್ಐ ಮಲ್ಲಿಕಾರ್ಜುನ ಬಂಡೆ ಸಾವಿನ ಕುರಿತ ತನಿಖೆಯ ಮಧ್ಯಂತರ ವರದಿಯನ್ನು ಸಿಐಡಿ ಬುಧವಾರ ಸರ್ಕಾರಕ್ಕೆ ಸಲ್ಲಿಸಿದೆ.
ಬುಧವಾರ ಸಿಐಡಿ ಮುಖ್ಯಸ್ಥ ಬಿಪಿನ್ ಗೋಪಾಲಕೃಷ್ಣ ಅವರು, ಕಳೆದ ಒಂದು ವಾರದಿಂದ ಬಂಡೆ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಕಲೆ ಹಾಕಿರುವ ಪ್ರಾಥಮಿಕ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಇದು ಕೇವಲ ನಾಲ್ಕು ಪುಟದ ಮಧ್ಯಂತರ ವರದಿಯಾಗಿದ್ದು, ತನಿಖೆ ಪ್ರಗತಿಯಲ್ಲಿದೆ. [ಮಣ್ಣಲ್ಲಿ ಮಣ್ಣಾದ ಬಂಡೆ]
ವರದಿ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಿಪಿನ್ ಗೋಪಾಲಕೃಷ್ಣ, ಬಂಡೆ ಪ್ರಕರಣದ ತನಿಖೆಗೆ ಸರ್ಕಾರ ಗಡುವು ನೀಡಿಲ್ಲ. ಸದ್ಯ, ನಾಲ್ಕು ಪುಟಗಳ ಪ್ರಾಥಮಿಕ ವರದಿಯನ್ನು ಮಾತ್ರ ಸರ್ಕಾರಕ್ಕೆ ಸಲ್ಲಿಸಲಾಗುತ್ತದೆ. ಶೂಟೌಟ್ ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಹೇಳಿದರು.
ತನಿಖಾಧಿಕಾರಿಗಳಿಗೆ ಇನ್ನು ಮಲ್ಲಿಕಾರ್ಜುನ್ ಬಂಡೆ ತಲೆಗೆ ಬಿದ್ದ ಬುಲೆಟ್ ಸಿಕ್ಕಿಲ್ಲ. ಅಲ್ಲದೆ ಬಂಡೆಗೆ ಬಿದ್ದ ಬುಲೆಟ್ ಯಾರದ್ದೆಂದು ತಿಳಿದಿಲ್ಲ ಎಂದು ಹೇಳಿದ್ದಾರೆ. ಬಂಡೆ ಅವರಿಗೆ ಚಿಕಿತ್ಸೆ ನೀಡಿದ ಹೈದರಾಬಾದ್ ಆಸ್ಪತ್ರೆಯ ವೈದ್ಯರ ಹೇಳಿಕೆ, ಐಜಿಪಿ ವಜೀರ್ ಅಹ್ಮದ್ ಅವರ ವಿಚಾರಣೆ ಮತ್ತು ಗುಲ್ಬರ್ಗ ಸಾರ್ವಜನಿಕರ ವಿಚಾರಣೆ ನಡೆಯಬೇಕಿದೆ ಎಂದರು.
ಬಂಡೆ ಸಾವಿನ ಕುರಿತಾದ ವಿಧಿ ವಿಜ್ಞಾನ ಪರೀಕ್ಷಾ ವರದಿ ಇನ್ನೂ ಸಿಐಡಿ ಕೈ ಸೇರಿಲ್ಲ. ಗುಲ್ಬರ್ಗದಲ್ಲಿ ಶೂಟೌಟ್ ನಡೆದಾಗ ಸ್ಥಳದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಇದ್ದರು. ಆದ್ದರಿಂದ ಪ್ರತ್ಯಕ್ಷದರ್ಶಿಗಳ ವಿಚಾರಣೆ ನಡೆಯಬೇಕಾಗಿದೆ ಎಂದು ಗೋಪಾಲಕೃಷ್ಣ ಮಾಹಿತಿ ನೀಡಿದರು. ಎಲ್ಲಾ ವಿಚಾರಣೆಗಳು ಪೂರ್ಣಗೊಂಡು ಪ್ರಕರಣದ ಸಂಪೂರ್ಣ ವರದಿ ಸಲ್ಲಿಸಲು ಒಂದು ತಿಂಗಳು ಕಾಲಾವಕಾಶ ಬೇಕಾಗಬಹುದು ಎಂದು ಅವರು ತಿಳಿಸಿದರು.













Click it and Unblock the Notifications